ಮಳೆ ಸುರಿದರೆ ಮಾತ್ರ ಈ ನದಿಯಲ್ಲಿ ನೀರು, ಆದ್ರೆ ನೀರು ಮಾತ್ರ ಉಪ್ಪುಪ್ಪು! ಎಲ್ಲಿ?

| Updated By:

Updated on: May 30, 2020 | 7:04 AM

ವಿಜಯಪುರ: ಜೂನ್ ತಿಂಗಳು ಬಂದರೆ ಸಾಕು ಎಲ್ಲೆಡೆ ಒಂಥರಾ ಸಡಗರ ಸಂಭ್ರಮ ಮನೆ ಮಾಡುತ್ತದೆ. ಬಿರು ಬೇಸಿಗೆಗೆ ಬೈ ಹೇಳಿ ಮುಂಗಾರಿಗೆ ಹಾಯ್ ಹೋಳೊ ಖುಷಿಯದು. ಜೂನ್ ಮೊದಲ ವಾರದಲ್ಲಿ ಸುರಿವ ಮಳೆ ಭೂರಮೆಯನ್ನು ರಮಿಸುವ ಇನಿಯನಂತೆ, ವಿರಹ ವೇದನೆಯಿಂದ ಬಳಲಿದ ಇಳೆ, ಮಳೆಗೆ ಮೆಲ್ಲನೆ ಅರಳುವ ಮಿಲನವದು. ಮಾರ್ಚ್ ಹಾಗೂ ಮೇನಲ್ಲಿ ಅಕಾಲಿಕವಾಗಿ ಕೆಲವೊಮ್ಮೆ ಮಳೆ ಸುರಿದರೂ ಸಹ ಸುಡಿ ಬಿಸಲ ಧಗೆಗೆ ತಡೆ ಹಾಕಿರಲ್ಲ. ಮುಂಗಾರು ಮಳೆ ಕೃಷಿಕರಿಗೆ ಜೀವನಾಡಿ: ಜೂನ್​ನಿಂದ ಆರಂಭವಾಗೋ ಮುಂಗಾರು […]

ಮಳೆ ಸುರಿದರೆ ಮಾತ್ರ ಈ ನದಿಯಲ್ಲಿ ನೀರು, ಆದ್ರೆ ನೀರು ಮಾತ್ರ ಉಪ್ಪುಪ್ಪು! ಎಲ್ಲಿ?
Follow us on

ವಿಜಯಪುರ: ಜೂನ್ ತಿಂಗಳು ಬಂದರೆ ಸಾಕು ಎಲ್ಲೆಡೆ ಒಂಥರಾ ಸಡಗರ ಸಂಭ್ರಮ ಮನೆ ಮಾಡುತ್ತದೆ. ಬಿರು ಬೇಸಿಗೆಗೆ ಬೈ ಹೇಳಿ ಮುಂಗಾರಿಗೆ ಹಾಯ್ ಹೋಳೊ ಖುಷಿಯದು. ಜೂನ್ ಮೊದಲ ವಾರದಲ್ಲಿ ಸುರಿವ ಮಳೆ ಭೂರಮೆಯನ್ನು ರಮಿಸುವ ಇನಿಯನಂತೆ, ವಿರಹ ವೇದನೆಯಿಂದ ಬಳಲಿದ ಇಳೆ, ಮಳೆಗೆ ಮೆಲ್ಲನೆ ಅರಳುವ ಮಿಲನವದು. ಮಾರ್ಚ್ ಹಾಗೂ ಮೇನಲ್ಲಿ ಅಕಾಲಿಕವಾಗಿ ಕೆಲವೊಮ್ಮೆ ಮಳೆ ಸುರಿದರೂ ಸಹ ಸುಡಿ ಬಿಸಲ ಧಗೆಗೆ ತಡೆ ಹಾಕಿರಲ್ಲ.

ಮುಂಗಾರು ಮಳೆ ಕೃಷಿಕರಿಗೆ ಜೀವನಾಡಿ:
ಜೂನ್​ನಿಂದ ಆರಂಭವಾಗೋ ಮುಂಗಾರು ಸೀಜನ್ ಜಗಕೆ ಅನ್ನ ನೀಡುವ ಕೃಷಿಕರಿಗೂ ಜೀವನಾಡಿ. ಇನ್ನು ಮಳೆಯಾದರೆ ಕೇಳಬೇಕಾ? ಹಳ್ಳ ಕೊಳ್ಳ ತೊರೆಗಳು ತುಂಬಿ ಹರಿದು ಓಡೋಡಿ ನದಿ ಸೇರುವ ಬಗೆಯೇ ಬಲು ಸೊಬಗು. ಮಳೆಗಾದಲ್ಲಿ ಸಾಮಾನ್ಯವಾಗಿ ಎಲ್ಲ ನದಿಗಳಲ್ಲಿ ನೀರು ಹರಿಯೋದು ಸಹ ಕಾಮನ್. ಬಟ್ ಇಲ್ಲೊಂದು ನದಿಯಿದೆ. ಇಲ್ಲಿ ಮಳೆಯಾದರೆ ಮಾತ್ರ ನದಿಯಲ್ಲಿ ನೀರು ಹರಿಯುತ್ತದೆ. ಮಳೆ ನಿಂತರೆ ನದಿಯಲ್ಲಿ ನೀರು ಹರಿಯಲ್ಲಾ. ಅದುವೇ ವಿಜಯಪುರ ಜಿಲ್ಲೆಯ ಡೋಣಿ ನದಿ.

ಹಿಂದಿನ ಕಾಲದಲ್ಲಿ ಅವಿಭಜಿತ ವಿಜಯಪುರ ಬಾಗಲಕೋಟೆ ಜಿಲ್ಲೆಯನ್ನು ಪಂಚನದಿಗಳ ನಾಡೆಂದು ಕರೆಯಲಾಗುತ್ತಿತ್ತು. ವಿಜಯಪುರ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಗಳಾದ ಬಳಿಕ ಇಲ್ಲಿನ ಪಂಚ ನದಿಗಳೂ ಪ್ರತ್ಯೇಕವಾದವು. ಸದ್ಯ ಜಿಲ್ಲೆಯಲ್ಲಿ ಕೃಷ್ಣಾನದಿ, ಭೀಮಾನದಿ ಹಾಗೂ ಡೋಣಿ ನದಿ ಮಾತ್ರ ಇವೆ. ಮಲಪ್ರಭಾ ಹಾಗೂ ಘಟಪ್ರಭಾ ನದಿಗಳು ಬಾಗಲಕೋಟೆ ಜಿಲ್ಲೆಯಲ್ಲಿವೆ.

ಡೋಣಿ ಹರಿದರೆ ಓಣಿಯೆಲ್ಲಾ ಕಾಳು:
ಡೋಣಿ ನದಿಯ ಬಗ್ಗೆ ಹೇಳೋದಾದರೆ ಡೋಣಿ ಹರಿದರೆ ಓಣಿಯೆಲ್ಲಾ ಕಾಳು ಎಂಬ ಮಾತಿತ್ತು. ಇದೇ ಡೋಣಿ ನದಿ ಪಾತ್ರದಲ್ಲಿ ಉತ್ತಮ ಜೋಳ ಗೋಧಿ ಕಡಲೆ ಸೂರ್ಯಕಾಂತಿ ಸೇರಿದಂತೆ ಇತರೆ ಬೆಳೆಗಳು ಹುಲುಸಾಗಿ ಬೆಳೆಯುತ್ತಿದ್ದವು. ಆದ ಕಾರಣ ಡೋಣಿ ಹರಿದರೆ ಓಣಿಯೆಲ್ಲಾ ಕಾಳು ಎಂಬ ಮಾತು ಇತ್ತು. ಆದರೆ ಈಗಾ ಡೋಣಿ ಹರಿದರೆ ಕಣ್ಣಿರು ಎಂಬಂತಾಗಿದೆ. ಇನ್ನೂ ಒಂದು ವಿಶೇಷವೆಂದರೆ ಮಳೆಯಾಗುವಾಗ ಮಾತ್ರ ನದಿಯಲ್ಲಿ ನೀರಿರುತ್ತದೆ. ಮಳೆ ನಿಂತರೆ ಸಾಕು ನದಿಯಲ್ಲಿ ನೀರು ನಿಂತು ಹೋಗುತ್ತದೆ.

ನದಿಯ ನೀರು ಉಪ್ಪು:
ಮಳೆಯಾದರೆ ಮಾತ್ರ ಡೋನಿಯಲ್ಲಿ ನೀರು ಹರಿಯುತ್ತದೆ. ಹರಿಯುವ ನದಿಗೆ ಇದಕ್ಕೆ ದಿಕ್ಕಿಲ್ಲ. ದಿಸೆಯೂ ಇಲ್ಲ. ಮಳೆ ಬಂದರೆ ಸಾಕು ಈ ಹೊಳೆ ತೀರದ ಗ್ರಾಮಸ್ಥರು ಹೆದರುತ್ತಾರೆ. ಇನ್ನು ಈ ನೀರನ್ನು ಕುಡಿದರೆ ಮುಗಿದೇ ಹೋಯ್ತು. ಜನ ಮುಖ ಕಿವಚುತ್ತಾರೆ. ನದಿಯ ನೀರು ಉಪ್ಪಾಗಿರುವುದೇ ಇದಕ್ಕೆ ಕಾರಣ. ಮಳೆ ಬಂದರೆ ಸಾಕು ಈ ನದಿ ತೀರದ ಗ್ರಾಮಸ್ಥರು ಹೆದರುತ್ತಾರೆ. ಪ್ರತಿ ಬಾರಿ ಮಳೆ ಬಂದಾಗ ದಿಕ್ಕು ದಿಸೆಯಲ್ಲದೆ ಹರಿಯುವ ಈ ನದಿ ಬೇಕಾಬಿಟ್ಟಿಯಾಗಿ ತನ್ನ ಪಾತ್ರ ಬದಲಿಸುತ್ತದೆ. ಇದಕ್ಕೆ ನಿರ್ಧಿಷ್ಠವಾದ ನದಿ ಪಾತ್ರವಿಲ್ಲ. ಹಲವೆಡೆ ಹಲವಾರು ಗ್ರಾಮಗಳ ಮನೆಗಳಿಗೆ ನೀರು ನುಗ್ಗಿದರೆ, ಬಹುತೇಕ ಕಡೆ ನದಿ ತೀರದ ಜಮೀನುಗಳನ್ನು ಮುಳುಗಡೆ ಮಾಡುತ್ತದೆ. ಜೊತೆಗೆ ಆ ಹೊಲದಲ್ಲಿರುವ ಫಲವತ್ತಾದ ಮಣ್ಣನ್ನೂ ತೆಗೆದುಕೊಂಡು ಹರಿದು ಮುಂದೆ ಸಾಗುತ್ತದೆ.

ಸಮುದ್ರದ ನೀರಿನ ರುಚಿ ಹೊಂದಿರುವ ನದಿ:
ನೆರೆಯ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಉಮರಾಣಿ ಬಳಿ ಹುಟ್ಟುವ ಈ ನದಿ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಬಳಿ ರಾಜ್ಯವನ್ನು ಪ್ರವೇಶಿಸುತ್ತದೆ. ಸಮುದ್ರದ ನೀರಿನ ರುಚಿ ಹೊಂದಿರುವ ನದಿಯಿದು. ಈ ನದಿ ಬರದ ನಾಡು, ಬಸವನ ಬೀಡು, ಶರಣರ ನಾಡಾಗಿರುವ ವಿಜಯಪುರ ಜಿಲ್ಲೆಯಲ್ಲಿ ಹರಿಯುತ್ತದೆ.

ವಿಜಯಪುರ ಜಿಲ್ಲೆಯಲ್ಲಿ 36 ಗ್ರಾಮಗಳ ಮೂಲಕ ಸುಮಾರು 158 ಕಿಲೋ ಮೀಟರ್ ಹರಿಯುವ ಈ ನದಿ ಹಲವಾರು ಬಾರಿ ಜನ ಮತ್ತು ಜಾನುವಾರುಗಳನ್ನು ಬಲಿ ಪಡೆದಿದೆ. ಆದರೆ, ಈ ನದಿ ಉಕ್ಕಿ ಹರಿದರೆ ರೈತರು ಹೆದರಲು ಪ್ರಮುಖ ಕಾರಣ ನದಿ ತನ್ನ ನೀರು ಹರಿಯುವ ಪಾತ್ರವನ್ನು ಆಗಿಂದಾಗ ಬದಲಿಸುವ ಪರಿ. ಜಮೀನಿನಲ್ಲಿ ಬೆಳೆದ ಬೆಳೆ ಕೊಚ್ಚಿಕೊಂಡು ಹೋಗುವ ಆತಂಕ. ಕೈಗೆ ಬಂದ ತುತ್ತು ಬಾಯಿಗೆ ಬಾರದ ದುಸ್ಥಿತಿಯಿಂದಾಗಿ ಅನ್ನದಾತರ ಪಾಲಿಗೆ ಇದು ಶಾಪವಾಗಿದೆ.

ಉಪ್ಪು ನದಿ ಎಂದೇ ಹೆಸರು:
ಸಮುದ್ರದ ನೀರು ಉಪ್ಪು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ, ರಾಜ್ಯದಲ್ಲಿ ಅದರಲ್ಲೂ ಬಸವನಾಡಿನಲ್ಲಿ ಹರಿಯುವ ಈ ನದಿ ನೀರು ಉಪ್ಪಿನಂಶವನ್ನು ಹೊಂದಿರುವ ಪರಿಣಾಮ ಉಪ್ಪು ನದಿ ಎಂದೇ ಹೆಸರಾಗಿದೆ. ಈ ನದಿಯಲ್ಲಿ ತುಂಬಿರುವ ಅಪಾರ ಪ್ರಮಾಣದ ಹೂಳು ಹಾಗೂ ನದಿಯ ಒತ್ತೂವರಿ ಕಾರಣ ಡೋಣಿ ನದಿ ನದಿ ಬೇಕಾಬಿಟ್ಟಿ ಹರಿಯಲು ಪ್ರಮುಖ ಕಾರಣವಾಗಿದೆ. ನದಿ ಪೂರ್ಣ ಹೂಳು ತುಂಬಿರುವ ಕಾರಣ ನೀರು ನಿಲ್ಲುತ್ತಿಲ್ಲಾ. ಜೊತೆಗೆ ಜಿಲ್ಲೆಯಲ್ಲಿಯೇ ಬಿದ್ದ ಮಳೆಯ ನೀರು ಮಾತ್ರ ನದಿಯ ಒಡಲಲ್ಲಿ ಹರಿಯುತ್ತದೆ.

ಮೊದಲೇ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆ. ಕಡಿಮೆ ಬಿದ್ದ ಮಳೆಯ ನೀರು ಹೂಳಿನಿಂದ ನದಿಯಲ್ಲಿ ನಿಲ್ಲದೇ ಮನಸೋಯಿಚ್ಛೆ ಕಂಡ ಕಂಡಲ್ಲಿ ಹರಿದು ಖಾಲಿಯಾಗುತ್ತದೆ. ಈ ನದಿಯ ಹೂಳೆತ್ತುವ ವಿಚಾರ ಹಲವಾರು ದಶಕಗಳಿಂದ ಪ್ರಾಯೋಗಿಕವಾಗಿ ಯೋಜನೆಗಳು ಜಾರಿಯಾಗಿವೆಯಾದರೂ ಅವು ಕೇವಲ ಹೆಸರಿಗಷ್ಟೇ ಸೀಮಿತವಾಗಿದೆ.

ಈ ನದಿಯ ಪಕ್ಕದಲ್ಲಿರುವ ಕಪ್ಪು ಮಣ್ಣು ನದಿ ನೀರನ್ನು ಸೇರುತ್ತದೆ. ಈ ಮಣ್ಣಿನಲ್ಲಿ ಲವಣಾಂಶ ಇರುವುದರಿಂದ ಆ ನೀರು ಉಪ್ಪಿನಾಂಶ ಹೊಂದಿದೆ. ಜಗತ್ತಿನ ಬಹುತೇಕ ನದಿಯ ನೀರನ್ನು ಕುಡಿಯಬಹುದಾದರೂ ಈ ಡೋಣಿ ನದಿ ನೀರು ಕುಡಿಯಲೂ ಯೋಗ್ಯವಿಲ್ಲದಿರುವುದು ರೈತರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನಾದರೂ ಆಳುವ ಸರ್ಕಾರ ಡೋಣಿ ನದಿ ಹೂಳೆತ್ತಲು ಹಾಗೂ ಒತ್ತೂವರಿ ತೆರೆವು ಮಾಡಲು ಮನಸ್ಸು ಮಾಡಬೇಕಿದೆ.