ಧಾರವಾಡ: ಕೊರೊನಾ ಮಹಾಮಾರಿ ಈ ಬಾರಿ ಗಣೇಶೋತ್ಸವಕ್ಕೂ ಬಿಸಿ ಮುಟ್ಟಿಸಿದೆ. ಈ ಬಾರಿ ಯಾವುದೇ ಉತ್ಸವಕ್ಕೆ ಅವಕಾಶ ನೀಡುವುದಿಲ್ಲ ಅಂತಾ ರಾಜ್ಯ ಸರಕಾರ ಸ್ಪಷ್ಟವಾಗಿ ಹೇಳಿದೆ. ಹೀಗಾಗಿ ಗಣೇಶ ತಯಾರಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಧಾರವಾಡದ ವಿನಾಯಕ ಇದೀಗ ವಿದೇಶಕ್ಕೆ ಹಾರುತ್ತಿದ್ದಾನೆ.
ಆರಿಝೋನಾದತ್ತ ವಿನಾಯಕನ ಪಯಣ
ಅಮೆರಿಕದ ಆರಿಝೋನಾದಲ್ಲಿ ನೆಲಸಿರೋ ಕರ್ನಾಟಕದ ಕೃಷ್ಣ ಪುತುಕೋಡ ಅನ್ನೋರು ಪರಿಸರದ ಬಗ್ಗೆ ಕಾಳಜಿ ಹೊಂದಿದವರು. ಹೀಗಾಗಿ ಅವರಿಗೆ ಕಲಾವಿದ ಮಂಜುನಾಥ ಹಿರೇಮಠ ಅವರ ಪರಿಚಯವಾದ ಬಳಿಕ ಇವರು ತಯಾರಿಸಿರೋ ಪರಿಸರ ಸ್ನೇಹಿ ಗಣೇಶನ ವಿಗ್ರಹವನ್ನೇ ಖರೀದಿಸಿ ಪೂಜಿಸುತ್ತಾ ಬಂದಿದ್ದಾರೆ. ಬೆಂಗಳೂರಿನಲ್ಲಿರೋ ಅವರ ಗೆಳೆಯರು ಪಾರ್ಸಲ್ ಮಾಡಿ, ಪ್ರತಿ ವರ್ಷ ಕಾರ್ಗೋ ವಿಮಾನದ ಮೂಲಕ ಅಮೆರಿಕಕ್ಕೆ ಕಳಿಸುತ್ತಾರೆ.
14 ಇಂಚು ಎತ್ತರದ ಈ ಗಣೇಶನ ವಿಗ್ರಹ ಈಗಾಗಲೇ ಬೆಂಗಳೂರು ತಲುಪಿಯಾಗಿದೆ. ಅಲ್ಲಿಂದ ಇಷ್ಟರಲ್ಲಿಯೇ ಅಮೆರಿಕಕ್ಕೆ ಹಾರಲಿದ್ದಾನೆ. ಈ ಬಗೆಯ ಮಣ್ಣಿನ ಹಾಗೂ ಪರಿಸರ ಸ್ನೇಹಿ ವಿಗ್ರಹಗಳು ಅಲ್ಲಿ ಸಿಗದೇ ಇರೋದ್ರಿಂದ ಇಲ್ಲಿಂದಲೇ ಪ್ರತಿವರ್ಷ ತರಿಸಿಕೊಂಡು ಪೂಜಿಸುತ್ತಾರೆ.
ಈ ಬಾರಿ ಭಾರತದಲ್ಲಿಯೇ ಗಣೇಶನಿಗೆ ಉತ್ಸವದ ಭಾಗ್ಯ ಸಿಗೋದು ಅನುಮಾನ. ಅಂಥದ್ದರಲ್ಲಿ ಈ ಗಣೇಶನಿಗೆ ಮಾತ್ರ ವಿದೇಶಕ್ಕೆ ಹಾರೋ ಭಾಗ್ಯದೊಂದಿಗೆ ಪೂಜೆಯ ಭಾಗ್ಯವೂ ಸಿಕ್ಕಿದೆ.
Published On - 12:49 pm, Sat, 1 August 20