ಕೊಡಗು: ವಿಶ್ವವನ್ನೇ ಆವರಿಸಿರುವ ಕೊರೊನಾ ಮಹಾಮಾರಿ ಸೋಂಕಿತರನ್ನು ಬಲಿ ಪಡೆಯುತ್ತಿರುವುದರ ಜೊತೆಗೆ ಬದುಕಿರುವ ಹಲವರ ಜೀವನವನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಕೊರೊನಾ ಅಟ್ಟಹಾಸಕ್ಕೆ ಜನರು ತಮ್ಮ ಬದುಕಿನ ಆಸೆಯನ್ನೇ ಕಳೆದುಕೊಂಡಿದ್ದಾರೆ. ಬದುಕಿದ್ದಾಗ ನೆಮ್ಮದಿಯಿಂದ ಇರಲು ಬಿಡದ ಕೊರೊನಾ ಇದೀಗ ಸತ್ತ ಮೇಲೂ ಜನರನ್ನ ಕಾಡಲು ಶುರು ಮಾಡಿದೆ.
ಚೀನಾ, ಪಾಕ್ ಯುದ್ಧದಲ್ಲಿ ಭಾಗಿಯಾಗಿದ್ದರು:
ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಒಂಟಿಯಂಗಡಿ ಗ್ರಾಮದ ನಿವಾಸಿ ಸೋಮೆಯಂಡ ಕಾರಿಯಪ್ಪನವರು 1962ರ ಚೀನಾ ಹಾಗೂ 1965ರ ಪಾಕಿಸ್ತಾನ ವಿರುದ್ಧದ ಯುದ್ಧದಲ್ಲಿ ಭಾಗಿಯಾಗಿದ್ದರು. ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ ಕೆಲ ವರ್ಷ ಮಹಾರಾಷ್ಟ್ರದ ಪುಣೆಯ ಟೆಲ್ಕೋ ಸಂಸ್ಥೆಯಲ್ಲಿ ಸೆಕ್ಯುರಿಟಿ ಇಂಚಾರ್ಜ್ ಆಗಿ ಕಾರ್ಯ ನಿರ್ವಹಿಸಿದರು. ನಂತರ ಅವರು ತಮ್ಮ ಪತ್ನಿಯೊಂದಿಗೆ ಸ್ವಗ್ರಾಮವಾದ ಒಂಟಿಯಂಗಡಿಯಲ್ಲಿ ನೆಲಸಿದ್ದರು.
ದೇಹವನ್ನು ದಾನ ಮಾಡಲು ಬಯಸಿದ್ದರು:
ಆದರೆ, ಕೇವಲ 15 ದಿನಗಳ ಹಿಂದೆ ಮೈಸೂರಿನ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಕಾರಿಯಪ್ಪನವರಿಗೆ ದೂರವಾಣಿ ಕರೆ ಮಾಡಿದ್ದರು. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಇದೆ. ಮತ್ತು ಕೊರೊನಾ ಹರಡುವ ಭೀತಿಯಿಂದ ಮರಣದ ಬಳಿಕ ತಮ್ಮ ದೇಹವನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಜೊತೆಗೆ, ತಮ್ಮ ಮರಣದ ನಂತರ ದೇಹದ ಅಂತ್ಯಕ್ರಿಯೆಯನ್ನು ನೆರವೇರಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಕೂಡ ಸೂಚಿಸಿದರು.
ಕೊಡವ ಸಂಪ್ರದಾಯದಂತೆ ಅಂತ್ಯಕ್ರಿಯೆ:
ದುರಾದೃಷ್ಟವಶಾತ್ 90ವರ್ಷದ ಕಾರಿಯಪ್ಪನವರು ಜೂನ್ 24ರ ಮುಂಜಾನೆ ವಯೋಸಹಜ ಕಾಯಿಲೆಯಿಂದ ಮರಣ ಹೊಂದಿದರು. ಮೃತರ ಅಂತ್ಯಕ್ರಿಯೆನ್ನು ಕುಟುಂಬದವರು ಕೊಡವ ಸಂಪ್ರದಾಯದಂತೆ ಚಿತೆಗೆ ಬೆಂಕಿ ಹಚ್ಚುವ ಮೂಲಕ ತಮ್ಮ ತೋಟದಲ್ಲಿಯೇ ನೆರವೇರಿಸಿದರು. ಜೀವಿತಾವಧಿಯಲ್ಲಿ ಏನನ್ನೂ ಬಯಸದ ಹಿರಿಯ ಸೇನಾನಿಯ ಕೊನೆಯ ಆಸೆಯೂ ಈಡೇರಲಿಲ್ಲ. ಒಟ್ಟಿನಲ್ಲಿ, ಮರಣದ ಬಳಿಕ ತಮ್ಮ ದೇಹವನ್ನು ಉನ್ನತ ಕಾರ್ಯಕ್ಕೆ ಬಳಸಿಕೊಳ್ಳಬೇಕು ಎನ್ನುವ ಕೊನೆಯ ಆಸೆಯನ್ನು ಕೂಡಾ ಕೊರೊನಾ ಕಿತ್ತುಕೊಂಡಿದೆ ಎನ್ನುವುದೇ ದುಃಖದ ಸಂಗತಿ. -ಸುರೇಶ್ ಬಿ