
ಬೆಳಗಾವಿ: ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ ಮಾಡಿರುವ ಘಟನೆ ಗ್ಯಾಂಗ್‌ವಾಡಿಯಲ್ಲಿ ನಡೆದಿದೆ. ಶೆಹಬಾಜ್ ಪಠಾಣ್ ಅಲಿಯಾಸ್ ಶೆಹಬಾಜ್ ರೌಡಿ ಕೊಲೆಯಾದವ.
ನಿನ್ನೆ ರಾತ್ರಿ 11ಕ್ಕೆ ಬರ್ತ್ ಡೇ ಪಾರ್ಟಿ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಟಾಟಾ ಸುಮೋದಲ್ಲಿ ಬಂದ ದುಷ್ಕರ್ಮಿಗಳು ಬೈಕ್ಗೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ಶೆಹಬಾಜ್ ಕೆಳಕ್ಕೆ ಬಿದಿದ್ದಾನೆ. ಬಳಿಕ ದುಷ್ಕರ್ಮಿಗಳು ಆತನ ಬೆನ್ನಟ್ಟಿದ್ದಾರೆ. ಶೆಹಬಾಜ್ ತನ್ನ ಪ್ರಾಣ ಉಳಿಸಿಕೊಳ್ಳಲು ನಿವೃತ್ತ ಡಿವೈಎಸ್‌ಪಿ ಮನೆಗೆ ನುಗಿದ್ದಾನೆ.
ಆದರೂ ಬಿಡದ ಕಿರಾತಕರು ನಿವೃತ್ತ ಡಿವೈಎಸ್‌ಪಿ ಮನೆಯಲ್ಲೇ ಅವರ ಕಣ್ಣ ಮುಂದೆಯೇ ಕೊಚ್ಚಿ, ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೈಯಲ್ಲಿ ಮಾರಕಾಸ್ತ್ರ ಹಿಡಿದು ಬೆನ್ನಟ್ಟುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ತೀವ್ರ ಶೋಧ ನಡೆಯುತ್ತಿದೆ.