ಬೆಂಗಳೂರು: ಎಲ್ಲೂ ಒಂದು ನರಪಿಳ್ಳೆಯೂ ಕಾಣ್ತಿಲ್ಲ. ಹುಡುಕಿದ್ರೂ ಒಂದು ವಾಹನವೂ ಓಡಾಡ್ತಿಲ್ಲ. ಅಂಗಡಿ, ಮುಂಗಟ್ಟು ಎಲ್ಲವೂ ಕ್ಲೋಸ್. ಇದು ಒಂದು ಸಿಟಿ, ರಾಜ್ಯದ ಪರಿಸ್ಥಿತಿಯಲ್ಲ. ಇಡೀ ದೇಶಕ್ಕೆ ದೇಶವೇ ಶಟ್ಡೌನ್ ಆಗಿದೆ. ಇದಕ್ಕೆಲ್ಲಾ ಕಾರಣ ಸದ್ದಿಲ್ಲದೇ ಜನರ ಜೀವ ಹಿಂಡೋ ಮಹಾಮಾರಿ ಕೊರೊನಾ.
ಹೀಗೆ ದೇಶಕ್ಕೆ ದೇಶವೇ ಲಾಕ್ಡೌನ್.. ಕಿಕ್ಕಿರಿದು ಸೇರುತ್ತಿದ್ದ ಜನ್ರೆಲ್ಲಾ ಮನೆಯಲ್ಲಿ ಬಂಧಿಯಾಗಿದ್ರು. ಜನತಾ ಕರ್ಫ್ಯೂ ಹೆಸರಲ್ಲಿ ಮನೆಯಲ್ಲೇ ಲಾಕ್ ಆಗಿದ್ರು.. ಕೊರೊನಾ ಹೆಮ್ಮಾರಿ ಓಡಿಸಲು ಎಲ್ಲರೂ ಪಣ ತೊಟ್ಟಿದ್ರು.. ಆದ್ರೆ, ಇದು ನಿನ್ನೆ ಒಂದೇ ದಿನಕ್ಕೆ ಸೀಮಿತ ಆಗಿಲ್ಲ. ಮಾರ್ಚ್ 31ರತನಕ ಇದೇ ಪರಿಸ್ಥಿತಿ ಮುಂದುವರಿಯುತ್ತೆ. ಇಡೀ ರಾಜ್ಯವೇ ದಿಗ್ಬಂಧನದಲ್ಲಿರಲಿದೆ. ಈ ಕುರಿತು ಸ್ವತಃ ಸರ್ಕಾರವೇ ಆದೇಶ ಹೊರಡಿಸಿದ್ದು, ಜನರ ಪರದಾಟ ಹೀಗೆ ಮುಂದುವರಿಯಲಿದೆ.
ನಿನ್ನೆ ಒಂದೇ ದಿನ 6ಜನರಲ್ಲಿ ಪತ್ತೆಯಾದ ಮಹಾಮಾರಿ..!
ಯೆಸ್, ಹೆಮ್ಮಾರಿಯ ಅಟ್ಟಹಾಸ ಹೇಗೆ ದಿನ ದಿನಕ್ಕೂ ಹೆಚ್ಚಾಗುತ್ತಿದೆ ಅನ್ನೋದಕ್ಕೆ ಇದೇ ಸಾಕ್ಷಿ. ನಿನ್ನೆ ರಾಜ್ಯದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 6ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಢಪಟ್ಟಿದೆ. ಧಾರವಾಡ, ಮಂಗಳೂರು, ಚಿಕ್ಕಬಳ್ಳಾಪುರದಲ್ಲಿ ಒಂದೊಂದು ಕೇಸ್ ಪತ್ತೆಯಾದ್ರೆ, ಬೆಂಗಳೂರಿನಲ್ಲಿ ನಿನ್ನೆ ಒಟ್ಟು ಮೂರು ಜನರಿಗೆ ಸೋಂಕು ಬಾಧಿಸಿದೆ.
ನಿನ್ನೆ ಎಲ್ಲೆಲ್ಲಿ ಸೋಂಕು..?
ಧಾರವಾಡದ 35 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.. ಮಕ್ಕಾದಿಂದ ಬಂದಿದ್ದ ಗೌರಿಬಿದನೂರಿನ ಮಹಿಳೆಗೂ ಸೋಂಕು ದೃಢಪಟ್ಟಿದೆ. ಅಲ್ದೆ, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದ ಭಟ್ಕಳದ 26 ವರ್ಷದ ಯುವಕನಿಗೂ ಕೊರೊನಾ ಸೋಂಕು ಕನ್ಫರ್ಮ್ ಆಗಿದೆ. ಬೆಂಗಳೂರಿನಲ್ಲಿ ಮೂರು ಕೇಸ್ಗಳ ಪತ್ತೆಯಾಗಿದ್ದು, 36 ವರ್ಷದ ಮಹಿಳೆಗೆ ಮತ್ತು 27 ವರ್ಷದ ಯುವಕನಿಗೆ ಸೋಂಕು ತಗುಲಿದೆ.
ಅಲ್ದೆ, ರೋಗಿ 25-ಬೆಂಗಳೂರು ಮೂಲದ 51 ವರ್ಷದ ವ್ಯಕ್ತಿಗೂ ಸೋಂಕು ಬಾಧಿಸಿದೆ. ಹೀಗೆ ದಿನದಿಂದ ದಿನಕ್ಕೆ ತನ್ನ ಆರ್ಭಟ ಮುಂದುವರಿಸುತ್ತಿರೋ ಕೊರೊನಾ ತಡೆಗಟ್ಟೋದೇ ಸರ್ಕಾರಗಳಿಗೆ ಸವಾಲಾಗಿದೆ.. ಹೇಗಾದ್ರೂ ಮಾಡಿ ಈ ಹೆಮ್ಮಾರಿಯನ್ನ ಒದ್ದೋಡಿಸಲೇಬೇಕು ಅಂತ ಪಣತೊಟ್ಟಿರೋ ರಾಜ್ಯ ಸರ್ಕಾರ, ಲಾಕ್ಡೌನ್ ತಂತ್ರ ಅನುಸರಿಸುತ್ತಿದೆ. ಜನತಾ ಕರ್ಫ್ಯೂವನ್ನೇ ಮುಂದುವರಿಸಿ ಲಾಕ್ ಡೌನ್ ಹೆಸರಲ್ಲಿ ಇಡೀ ರಾಜ್ಯದ ಜನ್ರನ್ನು ಕೂಡಿ ಹಾಕಿ, ಕೊರೊನಾ ಮಟ್ಟ ಹಾಕಲು ತಯಾರಿ ನಡೆಸಿದೆ. ಮಾರ್ಚ್ 31ರವರೆಗೆ ರಾಜ್ಯವನ್ನು ಸಂಪೂರ್ಣ ಲಾಕ್ಡೌನ್ ಮಾಡಿ ರಾಜ್ಯ ಸರ್ಕಾರ ಆದೇಶಿಸಿದ್ದು, ಇನ್ನೂ ಒಂದು ವಾರ ಜನ ಪರದಾಡೋದು ಪಕ್ಕಾ.
ಅಂತಾರಾಜ್ಯ ವಾಹನ ಸಂಚಾರಕ್ಕೆ ಬ್ರೇಕ್
ಇನ್ನೊಂದೆಡೆ ದೇಶದಲ್ಲಿ ಕೊರೊನಾ ಹೊಡೆತಕ್ಕೆ ಈಗಾಗಲೇ ಏಳು ಜನ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 396ಕ್ಕೆ ಏರಿಕೆ ಆಗಿದ್ದು, ಮತ್ತೆ ತನ್ನ ಕಬಂಧಬಾಹು ಚಾಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಂತರಾರಾಜ್ಯ ವಾಹನ ಸಂಚಾರಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವ ವಾಹನಗಳ ಸಂಚಾರ ಬಂದ್ ಮಾಡಿ ಆದೇಶಿಸಿದೆ.
ಒಟ್ನಲ್ಲಿ, ನಿನ್ನೆ ಒಂದು ಫಿಕ್ಸ್ ಆಗಿದ್ದ ಜನತಾ ಕರ್ಫ್ಯೂ ಈಗ ಲಾಕ್ಡೌನ್ ಆಗಿದೆ ಬದಲಾಗಿದೆ.. ಇಂದಿನಿಂದ ಮಾರ್ಚ್ 31ರವರೆಗೆ ಕರುನಾಡು ಶಟ್ಡೌನ್ ಆಗಲಿದೆ.. ಕೊರೊನಾ ಅನ್ನೋ ಮಹಾಮಾರಿ ಓಡಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಇಡೀ ರಾಜ್ಯಕ್ಕೆ ರಾಜ್ಯವೇ ಸ್ತಬ್ಧವಾಗೋದು ಪಕ್ಕಾ.
Published On - 7:29 am, Mon, 23 March 20