
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಾಲ್ಕು ದಿನದಿಂದ ಶಿಕ್ಷಕರ ವಿಷಯವನ್ನು ಮುಂದಿಟ್ಟುಕೊಂಡು ಒಂದಲ್ಲ ಒಂದು ಹೋರಾಟ ಮಾಡುತ್ತಿದ್ದಾರೆ. ಮೊದಲ ದಿನ ಮಕ್ಕಳ ಬಗ್ಗೆ ಟ್ವೀಟ್ ಮಾಡಿದ ಕುಮಾರಸ್ವಾಮಿ, ಎರಡನೇ ದಿನ ವಿದ್ಯಾಗಮ ಕಾರ್ಯಕ್ರಮ ವಿರುದ್ಧ ದನಿ ಎತ್ತಿದ್ದರು. ಅ ದಿನ ಒಂದು ಹೆಜ್ಜೆ ಮಂದು ಹೋಗಿ, ವಿದ್ಯಾಗಮ ಕಾರ್ಯಕ್ರಮ ನಿಲ್ಲಿಸದಿದ್ದರೆ, ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡುವುದಾಗಿ ಬೆದರಿಕೆ ಹಾಕಿದ್ದರು.
ಶಿಕ್ಷಕರ ಬಗೆಗಿನ ಕುಮಾರಸ್ವಾಮಿ ಪ್ರೀತಿಗೆ ಕಾರಣವೇನು?
ಅದೇ ದಿನ ಮಧ್ಯಾಹ್ನ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಶಕ್ತಿ ತೋರಿಸಿದ ಕುಮಾರಸ್ವಾಮಿ ಶಿಕ್ಷಕರಿಗೆ ದಸರಾ ರಜೆ ಕೊಡಬೇಕೆಂದು ಮತ್ತೆ ದನಿ ಎತ್ತಿದ್ದರು. ಪ್ರತಿ ಬಾರಿಯೂ, ಅವರು ಎತ್ತಿದ ಎಲ್ಲ ವಿಷಯಕ್ಕೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಂದಿಸಿ ಅವರು ಹೇಳಿದ್ದನ್ನು ಕೂಡಲೇ ಜಾರಿಗೆ ತಂದಿದ್ದಾರೆ.
ಆದರೆ, ಕುಮಾರಸ್ವಾಮಿಯವರ ಶಿಕ್ಷಕರ ಬಗೆಗಿನ ಪ್ರೀತಿಗೆ ಕಾರಣವೇನು? ಅವರು ಹೊರ ಜಗತ್ತಿಗೆ ಏನೇ ಹೇಳಲಿ, ಅಸಲಿನಲ್ಲಿ ಅವರ ಈ ಹೋರಾಟಕ್ಕೆ ಮತ್ತು ಶಿಕ್ಷಕರ ಮೇಲಿನ ಪ್ರೀತಿಗೆ ಕಾರಣ ಒಂದೇ: ಅದು ಎಮ್ ಎಲ್ ಸಿ ಚುನಾವಣೆ.
ಅದೂ ಈ ಬಾರಿ ಚುನಾವಣೆಯನ್ನು ಅವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದಕ್ಕೆ ಒಂದು ಕಾರಣವಿದೆ. ದೇವೇಗೌಡರ ಕುಟುಂಬಕ್ಕೆ ಹತ್ತಿರದವರಾದ ವಕೀಲ, ಎ.ಪಿ. ರಂಗನಾಥ ಎಮ್ ಎಲ್ ಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ, ಅದೂ ಕೂಡ ಒಂದು ಕಾಲದಲ್ಲಿ ಗೌಡರ ಕುಟುಂಬಕ್ಕೆ ತುಂಬಾ ಹತ್ತಿರವಾಗಿದ್ದ, ಆದರೆ ಈಗ ಕಮಲ ಪಾಳಯದಿಂದ ಚುನಾವಣೆ ಸ್ಪರ್ಧಿಸುತ್ತಿರುವ ಪುಟ್ಟಣ್ಣ ಎದುರು.
ಪುಟ್ಟಣ್ಣರನ್ನು ಮುಗಿಸಲೇಬೇಕೆಂದು ತೀರ್ಮಾನಿಸಿದಂತಿದೆ!
ತಮ್ಮ ಕುಟುಂಬಕ್ಕೆ ಸೆಡ್ಡು ಹೊಡೆದ ಯಾರನ್ನೂ ರಾಜಕೀಯದಲ್ಲಿ ಉನ್ನತ ಸ್ಥಾನದಲ್ಲಿ ಕಾಣಲು ಇಚ್ಚಿಸದ ಗೌಡರ ಪಾಳಯವು ಪುಟ್ಟಣ್ಣ ಅವರನ್ನು ಮುಗಿಸಲೇ ಬೇಕೆಂದು ತೀರ್ಮಾನಿಸಿದಂತಿದೆ. ಈ ನಡುವೆ, ಹಲವಾರು ತಿಂಗಳುಗಳಿಂದ ತಮ್ಮ ಹತ್ತಿರದ ಶಿಕ್ಷಕರನ್ನು ಮತದಾರ ಪಟ್ಟಿಗೆ ಸೇರಿಸಿ ತಯಾರಾಗಿರುವ ರಂಗನಾಥ್, ಪುಟ್ಟಣ್ಣ ಅವರನ್ನು ಚುನಾವಣಾ ಕಣದಲ್ಲಿ ಮುಗಿಸಲೇ ಬೇಕೆಂದು ತೀರ್ಮಾನಿಸಿದಂತಿದೆ.
ರಂಗನಾಥ್ ಅವರನ್ನು ಹೇಗಾದರೂ ಮಾಡಿ ದಡ ಮುಟ್ಟಿಸಲು ಪಣ ತೊಟ್ಟಂತಿರುವ ಕುಮಾರಸ್ವಾಮಿ, ಎಮ್ ಎಲ್ ಸಿ ಚುನಾವಣೆ ಮುಗಿಯುವವರೆಗೂ ಶಿಕ್ಷಕರ ವಿಷಯವನ್ನು ಮುಂದಿಟ್ಟುಕೊಂಡು ಹೋರಾಡುವುದು ನಿಶ್ಚಿತವಾಗಿದೆ.