ವಿಶ್ವದ ಅತ್ಯಂತ ಸಿರಿವಂತರು ಎನಿಸಿಕೊಂಡ ಜೆಫ್ ಬೆಜೋಸ್, ಎಲಾನ್ ಮಸ್ಕ್ರನ್ನೂ ಮೀರಿಸುವಂಥ ದಾಖಲೆಯನ್ನು ಭಾರತದ ಉದ್ಯಮಿ ಗೌತಮ್ ಅದಾನಿ ಈ ವರ್ಷ ಮಾಡಿದ್ದಾರೆ. ಅದೇನು ಅಂತೀರಾ? ಬಂದರು ಉದ್ಯಮದಿಂದ ಪವರ್ ಪ್ಲಾಂಟ್ಗಳ ತನಕ ವ್ಯವಹಾರ ಹೊಂದಿರುವ ಗೌತಮ್ ಅದಾನಿ ಅವರ ಆಸ್ತಿಯು ಈ ವರ್ಷ 2021ರಲ್ಲಿ ಬೆಜೋಸ್, ಮಸ್ಕ್ಗಿಂತ ಹೆಚ್ಚು ಸಂಪತ್ತನ್ನು ಸೇರ್ಪಡೆ ಆಗುವಂತೆ ಮಾಡಿದೆ.
ಅಂದ ಹಾಗೆ ಗೌತಮ್ ಅದಾನಿ ಸಾರ್ವಜನಿಕವಾಗಿ ಮಾತನಾಡುವುದು ಅಪರೂಪ. ಅವರ ಆಸ್ತಿ ಮೌಲ್ಯವು 2021ರ ಆರಂಭದಲ್ಲಿ 1620 ಕೋಟಿ ಅಮೆರಿಕನ್ ಡಾಲರ್ ಇದ್ದದ್ದು 5000 ಕೋಟಿ ಅಮೆರಿಕನ್ ಡಾಲರ್ ದಾಟಿದೆ. ಇದು ಬ್ಲೂಮ್ಬರ್ಗ್ ಬಿಲಿಯನೇರ್ ಸೂಚ್ಯಂಕದಿಂದ ತಿಳಿದುಬಂದಿರುವ ಮಾಹಿತಿ. ಆ ಮೂಲಕ 2021ರಲ್ಲಿ ಅತಿ ಹೆಚ್ಚು ಸಂಪತ್ತು ಗಳಿಸಿದ ವ್ಯಕ್ತಿ ಎಂಬ ಕಿರೀಟ ಹೊತ್ತು, ಬೆಜೋಸ್ ಹಾಗೂ ಮಸ್ಕ್ ದಾಖಲೆ ಗಳಿಕೆಯನ್ನೂ ಅದಾನಿ ಮಂಕಾಗಿಸಿದ್ದಾರೆ.
ಅದಾನಿ ಸಮೂಹದ ಷೇರುಗಳಲ್ಲಿ ಒಂದನ್ನು ಹೊರತುಪಡಿಸಿ, ಉಳಿದವು ಈ ವರ್ಷ ಕನಿಷ್ಠ ಶೇಕಡಾ 50ರಷ್ಟು ಏರಿಕೆ ದಾಖಲಿಸಿವೆ. ಏಷ್ಯಾದ ಅತಿ ಶ್ರೀಮಂತ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಆಸ್ತಿಯಲ್ಲಿ 810 ಕೋಟಿ ಅಮೆರಿಕನ್ ದಾಲರ್ ಹೆಚ್ಚಾಗಿದೆ. ಅದಾನಿ ಸಮೂಹದ ಕಂಪೆನಿಗಳು ಬಹಳ ವೇಗವಾಗಿ ಉದ್ಯಮದ ವಿಸ್ತರಣೆ ಮಾಡುತ್ತಿವೆ. ಬಂದರು, ವಿಮಾನ ನಿಲ್ದಾಣಗಳು, ಡೇಟಾ ಸೆಂಟರ್ಗಳು ಮತ್ತು ಕಲ್ಲಿದ್ದಲು ನಿಕ್ಷೇಪಗಳು ಹೀಗೆ ಸೇರ್ಪಡೆ ಮಾಡುತ್ತಲೇ ಸಾಗುತ್ತಿದೆ. ಇನ್ನು ಆಸ್ಟ್ರೇಲಿಯಾದ ವಿವಾದಾತ್ಮಕ ಕಾರ್ಮೈಕೆಲ್ ಕಲ್ಲಿದ್ದಲು ಯೋಜನೆಯನ್ನೂ ಅವರು ಮುಂದುವರಿಸಿದ್ದಾರೆ.
ಮಾರ್ಕೆಟ್ ಸೈಕಲ್ನಲ್ಲಿ ಯಾವುದು ಪ್ರಮುಖವಾಗಿರುತ್ತದೋ ಅದನ್ನು ಅದಾನಿ ವಿಸ್ತರಿಕೊಳ್ಳುತ್ತಲೇ ಬರುತ್ತಿದೆ. ಈಗ ಡೇಟಾ ಸೆಂಟರ್ಗಳ ವ್ಯವಹಾರಕ್ಕೆ ಪದಾರ್ಪಣೆ ಮಾಡುವ ಮೂಲಕ ಈ ಗುಂಪು ತಂತ್ರಜ್ಞಾನ ವ್ಯವಹಾರದಲ್ಲಿ ಮುಂದಡಿ ಇಡುತ್ತಿದೆ ಎಂದು ನೈಕಾ ಅಡ್ವೈಸರಿ ಸರ್ವೀಸಸ್ ಸಿಇಒ ಸುನೀಲ್ ಚಂದ್ರಮಣಿ ಹೇಳಿದ್ದಾರೆ. 1 ಗಿಗಾವ್ಯಾಟ್ ಸಾಮರ್ಥ್ಯದ ಡೇಟಾ ಕೇಂದ್ರವನ್ನು ಭಾರತದಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಅದಾನಿ ಎಂಟರ್ಪ್ರೈಸ್ ಒಪ್ಪಂದಕ್ಕೆ ಸಹಿ ಹಾಕಿದೆ.
ಅದಾನಿ ಟೋಟಲ್ ಗ್ಯಾಸ ಲಿ. ಈ ವರ್ಷ ಶೇಕಡಾ 96ರಷ್ಟು ಏರಿಕೆಯಾಗಿದೆ. ಇನ್ನು ಅದಾನಿ ಎಂಟರ್ಪ್ರೈಸಸ್ ಶೇ 90, ಅದಾನಿ ಟ್ರಾನ್ಸ್ಮಿಷನ್ ಶೇ 79, ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಜೋನ್ಸ್ ಶೇ 52ಕ್ಕೂ ಹೆಚ್ಚು ಗಳಿಕೆ ಕಂಡಿದೆ. ಇನ್ನು ಅದಾನಿ ಗ್ರೀನ್ ಎನರ್ಜಿ ಕಳೆದ ವರ್ಷ ಶೇಕಡಾ 500ಕ್ಕೂ ಹೆಚ್ಚಯ ಏರಿಕೆ ಕಂಡ ಮೇಲೆ ಈ ವರ್ಷ ಇಲ್ಲಿಯ ತನಕ ಶೇ 12ರಷ್ಟು ಮೇಲೇರಿದೆ.
Published On - 6:49 pm, Fri, 12 March 21