ಕೊರೊನಾ ಲಸಿಕೆಯ ಬಗೆಗಿನ ಸುಳ್ಳು ಸುದ್ದಿ ತಡೆಗಟ್ಟಲು ಫೇಸ್ಬುಕ್ ಸಂಸ್ಥೆ ಹೊಸ ಅಸ್ತ್ರ ಪ್ರಯೋಗಿಸಿದೆ. ಕೊವಿಡ್ ಲಸಿಕೆಯ ತಪ್ಪು ಮಾಹಿತಿಗಳನ್ನು ಫೇಸ್ಬುಕ್ನಿಂದ ತೆಗೆದುಹಾಕುವುದಾಗಿ ಹೇಳಿದೆ. ಕಳೆದ ಅಕ್ಟೋಬರ್ನಲ್ಲಿ ಆಲ್ಫಾಬೆಟ್ ಇಂಕ್ (ಗೂಗಲ್) ಸಂಸ್ಥೆ ಯೂಟ್ಯೂಬ್ ಕುರಿತಾಗಿ ಇದೇ ನಿರ್ಧಾರವನ್ನು ತಾಳಿತ್ತು.
ಸಾರ್ವಜನಿಕ ವೇದಿಕೆಯಲ್ಲಿ ಹಲವು ಆರೋಗ್ಯ ತಜ್ಞರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದು, ಫೇಸ್ಬುಕ್ ನೀತಿಗಳನ್ನು ಮೀರುವ ಅಂತಹ ವಿಚಾರಗಳನ್ನು ತೆಗೆದುಹಾಕುವುದಾಗಿ ಫೇಸ್ಬುಕ್ ಹೇಳಿದೆ. ಕೊರೊನಾ ಲಸಿಕೆಯ ಬಗ್ಗೆ ಹರಿದಾಡುವ ತಪ್ಪು ಮಾಹಿತಿಗಳು ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಫೇಸ್ಬುಕ್ ಅಭಿಪ್ರಾಯಪಟ್ಟಿದೆ.
ಫೈಜರ್ ಮತ್ತು ಮಾಡೆರ್ನಾ ಲಸಿಕೆ ತಯಾರಿಕಾ ಸಂಸ್ಥೆಗಳು ಅಮೆರಿಕ ಬಳಿ, ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿವೆ. ಫೈಜರ್ ಲಸಿಕೆಯ ಬಳಕೆಗೆ ಬುಧವಾರ ಅನುಮತಿ ಸೂಚಿಸಿರುವ ಬ್ರಿಟನ್, ಲಸಿಕೆ ಹಂಚಿಕೆಯಲ್ಲಿ ಮುಂಚೂಣಿಯಲ್ಲಿರುವ ಆಸಕ್ತಿ ತೋರಿದೆ.
ಈ ಸಂದರ್ಭದಲ್ಲಿ ವಿವಿಧ ಸಿದ್ಧಾಂತದ ಹಿನ್ನೆಲೆಯ ಲಸಿಕೆ ವಿರೋಧಿ ಪೋಸ್ಟ್ಗಳು ಫೇಸ್ಬುಕ್ನಲ್ಲಿ ವೈರಲ್ ಆಗಿದ್ದನ್ನು ಸಂಶೋಧಕರು ಗುರುತಿಸಿದ್ದಾರೆ. ಫಸ್ಟ್ ಡ್ರಾಫ್ಟ್ ಅಧ್ಯಯನದ ಪ್ರಕಾರ, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ನಡೆದ ಶೇ. 84ರಷ್ಟು ಸಂವಹನವು ಕೊವಿಡ್ ಲಸಿಕೆ ಕುರಿತದ್ದಾಗಿದೆ.
ಲಸಿಕೆ ಸುರಕ್ಷತೆ, ಅದರ ಪರಿಣಾಮಗಳು, ಲಸಿಕೆಗೆ ಬಳಸಿರುವ ಅಂಶಗಳು, ಲಸಿಕೆಯ ಅಡ್ಡಪರಿಣಾಮಗಳು ಇತ್ಯಾದಿ ಸುಳ್ಳು ಸುದ್ದಿಗಳನ್ನು ಹೊರಹಾಕುವುದಾಗಿ ಫೇಸ್ಬುಕ್ ತಿಳಿಸಿದೆ. ಹಾಗೆಂದು ರಾತ್ರೋರಾತ್ರಿ ಈ ಕೆಲಸ ಮಾಡಿ ಮುಗಿಸಲು ಸಾಧ್ಯವಿಲ್ಲ ಎಂದಿರುವ ಫೇಸ್ಬುಕ್, ಯಾವತ್ತಿನಿಂದ ನಿಯಮಗಳು ಕಾರ್ಯರೂಪಕ್ಕೆ ಬರಲಿವೆ ಎಂದು ತಿಳಿಸಿಲ್ಲ.
ಕೊರೊನಾ ಲಸಿಕೆಯ ಬಗ್ಗೆ ಅಧೈರ್ಯ ಮೂಡಿಸುವ ಜಾಹೀರಾತುಗಳನ್ನೂ ನಿಷೇಧಿಸುವುದಾಗಿ ಫೇಸ್ಬುಕ್ ಕಳೆದ ಅಕ್ಟೋಬರ್ನಲ್ಲಿ ಹೇಳಿತ್ತು. ಅದರಂತೆ ಲಸಿಕೆ ವಿರೋಧಿ ಫೇಸ್ಬುಕ್ ಪೇಜನ್ನು ಮತ್ತು ಕೆಲವು ಖಾಸಗಿ ಗುಂಪುಗಳನ್ನು ಫೇಸ್ಬುಕ್ನಿಂದ ತೆಗೆದುಹಾಕಿತ್ತು.
Published On - 6:43 pm, Fri, 4 December 20