2015ರಿಂದ 2035ರ ಮಧ್ಯೆ ಸಾಗರ ವಲಯದಲ್ಲಿ 6 ಲಕ್ಷ ಕೋಟಿ ಹೂಡಿಕೆ ಸಾಧ್ಯತೆ: ನರೇಂದ್ರ ಮೋದಿ

|

Updated on: Mar 02, 2021 | 5:35 PM

Maritime India 2021 Summit: ಮೂರು ದಿನಗಳ ಭಾರತೀಯ ಸಾಗರ ಶೃಂಗಸಭೆ 2021ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾತನಾಡಿ, 2015ರಿಂದ 2035ನೇ ಇಸವಿ ಮಧ್ಯೆ ಅನುಷ್ಠಾನಗೊಳಿಸಬಹುದಾದ 6 ಲಕ್ಷ ಕೋಟಿ ರೂಪಾಯಿಯ 674ಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಲಾಗಿದೆ ಎಂದಿದ್ದಾರೆ.

2015ರಿಂದ 2035ರ ಮಧ್ಯೆ ಸಾಗರ ವಲಯದಲ್ಲಿ 6 ಲಕ್ಷ ಕೋಟಿ ಹೂಡಿಕೆ ಸಾಧ್ಯತೆ: ನರೇಂದ್ರ ಮೋದಿ
ನರೇಂದ್ರ ಮೋದಿ
Follow us on

‘2014ರಲ್ಲಿ ನಮ್ಮ ಪ್ರಮುಖ ಬಂದರುಗಳ ಸಾಮರ್ಥ್ಯ ವಾರ್ಷಿಕವಾಗಿ ಸುಮಾರು 870 ಮಿಲಿಯನ್ ಟನ್ ಇತ್ತು. ಆ ಸಾಮರ್ಥ್ಯ ಈಗ ಸುಮಾರು 1500 ಮಿಲಿಯನ್ ಟನ್​ಗೆ ಹೆಚ್ಚಿಸಲಾಗಿದೆ. ಇದರಿಂದ ಬಂದರುಗಳಿಗೆ ಮಾತ್ರ ಅನುಕೂಲವಾಗಿಲ್ಲ. ಒಟ್ಟಾರೆ ಆರ್ಥಿಕತೆಗೆ ಉತ್ತೇಜನ ಸಿಕ್ಕಿದೆ. ನಮ್ಮ ಉತ್ಪನ್ನಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿ ಮಾಡುವುದಕ್ಕೆ ಸಾಧ್ಯವಾಗಿದೆ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವು ಹೇಳಿದ್ದಾರೆ. ಭಾರತೀಯ ಸಾಗರ ಶೃಂಗಸಭೆ 2021ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಕಾಂಡ್ಲಾದಲ್ಲಿನ ವಧಾವನ್, ಪಾರಾದೀಪ್ ಮತ್ತು ದೀನದಯಾಳ್ ಬಂದರುಗಳಲ್ಲಿ ವಿಶ್ವದರ್ಜೆಯ ಮೂಲಸೌಕರ್ಯ ನಿಯೋಜಿಸುತ್ತಿರುವ ಬಗ್ಗೆ ದೊಡ್ಡ ಯೋಜನೆಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದಿದ್ದಾರೆ.

ಹೊಸ ಸಾಗರ ಮೂಲಸೌಕರ್ಯಗಳಿಂದ ಜೀವನ ಸುಗಮವಾಗಲಿದೆ. ಸೀ- ಪ್ಲೇನ್ ಕಾರ್ಯಾಚರಣೆಯ ಅಭಿವೃದ್ಧಿಗೆ 16 ಕಡೆ ವಾಟರ್ ಡ್ರೋಮ್​ಗಳನ್ನು ನಿರ್ಮಿಸಲಾಗುವುದು. ಐದು ರಾಷ್ಟ್ರೀಯ ಜಲಮಾರ್ಗಗಳಲ್ಲಿ ರಿವರ್ ಕ್ರೂಸ್ ಟರ್ಮಿನಲ್ ಮೂಲಸೌಕರ್ಯ ಮತ್ತು ಜೆಟ್ಟಿಗಳ ನಿರ್ಮಾಣ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.

ಸಾರಿಗೆ ಗ್ರಿಡ್ ಮೂಲಕ ಪೂರ್ವ ಜಲಮಾರ್ಗಗಳ ಸಂಪರ್ಕ
2030ನೇ ಇಸವಿ ಹೊತ್ತಿಗೆ 23 ಜಲಮಾರ್ಗಗಳ ಕಾರ್ಯಾಚರಣೆಗೆ ಉದ್ದೇಶಿಸಿದ್ದೇವೆ ಎಂದಿರುವ ಅವರು, ಪೂರ್ವ ಜಲಮಾರ್ಗಗಳನ್ನು ಸಾರಿಗೆ ಗ್ರಿಡ್ ಮೂಲಕ ಸಂಪರ್ಕಿಸುತ್ತಿದ್ದೇವೆ. ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್ಮಾರ್ ಜತೆಗೆ ಪ್ರಾದೇಶಿಕ ಸಂಪರ್ಕ ಸಾಧಿಸಲಾಗುವುದು. ಇದರಿಂದಾಗಿ ಪರಿಣಾಮಕಾರಿ ಪ್ರಾದೇಶಿಕ ವ್ಯಾಪಾರ ಮತ್ತು ಸಹಕಾರ ಬಲವರ್ಧನೆ ಆಗುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮೂಲಸೌಕರ್ಯದ ಅಭಿವೃದ್ಧಿ ಮಾಡುವ ಮೂಲಕ ಆಯ್ದ ಬಂದರುಗಳಲ್ಲಿ ದೇಶೀಯ ಹಾಗೂ ಅಂತರರಾಷ್ಟ್ರೂಯ ಕ್ರೂಸ್ ಟರ್ಮಿನಲ್​​ಗಳನ್ನು ಅಭಿವೃದ್ಧಿ ಮಾಡುತ್ತೇವೆ. 2023ರ ಹೊತ್ತಿಗೆ ಅವುಗಳನ್ನು ಮೇಲ್ದರ್ಜೆಗೆ ಏರಿಸುತ್ತೇವೆ. ಭಾರತದ ಕರಾವಳಿಯ ಉದ್ದಕ್ಕೂ 189 ಲೈಟ್ ಹೌಸ್​​ಗಳಿವೆ. ಆ ಪೈಕಿ 78 ಲೈಟ್ ಹೌಸ್​ಗಳನ್ನು ಪ್ರವಾಸೋದ್ಯಮ ಉತ್ತೇಜನಕ್ಕೆ ಸಿದ್ಧಗೊಳಿಸುತ್ತೇವೆ. ಈಗಾಗಲೇ ಇರುವ ಲೈಟ್​ಹೌಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ವಿಶಿಷ್ಟ ಸಾಗರ ಪ್ರವಾಸೋದ್ಯಮ ತಾಣಗಳನ್ನಾಗಿ ಅಭಿವೃದ್ಧಿ ಮಾಡ್ತೀವಿ. ಕೊಚ್ಚಿ, ಮುಂಬೈ, ಗುಜರಾತ್, ಗೋವಾ ಸೇರಿಕೊಂಡಂತೆ ವಿವಿಧ ರಾಜ್ಯ ಮತ್ತು ನಗರಗಳಲ್ಲಿ ಜಲಸಾರಿಗೆ ವ್ಯವಸ್ಥೆ ಪರಿಚಯಿಸುತ್ತೇವೆ ಎಂದಿದ್ದಾರೆ.

400 ಯೋಜನೆಗಳ ಪಟ್ಟಿ ಸಿದ್ಧ
ಸಾಗರ ವಲಯದ ಕಾಮಗಾರಿಗಳು ತಡ ಆಗಬಾರದು ಎಂಬ ದೃಷ್ಟಿಯಿಂದ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗಗಳ ಸಚಿವಾಲಯ ಎಂದು ಮರುನಾಮಕರಣ ಮಾಡಿ, ವ್ಯಾಪ್ತಿ ವಿಸ್ತರಿಸಲಾಗಿದೆ. ಇನ್ನು ಹೂಡಿಕೆಗೆ ಸೂಕ್ತವಾಗುವಂಥ 400 ಯೋಜನೆಗಳ ಪಟ್ಟಿಯನ್ನು ಸಚಿವಾಲಯ ಸಿದ್ಧಮಾಡಿಕೊಂಡಿದೆ. ಇವುಗಳಿಗೆ 2.25 ಲಕ್ಷ ಕೋಟಿ ರೂಪಾಯಿ ಸಂಭವನೀಯ ಹೂಡಿಕೆ ಸಾಮರ್ಥ್ಯ ಇದೆ. ಭಾರತೀಯ ಸಾಗರ ವಿಷನ್ 2030ಕ್ಕೆ ಚಾಲನೆ ನೀಡಲಾಗಿದೆ. 2016ರಲ್ಲಿ ಸಾಗರಮಾಲಾ ಯೋಜನೆ ಪ್ರಕಟಿಸಿದೆ. 2015ರಿಂದ 2035ನೇ ಇಸವಿ ಮಧ್ಯೆ ಅನುಷ್ಠಾನಗೊಳಿಸಬಹುದಾದ 6 ಲಕ್ಷ ಕೋಟಿ ರೂಪಾಯಿಯ 674ಕ್ಕೂ ಹೆಚ್ಚು ಯೋಜನೆಗಳನ್ನು ಗುರುತಿಸಲಾಗಿದೆ ಎಂದಿದ್ದಾರೆ.

ಈ ವಲಯದಲ್ಲಿ ಭಾರತವು ಸಹಜವಾಗಿಯೇ ನಾಯಕನ ಸ್ಥಾನದಲ್ಲಿದೆ. ನಮ್ಮ ದೇಶ ಶ್ರೀಮಂತವಾದ ಸಾಗರ ಇತಿಹಾಸವನ್ನು ಹೊಂದಿದೆ. ನಮ್ಮ ಕರಾವಳಿಗಳಲ್ಲಿ ನಾಗರಿಕತೆಗಳು ಆರಂಭವಾಗಿವೆ. ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಬಂದರುಗಳು ಅತ್ಯಂತ ಪ್ರಮುಖ ವ್ಯಾಪಾರಿ ಕೇಂದ್ರಗಳಾಗಿದ್ದವು. ನಮ್ಮ ಕರಾವಳಿ ತೀರಗಳು ವಿಶ್ವಕ್ಕೆ ಸಂಪರ್ಕ ಕಲ್ಪಿಸಿದ್ದವು ಎಂದು ನರೇಂದ್ರ ಮೋದಿ ಹೇಳಿದರು. ಈ ಸಂದರ್ಭದಲ್ಲಿ ಮನ್​​ಸುಖ್ ಭಾಯ್ ಮಾಂಡವೀಯ, ಧರ್ಮೇಂದ್ರ ಪ್ರಧಾನ್ ಹಾಗೂ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಿದ್ದರು.

ಇದನ್ನೂ ಓದಿ: Petrol Diesel Rate: ಬೇಸಿಗೆಯಲ್ಲಿ ತೈಲ ದರ ಇಳಿಯುತ್ತೆ ಎಂದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್; ಕರ್ನಾಟಕದ ಯಾವ ನಗರದಲ್ಲಿ ಎಷ್ಟಿದೆ?