ವಿಜಯಪುರ: ಹಾಯ್ ನಾನು ಗೋಲಗುಮ್ಮಟ. ನೂರಾರು ವರ್ಷಗಳ ಹಿಂದೆ ಅಚಲವಾಗಿ ನಿಂತಿರುವ ಆದಿಲ್ ಶಾಹಿಗಳ ಕುರುಹು ನಾನು. ಪಿಸುಗುಟ್ಟುವ ಗ್ಯಾಲರಿ, ಆದಿಲ್ ಶಾನ ಗೋರಿ ಕಟ್ಟಿದ ಸ್ಮಾರಕ, ಒಂದು ಬಾರಿ ಪಿಸುಗುಟ್ಟಿದರೆ ಏಳು ಬಾರಿ ಪ್ರತಿಧ್ವನಿಸುವ ಸ್ಮಾರಕವಲ್ವಾ ನೀನು? ಎಂದು ನೀವು ಪ್ರಶ್ನಿಸಿದರೆ ಖಂಡಿತಾ ಅದು ನಾನೇ ಅಂತಾ ನಾನು ಆನ್ಸರ್ ಮಾಡ್ತೀನಿ. ಆದರೆ ನಾನು ಪ್ರೀತಿ ಪ್ರೇಮಕ್ಕೆ ಸಾಕ್ಷಿಯಾಗಿ ಪ್ರೇಮಸೌಧವಾಗಿರುವೆ ಎಂಬುದು ಅನೇಕರಿಗೆ ಗೊತ್ತಿಲ್ಲ. ಆ ವಿಷಯ ಮತ್ತೊಮ್ಮೆ ನಿಮಗೆಲ್ಲಾ ಕೂಗಿ ಕೂಗಿ ಹೇಳ್ತೀನಿ.
ಸದ್ಯ ಯಾಕಪ್ಪಾ ನಾನು ನಿಮ್ಮ ಜೊತೆಗೆ ಮನಸ್ಸಲ್ಲಿರುವ ಭಾವನೆಗಳನ್ನು ಹಂಚ್ಕೊಳ್ತಿದ್ದೀನಿ ಅಂತಾ ಹೇಳ್ತೀನಿ. ನಾನು ಯಾವಾಗ ನಿರ್ಮಾಣವಾದೆ, ಹೇಗೆ ಕಾಣ್ತೀನಿ, ಯಾರು ನಿರ್ಮಾಣ ಮಾಡಿದರು ಎಂಬೆಲ್ಲಾ ಡೀಟೇಲ್ಸ್ ನಿಮಗೆ ಗೊತ್ತೇ ಇದೆ. ಅವೆಲ್ಲಾ ಕಥೆ ಹೇಳಿ ನಿಮಗೆ ಬೋರ್ ಮಾಡಲ್ಲ. ಡೈರೆಕ್ಟಾಗಿ ವಿಷಯಕ್ಕೆ ಬರ್ತೀದ್ದೀನಿ. ಈ ಹಾಳು ಕೊರೊನಾ ಬಂದು ನನಗೆ ಸಖತ್ ಬೋರಾಗಿದೆ. ಒಬ್ಬಂಟಿಯಾಗಿದ್ದೀನಿ ಅಂತಾ ಅನಸ್ತಿದೆ. ಯಾಕಾದ್ರೂ ಈ ಮಹಾಮಾರಿ ಬಂತಪ್ಪಾ ಅನಿಸ್ತಿದೆ. ನನ್ನ ಲೈಫ್ನಲ್ಲೇ ಇಂಥಾ ಸಂದರ್ಭ ಕಂಡಿಲ್ಲ.
ನೀವು ಬರದಿದ್ದಕ್ಕೆ ಫೀಲಿಂಗ್ ಸ್ಟಾರ್ಟ್ ಆಯ್ತು:
ಕೊರೊನಾ ಬಂದ ಕೂಡಲೇ ಇಡೀ ಜಗತ್ತೇ ಲಾಕ್ಡೌನ್ ಆಯ್ತು. ಇದಕ್ಕೂ ಮುನ್ನ ನನ್ನ ಒಡಲಲ್ಲಿ, ನನ್ನ ಸನೀಹದಲ್ಲಿ, ನನ್ನ ಆವಾಸದ ಆವರಣದಲ್ಲಿ ಸದಾ ಜನ ಜಂಗುಳಿ ತುಂಬಿರುತ್ತಿತ್ತು. ಅದ್ರೆ ಲಾಕ್ಡೌನ್ ಆದ ಕೂಡಲೇ ನನಗೂ ಸ್ವಲ್ಪ ರಿಲ್ಯಾಕ್ಸ್ ಸಿಕ್ಕಂತಾಯ್ತು. ಹತ್ತಾರು ವರ್ಷಗಳ ಕಾಲ ವಿವಿಧ ನಮೂನೆಯ ಜನರನ್ನು ಕಂಡೂ ಕಂಡು ಬೋರ್ ಆಗಿದ್ದ ನನಗೆ ಲಾಕ್ಡೌನ್ ಖುಷಿ ಕೊಟ್ಟಿತ್ತು. ಬಟ್ ಬರ್ತಾ ಬರ್ತಾ ಲಾಕ್ ಡೌನ್ ನನಗೆ ಬೋರ್ ಆಗ್ತಾ ಹೋಯ್ತು. ಎಲ್ಲವನ್ನಾ ಮಿಸ್ ಮಾಡ್ಕೋಳ್ತಿದೀನಿ ಅಂತಾ ಒಳಗೊಳಗೇ ಫೀಲಿಂಗ್ ಸ್ಟಾರ್ಟ್ ಆಯ್ತು.
ಎಲ್ಲರನ್ನೂ ಮಿಸ್ ಮಾಡ್ಕೋತಿದೀನಿ:
7 ಮಹಡಿಯ ನನ್ನನ್ನು ಏರಿ ಮೇಲೆ ಬಂದು ಕಿಚಾಯಿಸುತ್ತದ್ದವರೆಲ್ಲಾ ನನಗೆ ನೆನಪಾದ್ರು. ನನ್ನ ಮೈಮೇಲೆಲ್ಲಾ ಗೀಚುತ್ತಾ ತಮ್ಮ ಹೆಸರನ್ನು, ಪೇಮಿಗಳ ಹೆಸರನ್ನು, ತಂದೆ ತಾಯಿ ಅಥವಾ ಅವರಿಗಿಷ್ಟವಾದವರ ಹೆಸರನ್ನು ಕೆತ್ತಿ ಒಂಥರಾ ಖುಷಿ ಪಡುತ್ತಿದ್ದವನ್ನ ಹಾಗೂ ಎಲೆ ಅಡಿಕೆ, ಗುಟ್ಕಾ, ಮಾವಾ ಅಂದರೆ ತಂಬಾಕಿನಿಂದ ತಯಾರಿಸಿದ ಮಾದಕ ವಸ್ತು ತಿಂದು ಕಚಕ್ ಪಿಚಕ್ ಅಂತಾ ಉಗಿಯೋವ್ರೂ ನೆನಪಾದರು. ಇವರೆಲ್ಲರಿಂದ ನನಗೆ ಮುಕ್ತಿ ಕೊಟ್ಟಿದ್ದಕ್ಕೆ ನನಗೆ ಒಂದು ರೀತಿಲಿ ಸಂತೋಷ ಸಿಕ್ಕರೂ ನನ್ನ ಮೇಲೆ ಪ್ರೀತಿ ಇಟ್ಕೊಂಡು ನನ್ನನ್ನೇ ನೋಡಬೇಕೆಂದು ದೂರ ದೂರುಗಳಿಂದ ಬೇರೆ ಬೇರೆ ರಾಜ್ಯಗಳಿಂದ ಬರುತ್ತಿದ್ದ ಪ್ರವಾಸಿಗರನ್ನು, ವಿದೇಶಗಳಿಂದ ಬರುತ್ತಿದ್ದ ಟೂರಿಸ್ಟ್ ಗಳನ್ನು ನಾನು ಮಿಸ್ ಮಾಡ್ಕೋತ್ತಿದ್ದೀನಿ ಎಂದೆಲ್ಲಾ ನೋವಾಗ್ತಿದೆ.
ಮನಸ್ಸಿನಲ್ಲೇ ಸಾಕಷ್ಟು ಬಾರಿ ನಕ್ಕಿದ್ದೇನೆ:
ನಿತ್ಯ ಬೆಳ್ಳಂ ಬೆಳಿಗ್ಗೆ ನಗರ ವಾಸಿಗಳು ವಾಯುವಿಹಾರಕ್ಕೆ ನನ್ನ ಬಳಿ ಬರುತ್ತಿದ್ದರು. ವಾಕಿಂಗ್ ನೆಪದಲ್ಲಿ ಕಷ್ಟಸುಖ ಹಂಚಿಕೊಳ್ಳುತ್ತಿದ್ದರು. ಅವರ ಮಾತುಗಳಿಂದಲೇ ನನಗೆ ಜಗತ್ತಿನ ಆಗು ಹೋಗುಗಳು ತಿಳಿಯುತ್ತಿದ್ದವು.
ಇನ್ನು ಶುಗರ್ ಇದೆ ಅದನ್ನು ಕಂಟ್ರೋಲ್ ಮಾಡಬೇಕೆಂದು ವಾಕಿಂಗ್ಗೆ ಬರುವ ಕೆಲ ಅಂಕಲ್ಗಳು ವಾಕಿಂಗ್ ಮುಗಿಸಿ ಇಲ್ಲಿಯ ಕ್ಯಾಂಟೀನ್ನಲ್ಲಿ ಕದ್ದು ಟೀ, ಕಾಫಿ ಕುಡಿದು ಮನೆಗೆ ಹೋಗುತ್ತಿದ್ದರು. ಕಾಲೇಜಿನ ಕ್ಲಾಸ್ ಗಳಿಗೆ ಬಂಕ್ ಹೊಡೆದು ಬಂದ ಅದೆಷ್ಟೋ ಪ್ರೇಮಿಗಳು ನನ್ನ ಆವರಣದ ಹುಲ್ಲು ಹಾಸಿಗೆಯ ಮೇಲೆ ಕುಳಿತು ಪಿಸುಗುಡುತ್ತಿದ್ದರು. ಮರಗಳ ನಡುಗೆ ಕೈಕೈ ಹಿಡಿದುಕೊಂಡು ಸುತ್ತಾಡುತ್ತಿದ್ದರು. ನಿನಗಾಗಿ ನಾನೂ ಇಂಥಾ ಸ್ಮಾರಕ ನಿರ್ಮಾಣ ಮಾಡ್ತೀನಿ ಅಂತಾ ಹುಡುಗಾ ತನ್ನ ಲವ್ವರ್ ಗೆ ಹೇಳೋದನ್ನಾ ಕೇಳಿ ಮನಸ್ಸಿನಲ್ಲೇ ಸಾಕಷ್ಟು ಬಾರಿ ನಕ್ಕಿದ್ದೇನೆ.
ಇನ್ನು ಪಿಸುಗುಟ್ಟುವ ಗ್ಯಾಲರಿಯಲ್ಲಿ ಬಳಿ ಬಂದು ಲವ್ ಯೂ ಎಂದು ಕೂಗಿ ಹೇಳಿ ನಂತರ ಬರುತ್ತಿದ್ದ ಏಳು ಬಾರಿಯ ಪ್ರತಿಧ್ವನಿಯನ್ನು ಕೇಳಿ ಏಳು ಜನ್ಮಕ್ಕಾಗುವಷ್ಟು ಖುಷಿ ಪಡುತ್ತಿದ್ದವರನ್ನೂ ಕಂಡು ಆದಿಲ್ ಶಾಹಿ ಹಾಗೂ ರಂಭಾಳ ಪ್ರೇಮದ ನೆನಪನ್ನೂ ಮಾಡಿಕೊಂಡಿದ್ದೇನೆ. ಮಕ್ಕಳು ಮರಿಗಳೊಂದಿಗೆ ಬರುತ್ತಿದ್ದ ತಾಯಂದಿರರು ನನ್ನನ್ನು ತೋರಿಸಿ ಮಕ್ಕಳಿಗೆ ಕೈ ತುತ್ತು ಹಾಕುತ್ತಿದ್ದರು. ಬೇಸಿಗೆ ರಜೆಯಲ್ಲಂತೂ ನನ್ನಲ್ಲಿ ಪ್ರವಾಸಿದರೆ ಹಿಂಡೇ ತುಂಬಿ ತುಳುಕುತ್ತಿತ್ತು.
ನಮ್ಮ ರಾಜ್ಯದವರು, ಅನ್ಯ ರಾಜ್ಯದವರು ವಿದೇಶಿಗರು ಅಬ್ಬಾ ಎಷ್ಟೋಂದು ಜನರು ನನ್ನ ಮೀಟ್ ಮಾಡೋಕೆ ಬರ್ತಿದ್ದರು. ಅವರೆಲ್ಲಾ ಯಾವುದೇ ವಯಸ್ಸಿನ ಬೇಧ ಭಾವವಿಲ್ಲದೇ, ಯಾವುದೇ ಜಾತಿ ಮತ ಪಂಥಗಳ ದ್ವೇಷವಿಲ್ಲದೇ ನನ್ನಲ್ಲಿ ನಾನಾಗುತ್ತಿದ್ದರು. ಇವರೆಲ್ಲರನ್ನಾ ನಾನು ಮತ್ತೇ ಮೀಟ್ ಮಾಡಬೇಕು ಅಂತಾ ಅನ್ಕೊಂಡಿದ್ದೀನಿ. ಸದ್ಯ ಲಾಕ್ ಡೌನ್ ಸಡಿಲಿಕೆ ಆದರೂ ನನ್ನ ಬಳಿ ಸಾರ್ವಜನಿಕರನ್ನು, ಪ್ರವಾಸಿಗರನ್ನಾ ನನ್ನ ಬಳಿ ಬಿಡುತ್ತಿಲ್ಲ.
ಮತ್ತೆ ನಿಮ್ಮನ್ನ ಮೀಟ್ ಮಾಡೋಕೆ ಕಾಯುತ್ತಿದ್ದೇನೆ:
ನನಗೂ ಗೊತ್ತು ಕೊರೊನಾ ಮಹಾಮಾರಿ ಎಷ್ಟು ಡೇಂಜರ್ ಅಂತಾ. ನನಗೆ ಬೋರ್ ಆದರೂ ನೋವಾದರೂ ನಾನೂ ಸಹಿಸಿಕೊಳ್ತಿದ್ದೀನಿ. ಕೊರೊನಾ ಹೊಡೆದೋಡಿಸಲು ನಾನು ನನ್ನ ಫೀಲಿಂಗ್ಸ್ ಜೊತೆಗೆ ಕಾಂಪ್ರಮೈಸ್ ಆಗ್ತೀನಿ. ಮುಂದಿನ ವಾರ ಅಂದರೆ ಜೂನ್ 8 ರಂದು ಲಾಕ್ಡೌನ್ ಪೂರ್ಣ ಸಡಿಲಿಕೆ ಆಗುತ್ತೆ ಎನ್ನೋ ಸುದ್ದಿ ಕೇಳಿದ್ದೀನಿ. ಒಂದು ವೇಳೆ ಮುಂಬರುವ ಜೂನ್ 8 ಕ್ಕೆ ಸಡಿಲಿಕೆ ಆದರೆ ಮತ್ತೇ ನಾನು ನಿಮ್ಮನ್ನೆಲ್ಲ ಮೀಟ್ ಮಾಡಬಹುದು ಎಂದು ಎಕ್ಸೈಟ್ ಆಗಿದ್ದೀನಿ.
ಬಟ್ ಒನ್ ಕಂಡೀಷನ್ ನನ್ನ ಮೇಲೆ ಗೀಚಾಡೋದು ನಿಮಗೆಲ್ಲಾ ಬೇಕಾದ ಹೆಸರು ಬರೆಯೋದು ಮಾಡಬಾರದು. ಕಂಡ ಕಂಡಲ್ಲಿ ಉಗಿಯೋದನ್ನೂ ಮಾಡಬಾರದು. ಕೊರೊನಾ ಕಾರಣದಿಂದ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬನ್ನಿ. ಇಲ್ಲಿ ಸಾಮಾಜಿಕ ಅಂತರ ಕಾಪಾಡಲೇಬೇಕು. ಮಿಕ್ಕಂತೆ ನನ್ನ ಮುಕುಟದಂತಿರುವ ಗುಮ್ಮಟದಲ್ಲಿ ಅದೇ ಸಿಳ್ಳೆ, ಅದೇ ಕೂಗಾಟ, ಚೀರಾಟ, ಐ ಲವ್ ಯೂ ಎನ್ನುವ ಪ್ರೇಮಿಗಳ ನಿವೇದನೆ ಕೇಳಲು ಕಾತರತೆ ಮನೆ ಮಾಡಿದೆ.
ಇಂತಿ ನಿಮ್ಮ
ಪ್ರೇಮಸೌಧ
Published On - 7:21 pm, Mon, 1 June 20