ಮೈಸೂರು: ಕಿಲ್ಲರ್ ಕೊರೊನಾದಿಂದಾಗಿ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಅಕ್ಟೋಬರ್ 25 ಅಂದ್ರೆ ನಾಳೆ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಕ್ಷಣಗಣನೆ ಶುರುವಾಗಿದೆ. ಕೊರೊನಾ ಭೀತಿಯಿಂದಾಗಿ ಜಂಬೂ ಸವಾರಿ ಮೆರವಣಿಗೆ ಕೇವಲ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿದೆ.
ಪ್ರತಿ ವರ್ಷ 5.5 ಕಿ.ಮೀ.ಸಾಗುತ್ತಿದ್ದ ಜಂಬೂ ಸವಾರಿ ಮೆರವಣಿಗೆ ಈ ಬಾರಿ ಕೇವಲ 400 ಮೀಟರ್ ಅಂತರದಲ್ಲೇ ಅಂತ್ಯವಾಗಲಿದ್ದು, 30 ರಿಂದ 40 ನಿಮಿಷಗಳಲ್ಲೇ ಜಂಬೂ ಸವಾರಿ ಪೂರ್ಣಗೊಳ್ಳಲಿದೆ. ನಾಳೆ ಮಧ್ಯಾಹ್ನ 2:59 ರಿಂದ 3:20 ರೊಳಗಿನ ಶುಭ ಮಕರ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಲಾಗುತ್ತೆ. ಬಳಿಕ 3:40 ರಿಂದ 4:15 ರೊಳಗಿನ ಶುಭ ಕುಂಭ ಲಗ್ನದಲ್ಲಿ ಅಭಿಮನ್ಯುವಿನ ಬೆನ್ನಿನ ಮೇಲೆ ಚಿನ್ನದ ಅಂಬಾರಿಯನಿಟ್ಟು ಅದರಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಗಣ್ಯರಿಂದ ಪುಷ್ಪಾರ್ಚನೆ ಮಾಡಲಾಗುತ್ತೆ. ನಾಳಿನ ಜಂಬೂ ಸವಾರಿಯಲ್ಲಿ 4 ಕಲಾತಂಡ, ಅಶ್ವಾರೋಹಿ ದಳದ 2 ತುಕಡಿ, 2 ಸ್ತಬ್ದ ಚಿತ್ರ, ಕರ್ನಾಟಕ ಪೊಲೀಸ್ ವಾಹನದ ಆನೆಗಾಡಿ ಸಾಗಲಿದೆ. ಹೀಗಾಗಿ ಮೈಸೂರು ಅರಮನೆ ಆವರಣದಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿವೆ.
ಪ್ರತಿ ವರ್ಷ ಲಕ್ಷಾಂತರ ಮಂದಿ ಈ ಭವ್ಯ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದೆರ ಈ ಬಾರಿ ಕೋವಿಡ್ ಭೀತಿಯ ಹಿನ್ನೆಲೆಯಲ್ಲಿ ಕೇವಲ 300 ಜನರಿಗೆ ಮಾತ್ರ ಅನುಮತಿ ನೀಡಲಾಗಿದೆ. ಮೈಸೂರು ಅರಮನೆಯ ಸುತ್ತಮುತ್ತ ಜನಜಂಗುಳಿ ಉಂಟಾಗದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.