ಚಿಕ್ಕಮಗಳೂರು: ನಿರುದ್ಯೋಗಿ ಯುವಕ-ಯುವತಿಯರಿಗೆ ಕೆಲ್ಸ ಕೊಡಿಸುವುದಾಗಿ ನಂಬಿಸಿ ಎರಡು ಕೋಟಿಗೂ ಅಧಿಕ ಹಣ ವಂಚಿಸಿದ ಆಸಾಮಿಯನ್ನ ಚಿಕ್ಕಮಗಳೂರು ಪೊಲೀಸರು ಬಂಧಿಸಿದ್ದಾರೆ. ಆತ ಅಂತಿಂಥ ಆಸಾಮಿ ಅಲ್ಲ.! ಪಕ್ಕಾ 420 ಕಣ್ರೀ. ಆತ ಮಕ್ಮಲ್ ಟೋಪಿ ಹಾಕಿದ್ದು ಒಬ್ರಿಬ್ಬರಿಗೆ ಅಲ್ಲ, ಬದಲಾಗಿ ನೂರಾರು ಮಂದಿಗೆ.. ! ನಿರುದ್ಯೋಗಿ ಯುವಕ-ಯುವತಿಯರನ್ನೇ ಟಾರ್ಗೆಟ್ ಮಾಡಿ, ಈ ಭೂಪ ಗಳಿಸಿದ್ದು ಬರೊಬ್ಬರಿ 2 ಕೋಟಿಗೂ ಅಧಿಕ.! ಹೀಗೆ ವಂಚಿಸಿ ಕಂಡವರ ದುಡ್ಡಲ್ಲಿ ಹೆಲಿಕ್ಯಾಪ್ಟರ್ನಲ್ಲೇ ಓಡಾಡಿಕೊಂಡು ಬಿಟ್ಟಿ ಹೈಫೈ ಲೈಫ್ ಲೀಡ್ ಮಾಡ್ತಿದ್ದ ಈ ಶೋಕಿಲಾಲ, ಕೊನೆಗೂ ಕಾಫಿನಾಡ ಪೊಲೀಸ್ರಿಗೆ ತಗ್ಲಾಕಿಕೊಂಡಿದ್ದಾನೆ.
ನಕಲಿ ಸೋಗಿನಲ್ಲಿ ವಂಚಿಸ್ತಿದ್ದ ಭೂಪ!
ಇವನ ಡೆಸಿಗ್ನೇಶನ್ ಕೇಳಿದ್ರೆ ನೀವ್ ಬೆಚ್ಚಿ ಬೀಳೋದು ಗ್ಯಾರಂಟಿ..! ಈತ ಪಿಯುಸಿ, ಎಸೆಸೆಲ್ಸಿ ಬೋರ್ಡ್ ನ ಚೀಫ್ ಆಫೀಸರ್. ಇಂಡಿಯನ್ ಪೋಸ್ಟ್ನ ಕಂಟ್ರೋಲರ್. ಚೆಸ್ಕಾಂ, ಬೆಸ್ಕಾಂನ ಸೂಪರ್ ಮ್ಯಾನ್. ಬರೀ ಇಷ್ಟೇ ಅಲ್ಲ, ಬೆಂಗಳೂರು ಯುನಿವರ್ಸಿಟಿ, ವಿಟಿಯುನ ಆಫೀಸರ್. ಇನ್ನೂ ಮುಗ್ದಿಲ್ಲ ನಮ್ಮ ದೇಶದ ಅತ್ಯಂತ ಪ್ರತಿಷ್ಠಿತ ಇಸ್ರೋದ ಆಫೀಸರ್ ಕೂಡ ಇವ್ನೇ. ಹೀಗೆ ಹೇಳೋಕೆ ಹೋದ್ರೆ ಆ ವ್ಯಕ್ತಿಯ ಹುದ್ದೆಗಳು ಮುಗಿಯೋದೇ ಇಲ್ಲ. ಅಂದಾಗೆ ಇದೆಲ್ಲಾ ಇವ್ನ ನಿಜವಾದ ಹುದ್ದೆಗಳಲ್ಲ, ಬದಲಾಗಿ ನಿರುದ್ಯೋಗಿ ಯುವಕ, ಯುವತಿಯರನ್ನ ಯಮಾರಿಸಲು ಈತ ಹಾಕಿಕೊಂಡ ನಕಲಿ ವೇಷಗಳಷ್ಟೇ.
ಈ ನಕಲಿ ಅಧಿಕಾರಿ, ನಿರುದ್ಯೋಗಿ ಯುವಕ-ಯುವತಿಯರನ್ನೇ ಟಾರ್ಗೆಟ್ ಮಾಡುತ್ತಾ, ಊಸರವಳ್ಳಿ ಹೇಗೆ ಬಣ್ಣ ಬದಲಾಯಿಸುತ್ತೋ ಹಾಗೆ ತನ್ನ ಹುದ್ದೆಯನ್ನ ನಿರುದ್ಯೋಗಿ ಯುವಕ-ಯುವತಿಯರ ಕ್ವಾಲಿಫಿಕೇಶನ್ಗೆ ತಕ್ಕಂತೆ ಬದಲಾಯಿಸಿಕೊಳ್ತಿದ್ದ. ಈ ಖತರ್ನಾಕ್ ಕ್ರಿಮಿನಲ್ನ ಹೆಸ್ರು ಪ್ರಭಾಕರ್, ಬೆಂಗಳೂರಿನ ಭೈರವೇಶ್ವರ ನಗರದ ನಿವಾಸಿ. ಬಿಬಿಎಂ ಒದ್ಕೊಂಡಿರೋ ಈತ ರಿಯಲ್ ಎಸ್ಟೇಟ್ ಅದು ಇದು ಅಂತಾ ಹಾಳು-ಮುಳು ಕೆಲ್ಸಗಳನ್ನ ಮಾಡ್ಕೊಂಡಿದ್ದ. ಅಷ್ಟರಲ್ಲೇ ಇದ್ದಿದ್ರೆ ಇವತ್ತು ಜೀವನ ಜಿಂಗಲಾಲ ಆಗಿರೋದು. ಆದ್ರೆ ಅತಿಯಾದ ಹಣದ ಆಸೆಗೆ ಬಿದ್ದು, ಇವತ್ತು ಕಾಫಿನಾಡ ಪೊಲೀಸ್ರಿಗೆ ಸರಿಯಾಗಿಯೇ ತಗ್ಲಾಕಿಕೊಂಡಿದ್ದಾನೆ .
ಎಲ್ಲೆಲ್ಲಿ ವಂಚಿಸಿದ್ದ.? ಒಟ್ಟು ಪೀಕಿರೋ ಹಣವೆಷ್ಟು..?
ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ಅನೇಕ ಜಿಲ್ಲೆಗಳ ಯುವಕ-ಯುವತಿಯರಿಗೆ ಈತ ಸರಿಯಾಗಿಯೇ ಯಮಾರಿಸಿದ್ದಾನೆ. ಕೆಲ್ಸ ಕೊಡಿಸುವುದಾಗಿ ನಂಬಿಸಿ ಒಬ್ಬೊಬ್ಬರ ಹತ್ತಿರವೂ ಕನಿಷ್ಠ 7 ಲಕ್ಷದಿಂದ 15 ಲಕ್ಷದವರೆಗೂ ವಸೂಲಿ ಮಾಡಿದ್ದಾನೆ. ಅಂದಾಗೆ ಈತ ಕಳೆದ ಒಂದೂವರೆ ವರ್ಷದಲ್ಲಿ ಪೀಕಿರೋದು ಬರೋಬ್ಬರಿ 2 ಕೋಟಿಗೂ ಅಧಿಕ ಅಂದ್ರೆ ನೀವು ನಂಬ್ಲೇಬೇಕು.
ಬಿಟ್ಟಿ ದುಡ್ಡಲ್ಲಿ ಹೆಲಿಕಾಫ್ಟರ್ ಶೋಕಿ..!
ಈ ಆಸಾಮಿ ನಿರುದ್ಯೋಗಿಗಳನ್ನೇ ಬಂಡವಾಳ ಮಾಡಿಕೊಂಡು ಇಲ್ಲಿವರೆಗೂ ಕೋಟಿಗಟ್ಟಲೇ ವಂಚಿಸುತ್ತಲೇ ಬರ್ತಿದ್ದ. ಹೀಗೆ ಬಂದ ಬಿಟ್ಟಿ ದುಡ್ಡಲ್ಲಿ, ತಿರುಪತಿ, ವೈಷ್ಣೋದೇವಿ ಸೇರಿದಂತೆ ಹಲವೆಡೆ ಹೆಲಿಕಾಪ್ಟರ್ನ ಬಾಡಿಗೆ ಮಾಡ್ಕೊಂಡ್ ಕುಟುಂಬ ಸಮೇತ ಹೋಗಿಬರ್ತಿದ್ದ ಈ ಖತರ್ನಾಕ್. ಕೊನೆಗೆ ಈತನಿಗೆ 7 ಲಕ್ಷ ಕೊಟ್ಟು ಯಮಾರಿದ್ದ ಚಿಕ್ಕಮಗಳೂರಿನ ಉಮೇಶ್, ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದ.
ದೂರನ್ನ ಗಂಭೀರವಾಗಿ ಪರಿಗಣಿಸಿದ್ದ ನಗರ ಠಾಣೆ ಇನ್ಸ್ಪೆಕ್ಟರ್ ತೇಜಸ್ವಿ, ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಅವರ ಜೊತೆ ಮಾತಾಡಿ ಈ ನಕಲಿ ಅಧಿಕಾರಿಯನ್ನ ಖೆಡ್ಡಾಕ್ಕೆ ಕೆಡವಲು ಅಖಾಡ ಸಿದ್ದಪಡಿಸಿದ್ರು. ಕೊನೆಗೆ ಚಿಕ್ಕಮಗಳೂರಲ್ಲೇ ಆರೋಪಿ ಕೈಗೆ ಕೋಳ ತೊಡಿಸಿದ ಇನ್ಸ್ಪೆಕ್ಟರ್ ತೇಜಸ್ವಿ ಟೀಂ, ಆರೋಪಿಯ ಜನ್ಮ ಜಾಲಾಡಿ, ಸದ್ಯ 80 ಲಕ್ಷದಷ್ಟು ಹಣ ರಿಕವರಿ ಮಾಡಿ ಖತರ್ನಾಕ್ ಆಸಾಮಿಗೆ ಜೈಲಿನ ದಾರಿ ತೋರಿಸಿದ್ದಾರೆ. ಆರೋಪಿ ಪ್ರಭಾಕರ್ ಜೊತೆಗೆ ಆತನೊಂದಿಗೆ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ ಶಿವರಾಜ್ನನ್ನ ಕೂಡ ಪೊಲೀಸರು ಬಂಧಿಸಿದ್ದಾರೆ.
ಸ್ಪಾಟಲ್ಲೇ ಜಾಬ್ ಲೆಟರ್..! ಸಂಬಳವೂ ನೀಡ್ತಿದ್ದ..!
ಈ ಕಿಲಾಡಿ ಆಫೀಸರ್, ಕೇವಲ ಕೆಲಸದ ಆಸೆ ಮಾತ್ರ ತೋರಿಸುತ್ತಿರಲಿಲ್ಲ. ಈತನ ಜೊತೆ ಯಾವಾಗ್ಲೂ ಬಂಡಲ್ ಗಟ್ಟಲೇ ಶಿಕ್ಷಣ ಇಲಾಖೆ, ಇಸ್ರೋ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ನಕಲಿ ಆಫರ್ ಲೆಟರ್, ಅಪಾಯಿಂಟ್ಮೆಂಟ್ ಲೆಟರ್ಗಳನ್ನ ಇಟ್ಟುಕೊಳ್ಳುತ್ತಿದ್ದ. ಈ ಆಫರ್ ಲೆಟರ್, ಅಪಾಯಿಂಟ್ಮೆಂಟ್ ಲೆಟರ್ ನೋಡಿದ ಯಾರಿಗೂ ಕೂಡ ಅನುಮಾನವೇ ಬಾರದ ರೀತಿಯಲ್ಲಿ ವ್ಯವಹರಿಸುತ್ತಿದ್ದ. ಅಲ್ಲೇ ಡ್ರಾ, ಅಲ್ಲೇ ಬಹುಮಾನ ಅನ್ನೋ ಹಾಗೆ ಹಣ ತೆಗೆದುಕೊಳ್ಳುತ್ತಲೇ, ಅವರಿಗೆ ತನ್ನಲ್ಲಿದ್ದ ನಕಲಿ ಅಪಾಯಿಂಟ್ಮೆಂಟ್ ಲೆಟರನ್ನ ನೀಡ್ತಿದ್ದ.
ಕೆಲವರಿಗೆ ಒಂದು ತಿಂಗಳು, ಎರಡು ತಿಂಗಳು ಸಂಬಳ ಕೂಡ ಕೊಟ್ಟು ಮತ್ತಷ್ಟು ಜನರು ಬಲೆಗೆ ಬೀಳುವಂತೆ ಮೋಸಹೋದವರನ್ನ ಪರೋಕ್ಷವಾಗಿ ಪ್ರಚೋದಿಸುತ್ತಿದ್ದ. ಸದ್ಯ ಈ ಕಿಲಾಡಿ, ನಕಲಿ ಆಫೀಸರನ್ನ ಕಾಫಿನಾಡ ಪೊಲೀಸ್ರು ಲಾಕ್ ಮಾಡಿ ಕೃಷ್ಣನ ಜನ್ಮಸ್ಥಳಕ್ಕೆ ಬಿಟ್ಟಿದ್ದಾರೆ. ಒಟ್ನಲ್ಲಿ ಕೋಟಿಯ ಮಿಕ ಸಿಕ್ಕಿಬಿದ್ದಿದ್ದರಿಂದ ಭವಿಷ್ಯದಲ್ಲಿ ಇನ್ನೂ ಹಲವರು ಮೋಸ ಹೋಗೋದು ತಪ್ಪಿದಂತಾಗಿದೆ, ಆದ್ರೆ ಈತನನ್ನ ನಂಬಿ ಹಣ ಕಳೆದುಕೊಂಡವರು ಕೆಲ್ಸನೂ ಬೇಡ, ಏನೂ ಬೇಡ. ಕೊಟ್ಟಿರೋ ಹಣ ವಾಪಸ್ ಸಿಕ್ಕಿದ್ರೆ ಸಾಕು ಅಂತಾ ಕೈ ಕೈ ಹಿಸುಕಿಕೊಳ್ತಿದ್ದಾರೆ.
-ಪ್ರಶಾಂತ್, ಚಿಕ್ಕಮಗಳೂರು
Published On - 6:04 pm, Thu, 12 November 20