ಅಪರೂಪಕ್ಕೊಮ್ಮೆ ನಕ್ಕ ಬಿಎಸ್ ಯಡಿಯೂರಪ್ಪ ಕೇಳಿದ ಪ್ರಶ್ನೆಗೆ ಉತ್ತರ ನೀಡಲಿಲ್ಲ!
ಯಾರೇನೇ ಹೇಳಿದರೂ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ವರ್ಚಸ್ಸು ಪುನಃ ಕ್ರಮೇಣ ಹೆಚ್ಚುತ್ತಿದೆ, ವಿಧಾನಸಭಾ ಚುನಾವಣಾ ಸಮಯದಲ್ಲಿ ಅವರನ್ನು ಮೂಲೆಗುಂಪು ಮಾಡಿದ್ದ ಪಕ್ಷದ ಹಿರಿಯ ನಾಯಕರಿಗೆ ತಪ್ಪಿನ ಅರಿವಾಗಿದೆ. ಯಡಿಯೂರಪ್ಪ ಅಪೇಕ್ಷೆಯ ಮೇರೆಗೆ ಅವರ ಮಗನನ್ನೇ ಪಕ್ಷದ ರಾಜ್ಯ ಘಟಕಕ್ಕೆ ಅಧ್ಯಕ್ಷನಾಗಿ ನೇಮಕ ಮಾಡಲಾಗಿದೆ. ಪಕ್ಷದ ಕೆಲ ನಾಯಕರ ತೀವ್ರ ಸ್ವರೂಪದ ವಿರೋಧವನ್ನು ಯಡಿಯೂರಪ್ಪ ಕಡೆಗಣಿಸುತ್ತಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಪತ್ರಕರ್ತರು ಕೇಳಿದ ಪ್ರಶ್ನೆಗೆ ನಕ್ಕರು ಅಂತ ನಾವು ಹೇಳಿದರೆ, ಅವರು ಯಾವಾಗ ಮಾರಾಯ್ರೇ ನಕ್ಕಿದ್ದು ಅಂತ ನೀವು ಕೇಳಿಬಿಡುತ್ತೀರಿ! ಅವರ ಸ್ವಭಾವವೇ ಹಾಗೆ, ಯಾವಾಗಲೂ ಗಂಭೀರ ಮುಖಮುದ್ರೆ. ಆದರೆ, ಇಂದು ಅಪರೂಪಕ್ಕೆ ಅವರು ಮಾಧ್ಯಮ ಕೆಮೆರಾಗಳ ಮುಂದೆ ನಕ್ಕರು (smiled). ನಕ್ಕರು ಅನ್ನೋದಕ್ಕಿಂತ ಮುಗುಳ್ನಗೆ ಬೀರಿದರು ಅನ್ನೋದು ಹೆಚ್ಚು ಸೂಕ್ತವೆನಿಸಬಹುದು. ಹೊಸ ವರ್ಷಕ್ಕೆ ನಿಮ್ಮ ರೆಸುಲ್ಯೂಷನ್ (resolution) ಏನು ಸಾರ್ ಅಂತ ಕೇಳಿದಾಗ ಅವರು ನಕ್ಕು ಏನನ್ನೂ ಹೇಳದೆ ಮಾಧ್ಯಮದವರಿಗೆ ಬೆನ್ನು ಹಾಕಿದರು. ಅದಕ್ಕೂ ಮೊದಲು ಮಾತಾಡಿದ ಯಡಿಯೂರಪ್ಪ ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅಭಿನಂದಿಸಿ ಶುಭ ಹಾರೈಸಿದರು. ವಿಪಕ್ಷ ನಾಯಕನಾಗಿ ಕೆಲಸ ಮಾಡಿರುವ ಅನುಭವ ಪೂಜಾರಿ ಅವರಿಗಿರುವುದರಿಂದ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ವಿಶ್ವಾಸ ತಮಗಿದೆ ಎಂದು ಯಡಿಯೂರಪ್ಪ ಹೇಳಿದರು. ವಿಪಕ್ಷದ ಮುಖ್ಯ ಸಚೇತಕರಾಗಿ ಆಯ್ಕೆಯಾಗಿರುವ ಎನ್ ರವಿಕುಮಾರ್ಗೂ ಅವರು ಶುಭ ಕೋರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ