ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಬಹುಮಾದರಿ ಸಾರಿಗೆ ಕೇಂದ್ರ (multi modal transport hub) ಹೊಂದಿರುವ ಭಾರತದ ಮೊದಲ ವಿಮಾನ ನಿಲ್ದಾಣವಾಗಿ ಹೊರಹೊಮ್ಮಲಿದೆ. ಇದು ಪ್ರಯಾಣಿಕರಿಗೆ ಯಾವುದೆ ತೊಂದರೆಯಿಲ್ಲದೆ ಮತ್ತು ತಡೆರಹಿತ ಪ್ರಯಾಣಕ್ಕೆ ಸಹಕಾರಿಯಾಗಲಿದೆ. ಒಮ್ಮೆ ಕಾರ್ಯರೂಪಕ್ಕೆ ಬಂದ ನಂತರ, ಬಹುಮಾದರಿ ಸಾರಿಗೆ ಕೇಂದ್ರ ಸೌಲಭ್ಯಗಳನ್ನು ಹೊಂದಿರುವ ಝ್ಯೂರಿಚ್ ಮತ್ತು ಹೀಥ್ರೂ ವಿಮಾನ ನಿಲ್ದಾಣಗಳ ಸಾಲಿಗೆ ಬೆಂಗಳೂರು ವಿಮಾನ ನಿಲ್ದಾಣವು ಸೇರಲಿದೆ. ಬಹುಮಾದರಿ ಸಾರಿಗೆ ಕೇಂದ್ರ ನಿರ್ಮಾಣದ ಹಂತದಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಹುಮಾದರಿ ಸಾರಿಗೆ ಕೇಂದ್ರವು ಮೆಟ್ರೋ ನಿಲ್ದಾಣ ಮತ್ತು ಬಸ್ ನಿಲ್ದಾಣವನ್ನು ಒಂದೇ ಸೂರಿನಡಿ ಹೊಂದಿದೆ. ಚೆನ್ನೈ ವಿಮಾನ ನಿಲ್ದಾಣವು ಬಸ್ ಮತ್ತು ಮೆಟ್ರೋ ಎರಡಕ್ಕೂ ಸಂಪರ್ಕ ಕಲ್ಪಿಸುತ್ತದೆ. ಆದರೆ ಅದು ಒಂದೇ ಸೂರಿನಡಿ ಹೊಂದಿಲ್ಲ.
ಮುಂದಿನ ದಿನಗಳಲ್ಲಿ ಬೆಂಗಳೂರು ವಿಮಾನ ನಿಲ್ದಾಣವು ಖಾಸಗಿ ಕಾರುಗಳು ಮತ್ತು ಟ್ಯಾಕ್ಸಿಗಳಿಗೆ ಪಾರ್ಕಿಂಗ್ ಸ್ಥಳಕ್ಕೆ ಅವಕಾಶ ನೀಡಲಿದೆ. ಇದಲ್ಲದೆ, ಬಹುಮಾದರಿ ಸಾರಿಗೆ ಕೇಂದ್ರ ಸಾಮಾನು ವಿಂಗಡಣೆ ಸ್ಥಳವನ್ನು ಸಹ ಹೊಂದಿರುತ್ತದೆ. ಮತ್ತು ಸಹಜವಾಗಿ, ಮೆಟ್ರೋ ಮತ್ತು ಬಸ್ ನಿಲ್ದಾಣಗಳೆರಡೂ ಬಹುಮಾದರಿ ಸಾರಿಗೆ ಕೇಂದ್ರಕ್ಕೆ ಸಂಯೋಜಿಸಲ್ಪಟ್ಟಿರುವುದರಿಂದ ಪ್ರಯಾಣಿಕರು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಇತರೆಡೆಗೆ ಸುಲಭವಾಗಿ ಪ್ರಯಾಣಿಸಬಹುದಾಗಿದೆ.
ಇದನ್ನೂ ಓದಿ: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಡಿ. ತ್ರಿವೇಣಿ ಆಯ್ಕೆ: ರಾಜ್ಯದ ಅತಿ ಕಿರಿಯ ಮೇಯರ್ ಇವರೇ ನೋಡಿ
ಖಾಸಗಿ ಕಾರು ಪಾರ್ಕಿಂಗ್, ಟ್ಯಾಕ್ಸಿ ಸೇವೆಗಳು, ಬೆಂಗಳೂರು ಮಹಾನಗರ ಸಾರಿಗೆ ನಿಗಮ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ನಿರ್ವಹಿಸುವ ಇಂಟರ್ ಅಥವಾ ಇಂಟ್ರಾಸಿಟಿ ಬಸ್ಸುಗಳು ಸೇರಿದಂತೆ ವಿವಿಧ ಸಾರಿಗೆ ಆಯ್ಕೆಗಳನ್ನು ಒಂದೇ ಸೂರಿನಡಿ ಆಯೋಜಿಸುವ ಮೂಲಕ ಬಹುಮಾದರಿ ಸಾರಿಗೆ ಕೇಂದ್ರ ಪ್ರಯಾಣಿಕರು ಮತ್ತು ಸಿಬ್ಬಂದಿಯ ಪ್ರಸ್ತುತ ಮತ್ತು ಭವಿಷ್ಯದ ಅಗತ್ಯಗಳನ್ನು ಪೂರೈಸುತ್ತದೆ ಎಂದು ಬೆಂಗಳೂರು ವಿಮಾನ ನಿಲ್ದಾಣ ವಕ್ತಾರರೊಬ್ಬರು ಮಾಹಿತಿ ನೀಡಿರುವುದಾಗಿ ಮನಿಕಂಟ್ರೋ ಸೈಟ್ ವರದಿ ಮಾಡಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಿನಕ್ಕೆ ಸುಮಾರು 1.05 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತದೆ. ಸುಮಾರು 72 ಪ್ರತಿಶತದಷ್ಟು ಪ್ರಯಾಣಿಕರು ಕಾರುಗಳು, ಟ್ಯಾಕ್ಸಿಗಳು ಮತ್ತು ಉಳಿದ 28 ಪ್ರತಿಶತದಷ್ಟು ಪ್ರಯಾಣಿಕರು ಬಸ್ಸುಗಳ ಮೂಲಕ ಪ್ರಯಾಣಿಸುತ್ತಾರೆ.
ನಿರ್ಮಾಣ ಹಂತದಲ್ಲಿರುವ ಬಹುಮಾದರಿ ಸಾರಿಗೆ ಕೇಂದ್ರ ಟರ್ಮಿನಲ್ 1 ರಿಂದ ಸುಮಾರು 800 ಮೀಟರ್ ಮತ್ತು ಟರ್ಮಿನಲ್ 2 ರಿಂದ 100 ಮೀಟರ್ ದೂರದಲ್ಲಿರಲಿದೆ. ಟರ್ಮಿನಲ್ಗಳನ್ನು ಬಹುಮಾದರಿ ಸಾರಿಗೆ ಕೇಂದ್ರಕ್ಕ ಸಂಪರ್ಕಿಸುವ ಬಸ್ಗಳನ್ನು ಬಿಐಎಎಲ್ ನಿರ್ವಹಿಸಲಿದೆ. ಮೆಟ್ರೋ ನಿಲ್ದಾಣಗಳನ್ನು ಪಾದಚಾರಿ ಮಾರ್ಗದ ಮೂಲಕ ಬಹುಮಾದರಿ ಸಾರಿಗೆ ಕೇಂದ್ರಕ್ಕೆ ಸಂಪರ್ಕ ಕಲ್ಪಿಸಲಾಗುತ್ತದೆ.
ಇದನ್ನೂ ಓದಿ: Siddaramaiah: ಚುನಾವಣೆ ಘೋಷಣೆ ಬೆನ್ನಲ್ಲೇ ನೀತಿ ಸಂಹಿತೆ ಉಲ್ಲಂಘಿಸಿದರೇ ಸಿದ್ದರಾಮಯ್ಯ?
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚು. ಹಾಗಾಗಿ ಖಾಸಗಿ ಮತ್ತು ಕೆಎಸ್ಆರ್ಟಿಸಿ ಬಸ್ ಪ್ರಯಾಣಿಕರನ್ನು ಸೆಳೆಯಲು ಇಂಟರ್-ಸಿಟಿ ಬಸ್ ಸೌಲಭ್ಯ ನಿರೀಕ್ಷಿಸಬಹುದಾಗಿದೆ. ಉದಾಹರಣೆಗೆ, ಬೆಂಗಳೂರಿನಿಂದ ತಿರುಪತಿ ಮತ್ತು ಹೈದರಾಬಾದ್ನಂತಹ ಸ್ಥಳಗಳಿಗೆ ಹೋಗುವ ಬಸ್ ಪ್ರಯಾಣಿಕರು ಮೆಟ್ರೋ ಮೂಲಕ (2026 ರ ವೇಳೆಗೆ) ವಿಮಾನ ನಿಲ್ದಾಣವನ್ನು ತಲುಪಬಹುದು ಮತ್ತು ನಂತರ ತಾವು ತಲುಪಬೇಕಿರುವ ಸ್ಥಳಕ್ಕೆ ಇಂಟರ್ಸಿಟಿ ಬಸ್ನಲ್ಲಿ ಪ್ರಯಾಣಿಸಬಹುದಾಗಿದೆ.
ಬಹುಮಾದರಿ ಸಾರಿಗೆ ಕೇಂದ್ರದ ಮೊದಲನೇ ಹಂತ ಒಂದೆರಡು ತಿಂಗಳಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದ್ದರೆ, ಕೆಂಪೇಗೌಡ ಅಂತಾರಾಷ್ಟ್ರೀಯ ಮೆಟ್ರೋ ನಿಲ್ದಾಣದ ಎರಡನೇ ಹಂತ 2026 ರಲ್ಲಿ ಕಾರ್ಯನಿರ್ವಹಿಸಲಿದೆ. ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಮತ್ತು ಬಿಐಎಎಲ್ ಎರಡು ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸಲು ಒಪ್ಪಂದ ಮಾಡಿಕೊಂಡಿವೆ.
ಪ್ರಸ್ತುತ ಯಾವುದೇ ಭಾರತೀಯ ವಿಮಾನ ನಿಲ್ದಾಣವು ಬಹು ಮಾದರಿ ಸಾರಿಗೆ ಕೇಂದ್ರ ಸೌಲಭ್ಯಗಳನ್ನು ಹೊಂದಿಲ್ಲ ಎಂದು ಮೊಬಿಲಿಟಿ ತಜ್ಞ ರವಿ ಗಡೆಪಲ್ಲಿ ಮನಿಕಂಟ್ರೋ ಸೈಟ್ಗೆ ತಿಳಿಸಿದ್ದಾರೆ. ಬಹು ಮಾದರಿ ಸಾರಿಗೆ ಕೇಂದ್ರ ಹೊಂದಿರುವ ಲಂಡನ್ನ ಹೀಥ್ರೂ ವಿಮಾನ ನಿಲ್ದಾಣವು ಈ ನಿಟ್ಟಿನಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.