ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹದ್ದೂರ ಶಾಸ್ತ್ರೀ ಸಾಗರಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.ಹೆಚ್ಚಿನ ಒಳ ಹರಿವಿನ ಕಾರಣ ಶುಕ್ರವಾರ ಬೆಳಗ್ಗೆ ಜಲಾಶಯದ ಎಲ್ಲ 26 ಕ್ರಸ್ಟ್ ಗೇಟ್ ಗಳನ್ನು ತೆರದು ಸುಮಾರು 1.50 ಲಕ್ಷ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ಮಹಾರಾಷ್ಟ್ರದ ಜಲಾಶಯಗಳಿಂದಲೂ ಅಧಿಕ ಪ್ರಮಾಣ ನೀರು ಹರಿದು ಬರುತ್ತಿರುವ ಕಾರಣ ಒಳಹರಿವು ಹೆಚ್ಚಾಗಿದೆ. ಸದ್ಯ ಜಲಾಶಯದಲ್ಲಿ 97.27 ಟಿಎಂಸಿ ನೀರು ಸಂಗ್ರಹವಾಗಿದೆ. ಇಂದು ಸಂಜೆಯವರೆಗೆ ಒಳಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಸಂಜೆ 2 ಲಕ್ಷ ಕ್ಯೂಸೆಕ್ ನೀರು ಹರಿಬಿಡುವ ಸಾಧ್ಯತೆ ಇದೆ.
ಜಲಾಶಯ ಭರ್ತಿಗೆ ದಿನಗಣನೆ ಸಹ ಆರಂಭವಾಗಿದೆ. ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಈಗಾಗಲೇ 517.96 ಮೀಟರ್ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ 517.27 ಮೀಟರ್ ನೀರು ಸಂಗ್ರಹವಾಗಿತ್ತು.
ವಿದ್ಯುತ್ ಉತ್ಪಾದನೆ..
ಜಲಾಶಯದಲ್ಲಿ ನೀರು ಹೆಚ್ಚಾಗುತ್ತಿರುವ ಕಾರಣ ಕರ್ನಾಟಕ ವಿದ್ಯುತ್ ನಿಗಮದ ವತಿಯಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಸದ್ಯ 33,000 ಕ್ಯೂಸೆಕ್ ನೀರನ್ನು ಬಳಸಿಕೊಂಡು 215 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ವಿದ್ಯುತ್ ಉತ್ಪಾದನೆ ಬೇಡಿಕೆ ಹೆಚ್ಚಾದರೆ ರಾತ್ರಿ ಸಹ ಇನ್ನಷ್ಟು ನೀರು ಪಡೆದು ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ ಎಂದು ಕೆಬಿಜೆಎನ್ಎಲ್ ಹಾಗೂ ಕೆಪಿಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ
-ಅಶೋಕ ಯಡಳ್ಳಿ