“ಅಪ್ಲೈ ಮಾಡಿದ ಎರಡು ನಿಮಿಷದೊಳಗೆ ಲಕ್ಷಾಂತರ ರೂಪಾಯಿ ಸಾಲ ನಿಮ್ಮ ಬ್ಯಾಂಕ್ ಖಾತೆಗೇ ನೇರವಾಗಿ ಜಮೆ ಆಗುತ್ತದೆ. ಯಾವುದೇ ಡಾಕ್ಯುಮೆಂಟೇಷನ್ ಇಲ್ಲ. ತಕ್ಷಣವೇ ಸಾಲ ಸಿಗುತ್ತದೆ. ಮರುಪಾವತಿ ಕೂಡ ಬಲು ಸಲೀಸು,” -ಇಂಥ ಮೆಸೇಜ್, ಮೇಲ್, ಫೋನ್ ಕರೆಗಳು ನಿಮಗೆ ಬರುತ್ತಿವೆಯಾ? ಈ ಸಾಲ ತೆಗೆದುಕೊಂಡು ಬಿಡಲಾ ಅಥವಾ ಬೇಡವಾ ಎಂಬ ಗೊಂದಲದಲ್ಲಿ ಇದ್ದೀರಾ? ಈಗ ಯಾವ ಬ್ಯಾಂಕ್- ಹಣಕಾಸು ಸಂಸ್ಥೆಯಲ್ಲಿ ಡಾಕ್ಯುಮೆಂಟ್ ಇಲ್ಲದೆ ಸಾಲ ಕೊಡ್ತಾರೆ? ಅದೂ ಅಲ್ಲದೆ ಲಕ್ಷಾಂತರ ರೂಪಾಯಿ! ಹೀಗೊಂದು ಸಂದೇಹದ ಹುಳು ನಿಮ್ಮ ತಲೆ ಕೊರೆಯುತ್ತಿದ್ದರೆ ಅದಕ್ಕೆ ಈ ಲೇಖನದಲ್ಲಿ ನಿಮಗೆ ಪರಿಹಾರ ಸಿಗುತ್ತದೆ.
ಯಾವುದೇ ಡಾಕ್ಯುಮೆಂಟ್ ತೆಗೆದುಕೊಳ್ಳದೆ ಸಾಲ ನೀಡುವುದಾ ಹೌದಾ ಎಂದರೆ, ನಿಜ. ಆದರೆ ಆಧಾರ್ ಕಾರ್ಡ್- ಪ್ಯಾನ್ ಕಾರ್ಡ್ ಮತ್ತಿತರ ಮಾಹಿತಿ ಅದಾಗಲೇ ಸಾಲ ನೀಡುವ ಸಂಸ್ಥೆಗಳ ಬಳಿ ಇರುತ್ತವೆ. ಒಂದು ವೇಳೆ ಅವು ಇಲ್ಲದಿದ್ದಲ್ಲಿ ಪಡೆದುಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಈ ರೀತಿಯ ಸಾಲಗಳಿಗೆ ಪ್ರಯತ್ನ ಪಡುವವರಿಗೆ ಹಣದ ತುರ್ತು ಇದ್ದೇ ಇರುತ್ತದೆ. ಅವರು ಬಡ್ಡಿ ದರವನ್ನು ಸರಿಯಾಗಿ ಪರಿಶೀಲನೆ ಮಾಡೋದೇ ಇಲ್ಲ. ಹಾಗೊಂದು ವೇಳೆ ಮಾಡಿದ್ದರೂ ಅರ್ಥವಾಗಿರಲ್ಲ. ಉದಾಹರಣೆಗೆ 13.50%* pa ಅಂತ ಇರುತ್ತದೆ. ಅಲ್ಲೊಂದು ಸ್ಟಾರ್ ಚಿಹ್ನೆ ಇದೆ ಎಂಬುದನ್ನು ಕೆಲವರು ಗಮನಿಸಲ್ಲ ಹಾಗೂ ಮತ್ತೆ ಕೆಲವರಿಗೆ ಅದರರ್ಥವೇ ಗೊತ್ತಿರಲ್ಲ.
ಸಾಲ ನೀಡುವ ಬ್ಯಾಂಕ್ ಹಾಗೂ ಸಂಸ್ಥೆಗಳಿಗೆ ವಸೂಲಿ ರಿಸ್ಕ್ ಹೆಚ್ಚಿಗೆ:
ಈ ರೀತಿ (*) ನಕ್ಷತ್ರದ ಗುರುತಿದ್ದಲ್ಲಿ ಆ ಬಗ್ಗೆ ಇನ್ನಷ್ಟು ವಿವರಣೆ ಇರುತ್ತದೆ. ಷರತ್ತು- ನಿಬಂಧನೆಗಳು ಅನ್ವಯ ಆಗುತ್ತವೆ ಎಂಬರ್ಥ ಇರುತ್ತದೆ. ಇನ್ನು ಯಾವುದೇ ದಾಖಲೆಗಳನ್ನು ಪಡೆದುಕೊಳ್ಳದೇ, ಅಡಮಾನ ಮಾಡಿಸಿಕೊಳ್ಳದೇ ಪಡೆಯುವ ಸಾಲವನ್ನು ಅನ್ಸೆಕ್ಯೂರ್ಡ್ ಲೋನ್ ಎನ್ನಲಾಗುತ್ತದೆ. ಪರ್ಸನಲ್ ಲೋನ್ ಹಾಗೂ ಕ್ರೆಡಿಟ್ ಕಾರ್ಡ್ ಮೇಲಿನ ಲೋನ್ ಅನ್ಸೆಕ್ಯೂರ್ಡ್ ಲೋನ್ ಎನಿಸಿಕೊಳ್ಳುತ್ತವೆ. ಸಾಲ ನೀಡುವ ಬ್ಯಾಂಕ್ ಹಾಗೂ ಸಂಸ್ಥೆಗಳಿಗೆ ವಸೂಲಿ ಮಾಡುವ ರಿಸ್ಕ್ ಹೆಚ್ಚಿಗೆ ಇರುತ್ತದಾದ್ದರಿಂದ ಬಡ್ಡಿಯನ್ನೂ ಹೆಚ್ಚಿಗೆ ಹಾಕಲಾಗುತ್ತದೆ. ಒಂದು ಉದಾಹರಣೆ ಹೇಳುವುದಾದರೆ, ರಾಷ್ಟ್ರೀಕೃತ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕ್ ಗಳಲ್ಲಿ ಚಿನ್ನ ಅಡಮಾನದ ಮೇಲಿನ ಸಾಲಕ್ಕೆ ಬಡ್ಡಿದರ ವಾರ್ಷಿಕ 7ರಿಂದ 10 ಪರ್ಸೆಂಟ್ನೊಳಗಿದ್ದರೆ, ಪರ್ಸನಲ್ ಲೋನ್ ಮೇಲಿನ ಬಡ್ಡಿ ದರ ಕೆಲವು ಖಾಸಗಿ ಬ್ಯಾಂಕ್, ಸಂಸ್ಥೆಗಳಲ್ಲಿ ವಾರ್ಷಿಕವಾಗಿ ಗರಿಷ್ಠ ಶೇಕಡಾ 36ರವರೆಗೆ ಇದೆ.
ಪರ್ಸನಲ್ ಲೋನ್ ಅಥವಾ ಕ್ರೆಡಿಟ್ ಕಾರ್ಡ್ ಮೇಲೆ ಸಾಲ ತೆಗೆದುಕೊಳ್ಳೋದು ಅನಿವಾರ್ಯ ಅಂತಾದಲ್ಲಿ ಬಡ್ಡಿ ದರ ಎಷ್ಟು? ಪ್ರೊಸೆಸಿಂಗ್ ಫೀ ಎಷ್ಟು, ಅವಧಿಗೆ ಮುಂಚಿತವಾಗಿ ಸಾಲ ತೀರಿಸುವುದಾದರೆ ಅದಕ್ಕೆ ಪ್ರೀಕ್ಲೋಶರ್ ಶುಲ್ಕ ಎಷ್ಟು, ಫ್ಲ್ಯಾಟ್ ರೇಟ್ ಬಡ್ಡಿಯೋ ಅಥವಾ ರೆಡ್ಯೂಸಿಂಗ್ ಬ್ಯಾಲೆನ್ಸ್ ವಿಧಾನವೋ ಎಂಬುದನ್ನು ಮುಂಚಿತವಾಗಿಯೇ ತಿಳಿದುಕೊಳ್ಳಬೇಕು. ಇನ್ನು ಸಾಲ ಪಡೆಯೋರ ಕ್ರೆಡಿಟ್ ಸ್ಕೋರ್ ಹಾಗೂ ಕ್ರೆಡಿಟ್ ರಿಪೋರ್ಟ್ ಸಹ ಬಡ್ಡಿ ದರ ಎಷ್ಟು ಎಂಬುದನ್ನು ನಿರ್ಧಾರ ಮಾಡುತ್ತದೆ. ನೆಗೆಟಿವ್ ವರದಿ ಇರುವವರು, ಕಡಿಮೆ ಕ್ರೆಡಿಟ್ ಸ್ಕೋರ್ ಇರುವಂಥವರಿಗೆ ಸಹಜವಾಗಿಯೇ ಹೆಚ್ಚಿನ ಬಡ್ಡಿ ಬೀಳುತ್ತದೆ.
ಖಾಸಗಿ ಬ್ಯಾಂಕ್ಗಳು, ಪೇಟಿಎಂನಂಥ ವ್ಯಾಲೆಟ್ಗಳು ತಕ್ಷಣದ ಅಥವಾ ದಿಢೀರ್ ಸಾಲಗಳನ್ನು ನೀಡುತ್ತಿವೆ. ಬಡ್ಡಿ ದರ ಮಾತ್ರ ಶೇಕಡಾ ಹತ್ತು ಮೇಲ್ಪಟ್ಟು ಮತ್ತು ಅದಕ್ಕಿಂತ ಹೆಚ್ಚೇ ಇದೆ. ಇವು ಅನ್ಸೆಕ್ಯೂರ್ಡ್ ಸಾಲಗಳೇ. ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಪರ್ಸನಲ್ ಲೋನ್ ಬಡ್ಡಿ ದರ ಸ್ವಲ್ಪ ಮಟ್ಟಿಗೆ ಕಡಿಮೆ ಇರುತ್ತದೆ. ಆದರೆ ದಾಖಲಾತಿಗಳು ಇಲ್ಲದೆ ಸಾಲ ಸಿಗಲ್ಲ. ಆದ್ದರಿಂದ ಈ ಕೆಳಕಂಡ ಅಂಶಗಳನ್ನು ತಿಳಿದುಕೊಂಡಿರಿ.
1. ಪರ್ಸನಲ್ ಲೋನ್ ತೆಗೆದುಕೊಳ್ಳುವ ಮುನ್ನ, ಮಾರ್ಕೆಟ್ನಲ್ಲಿ ಯಾವ ಸಂಸ್ಥೆ ಅಥವಾ ಬ್ಯಾಂಕ್ ಕಡಿಮೆ ಬಡ್ಡಿ ದರಕ್ಕೆ ಸಾಲ ನೀಡುತ್ತಿವೆ ಎಂಬುದನ್ನು ಗಮನಿಸಿ. ನಿಮಗೆ ಯಾವಾಗ ಅಗತ್ಯವೋ ಅದಕ್ಕಿಂತ ಕನಿಷ್ಠ ಒಂದು ವಾರದಿಂದ ಹದಿನೈದು ದಿನಕ್ಕೆ ಮುನ್ನ ಅಪ್ಲೈ ಮಾಡಿ.
2. ಕ್ರೆಡಿಟ್ ಕಾರ್ಡ್ ಮೇಲಿನ ಸಾಲಕ್ಕೆ, ವೇತನ ಮುಂಗಡ (ಸ್ಯಾಲರಿ ಅಡ್ವಾನ್ಸ್) ಎಂದು ಕೆಲವು ಬಾರಿ ಆಫರ್ ಇರುತ್ತದೆ. ಅಂಥ ಸಮಯದಲ್ಲಿ ಸಾಲ ಪಡೆಯಿರಿ.
3. ಇತರರ ಸಾಲಕ್ಕೆ ಜಾಮೀನಾಗಿ ನಿಂತಲ್ಲಿ ಅವರು ಸರಿಯಾಗಿ ಸಾಲ ಮರುಪಾವತಿ ಮಾಡದಿದ್ದಲ್ಲಿ ಅದರ ನಕಾರಾತ್ಮಕ ಪರಿಣಾಮ ನಿಮ್ಮ ಕ್ರೆಡಿಟ್ ಸ್ಕೋರ್ ಹಾಗೂ ರಿಪೋರ್ಟ್ ಮೇಲೆ ಆಗುತ್ತದೆ.
4. ಸಾಲದ ಬಗ್ಗೆ ಹಲವು ಕಡೆ ಏಕಕಾಲದಲ್ಲಿ ವಿಚಾರಿಸಿದಲ್ಲಿ, ಕ್ರೆಡಿಟ್ಕಾರ್ಡ್ಗಳಿಗೆ ಅಪ್ಲೈ ಮಾಡಿದಲ್ಲಿ ಅಂಥವುಗಳನ್ನು ಹಾರ್ಡ್ ಎನ್ಕ್ವೇರಿಗಳು ಎಂದು ಪರಿಗಣಿಸಲಾಗುತ್ತದೆ. ಅದರಿಂದ ಕೂಡ ಕ್ರೆಡಿಟ್ ಸ್ಕೋರ್ ಮತ್ತು ರಿಪೋರ್ಟ್ ಮೇಲೆ ಪರಿಣಾಮ ಆಗುತ್ತದೆ. ಸಾಲ ಪಡೆಯುವ ವೇಳೆಯಲ್ಲಿ ಜಾಸ್ತಿ ಬಡ್ಡಿ ಹಾಕಲಾಗುತ್ತದೆ.
5. ಇನ್ನು ಈಗಾಗಲೇ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದಲ್ಲಿ ಒಟ್ಟಾರೆ ಕ್ರೆಡಿಟ್ ಮಿತಿಯ ಶೇಕಡಾ 30ರಷ್ಟನ್ನು ಮೀರಬೇಡಿ.
6. ಸಾಧ್ಯವಾದಷ್ಟೂ ಸೆಕ್ಯೂರ್ಡ್ ಸಾಲವನ್ನೇ ಪಡೆಯಿರಿ. (ಚಿನ್ನ ಅಡಮಾನ ಮಾಡಿ ಸಾಲ ಪಡೆಯುವುದು, ಎಫ್.ಡಿ. ಮೇಲೆ ಸಾಲ, ಷೇರು ಪತ್ರಗಳ ಮೇಲೆ ಸಾಲ, ಹೌಸಿಂಗ್ಲೋನ್ ಟಾಪ್ ಅಪ್ ಹೀಗೆ)
7. ಸ್ನೇಹಿತರು- ಸಂಬಂಧಿಕರಿಂದ ಸಾಲ ದೊರೆಯಬಹುದು ಎಂದಾದಲ್ಲಿ ಅದು ನಿಮ್ಮ ಆದ್ಯತೆ ಆಗಿರಲಿ. ಇನ್ನು ಕ್ರೆಡಿಟ್ ಕಾರ್ಡ್ ಬಳಸುವುದಾದಲ್ಲಿ 45 ದಿನಗಳ ತನಕ ಕಾಲಾವಧಿ ದೊರೆಯುತ್ತದೆ. ಅಷ್ಟರಲ್ಲಿ ಹಿಂತಿರುಗಿಸಲು ಸಾಧ್ಯವಾದರೆ ಅದನ್ನೇ ಬಳಸಿಕೊಳ್ಳಿ.
8. ಸಾಲ ಸಿಗುತ್ತದೆ, ಕೆಲ ಬಾರಿ ಕಡಿಮೆ ಬಡ್ಡಿಗೆ ಸಾಲ ದೊರೆಯುತ್ತದೆ ಎಂಬ ಕಾರಣಕ್ಕೇ ಲೋನ್ ಪಡೆಯುವ ಅಭ್ಯಾಸ ಕೆಲವರಿಗೆ ಇರುತ್ತದೆ. ಇಂಥದ್ದರಿಂದ ನಿಮಗೆ ಸಾಲ ಮಾಡುವುದು ಖಯಾಲಿ ಎಂಬ ಭಾವನೆ ಲೋನ್ ನೀಡುವ ಸಂಸ್ಥೆ ಅಥವಾ ಬ್ಯಾಂಕ್ಗೆ ಬರುತ್ತದೆ. ಇಂಥ ಸನ್ನಿವೇಶದಲ್ಲೂ ಬಡ್ಡಿ ಜಾಸ್ತಿ ಹಾಕಲಾಗುತ್ತದೆ.
ತಕ್ಷಣದ ಸಾಲ ಯಾರಿಗಾಗಿ ಮತ್ತು ಇದನ್ನು ಎಂಥ ಸಂದರ್ಭಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಹಾಗೂ ಕೈಗೊಳ್ಳಬೇಕಾದ ಎಚ್ಚರಗಳೇನು ಎಂಬುದು ಈಗ ನಿಮಗೆ ಗೊತ್ತಾಗಿರಬಹುದು.
ಇದನ್ನೂ ಓದಿ: Housing Loan: ಮನೆ ಕಟ್ಟಲು, ಖರೀದಿ ಮಾಡಲು ಸಾಲ ಮಾಡುವ ಮುನ್ನ ತಿಳಿಯಲೇಬೇಕಾದ ಸಂಗತಿಗಳು