ಚಿಕ್ಕಮಗಳೂರು: ತಾಲೂಕಿನ ಮಸಗಲಿ ಅರಣ್ಯದಲ್ಲಿ ಒತ್ತುವರಿ ಮಾಡಿ ಬೆಳೆದಿದ್ದ ಕಾಫಿ ತೋಟಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಕ್ರವಾರ ತೆರವು ಮಾಡಿದ್ದಾರೆ. ಮಸಗಲಿ, ಹೇಮರಳ್ಳಿ, ಹಡಗಲುಗದ್ದೆ, ಹೊಸ್ಕೆರಿ ಕಾಲೊನಿಯ 13 ರೈತರಿಗೆ ಸೇರಿದ್ದ 24 ಎಕರೆಯಷ್ಟು ಕಾಫಿ ತೋಟದಲ್ಲಿದ್ದ ಕಾಫಿ, ಕಾಳುಮೆಣಸು, ಬಾಳೆ ಮತ್ತಿತ್ತರ ಗಿಡಗಳನ್ನು ಸಿಬ್ಬಂದಿ ಕಡಿದು ಹಾಕಿದ್ದಾರೆ.
ಫಸಲುಬಿಟ್ಟು ಹಸಿರಿನಿಂದ ಕಂಗೊಳಿಸುತ್ತಿದ್ದ ಕಾಫಿ ಗಿಡಗಳನ್ನು ಕತ್ತರಿಸಿ ಹಾಕುತ್ತಿದ್ದ ದೃಶ್ಯ ನೋಡಲಾಗದೆ ರೈತರ ಕುಟುಂಬಸ್ಥರು ಕಣ್ಣೀರಿಟ್ಟರು. ನಿಮ್ಮ ಕೈ ಮುಗೀತಿವಿ, ದಮ್ಮಯ್ಯ, ಕಾಫಿ ಗಿಡಗಳನ್ನು ಕಡಿಯಬೇಡಿ ಅಂತಾ ಮಹಿಳೆಯರು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಪೊಲೀಸ್ ರಕ್ಷಣೆಯೊಂದಿಗೆ ತೆರವು ಕಾರ್ಯಾಚರಣೆ ನಡೆಸಿದರು.
ಈ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಂತ್ರಸ್ಥರು ವಾಗ್ವಾದಕ್ಕೆ ಇಳಿದರು. ಶ್ರೀಮಂತರ ಒತ್ತುವರಿ ತೆರವು ಮಾಡದೇ ಹೊಟ್ಟೆಪಾಡಿಗೆಂದು ಬಡವರು ಮಾಡಿಕೊಂಡಿರುವ ಸಣ್ಣಪುಟ್ಟ ಒತ್ತುವರಿಯನ್ನ ತೆರವು ಮಾಡಲು ಬಂದಿದ್ದೀರಿ ಎಂದು ಅವರನ್ನ ತರಾಟೆಗೆ ತೆಗೆದುಕೊಂಡರು. ಆದರೆ, ಸುಪ್ರೀಂ ಕೋರ್ಟ್ ಆದೇಶದಂತೆ ತೆರವು ಮಾಡಿ ವರದಿ ಸಲ್ಲಿಸುವುದು ಅನಿವಾರ್ಯವಾಗಿದೆ. ಪರಿಸ್ಥಿತಿ ಅರ್ಥ ಮಾಡಿಕೊಂಡು ತೆರವು ಮಾಡಲು ಸಹಕಾರ ನೀಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಜನರ ಮನವೊಲಿಸುವ ಪ್ರಯತ್ನ ಮಾಡಿದರು.
ಮರ ಕಡಿದಿದ್ದು ಸರಿಯೇ?
ಮಸಗಲಿ ಮೀಸಲು ಅರಣ್ಯದಲ್ಲಿ 1,300 ಎಕರೆಯಷ್ಟು ಒತ್ತುವರಿಯಾಗಿದ್ದು, ಅದರಲ್ಲಿ 1,002 ಎಕರೆಯಷ್ಟು ಜಾಗ ಶ್ರೀಮಂತರ ಪಾಲಾಗಿದೆ. ಆದರೆ, ದಾಖಲೆಗಳು ಇಲ್ಲ ಎಂಬ ಕಾರಣಕ್ಕೆ 211 ಬಡ ಕುಟುಂಬಗಳು ಮಾಡಿರುವ 376 ಎಕರೆಯನ್ನು ತೆರವು ಮಾಡಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಒತ್ತುವರಿ ತೆರವು ಮಾಡುವುದಾದರೆ ಮೊದಲು ಅರಣ್ಯ ಇಲಾಖೆ ಬೇಲಿ ನಿರ್ಮಿಸಿ ತನ್ನ ಗಡಿ ಗುರುತಿಸಿಕೊಳ್ಳಲಿ. ಇದನ್ನು ಬಿಟ್ಟು ಬೆಳೆದುನಿಂತ ಗಿಡಮರಗಳನ್ನು ಕಡಿದು ಹಾಕುವುದು ಸರಿಯೇ? ಸುಪ್ರೀಂ ಕೋರ್ಟ್ ಮರಗಳನ್ನು ಕಡಿದುಹಾಕಲು ಹೇಳಿದೆಯೇ ಎಂದು ಸ್ಥಳೀಯರು ಪ್ರಶ್ನಿಸಿದರು.
ಈ ಬಗ್ಗೆ ಮಾತಾನಾಡಿದ ಜಮೀನು ಕಳೆದುಕೊಂಡ ಎಂ.ಎಲ್.ಬಸವರಾಜ್ ಬಡವರು ಹೊಟ್ಟೆಪಾಡಿಗೆ ಮಾಡಿಕೊಂಡಿರುವ ಜಮೀನು ಉಳಿಸಿಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದೆವು. ಬದಲಿ ಜಾಗವನ್ನಾದರೂ ಕೊಡಲು ಕೇಳಿದೆವು. ಆದರೆ, ಅಧಿಕಾರಿಗಳು ಯಾವುದಕ್ಕೂ ಸ್ಪಂದಿಸಲಿಲ್ಲ. ನಿವೇಶನ, ಮನೆ ಕಟ್ಟಿಕೊಳ್ಳಲು 5 ಲಕ್ಷ ಕೊಡುವುದಾಗಿ ಹೇಳಿದ್ದಾರೆ. ಮಳಲೂರು, ಇಂದಾವರದಲ್ಲಿ ಜಾಗ ಕೊಡಲು ಕೇಳಿದರೂ ಸ್ಪಂದಿಸಲಿಲ್ಲ. ಪರಿಹಾರಕ್ಕೆ 30 ಕೋಟಿ ಹಣವಿದ್ದರೂ ಕೊಟ್ಟಿಲ್ಲ ಎಂದರು.
ಬಡವರು ಬ್ಯಾಂಕ್ನಿಂದ ಸಾಲ ಪಡೆದು ಬೆಳೆಸಿದ್ದ ಕಾಫಿ ಗಿಡಗಳನ್ನು ಅರಣ್ಯ ಇಲಾಖೆಯವರು ಮಾನವೀಯತೆ ಇಲ್ಲದೆ ಕಡಿದು ಹಾಕಿದ್ದಾರೆ. ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಸ್ಪೀಕರ್ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿಗೆ ದೂರು ನೀಡಿರುವುದಾಗಿ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ ತಿಳಿಸಿದ್ದಾರೆ.
Published On - 10:05 am, Sat, 4 July 20