
ಬೆಂಗಳೂರು: ಬೆಂಗಳೂರಿನಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಾಗುತ್ತಿರುವವರ ಸಂಖ್ಯೆ ಮಾತ್ರ ದಿನೇ ದಿನೇ ಕಡಿಮೆಯಾಗುತ್ತಿದೆ. ಇದು ಅಚ್ಚರಿಯಾದರೂ ಸತ್ಯ.
ಹೌದು ಬೆಂಗಳೂರಿನಲ್ಲಿರುವ ಬಹುತೇಕ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದೆ. ಇದು ಪ್ರಕರಣಗಳು ಹೆಚ್ಚುತ್ತಿದ್ದರೂ ಜನರು ಕೋವಿಡ್ ಕೇರ್ ಕೇಂದ್ರಗಳಿಗೆ ಹೋಗದೇ ಮನೆಯಲ್ಲಿಯೇ ಹೋಮ್ ಐಸೋಲೇಶನ್‌ಗೊಳಗಾಗುತ್ತಿರೋದು ಹೆಚ್ಚಾಗುತ್ತಿದೆ. ಹೀಗಾಗಿ ಬಹುತೇಕ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಬಹುತೇಕ ಬೆಡ್‌ಗಳು ಖಾಲಿ ಹೊಡೆಯುತ್ತಿರೋದು ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿರುವ ಒಟ್ಟು 12 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ 4,576 ಬೆಡ್‌ಗಳು ಲಭ್ಯವಿವೆ. ಆದ್ರೆ ಈ 4576 ಬೆಡ್ ಗಳ ಪೈಕಿ 3 ಸಾವಿರ ಬೆಡ್‌ಗಳು ಮಾತ್ರ ಭರ್ತಿಯಾಗಿವೆ. ಬಿಐಇಸಿನಲ್ಲಿ 10 ಸಾವಿರ ಬೆಡ್ ಗಳ ಪೈಕಿ 5 ಸಾವಿರ ಬೆಡ್‌ಗಳು ಉಪಯೋಗಕ್ಕೆ ಲಭ್ಯವಿವೆ. ಆದರೂ ಕೇವಲ 1500 ಬೆಡ್‌ಗಳ ಬಳಕೆ ಮಾತ್ರ ಮಾಡಲಾಗ್ತಿದೆ. 1500 ಬೆಡ್‌ಗಳಿದ್ದರೂ 700 ರಿಂದ 800 ಸೋಂಕಿತರು ಮಾತ್ರ ದಾಖಲಾಗಿದ್ದಾರೆ. ಉಳಿದ ಬೆಡ್‌ಗಳು ಖಾಲಿ ಹೊಡೆಯುತ್ತಿವೆ.
ಕೋವಿಡ್ ಕೇರ್ ಸೆಂಟರ್‌ಗಳಿಗಾಗಿ ಜಿಕೆವಿಕೆ ಹಾಸ್ಟೆಲ್, ಜ್ಞಾನಭಾರತಿ ಹಾಸ್ಟೆಲ್, ಹಜ್ ಭವನ, ಸರ್ಕಾರಿ ಆಯುರ್ವೇದಿಕ್ ಕಾಲೇಜು, ಕೋರಮಂಗಲ ಒಳಾಂಣ ಕ್ರೀಡಾಂಗಣ, ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳು, ರವಿಶಂಕರ್ ಗುರೂಜಿ ಆಸ್ಪತ್ರೆ, ಹೆಚ್ ಎ ಎಲ್, ಬಿಐಇಸಿ, ಜ್ಞಾನ ಭಾರತಿ ನ್ಯೂ ಗರ್ಲ್ಸ್ ಹಾಸ್ಟೆಲ್ ಸೇರಿದಂತೆ ಒಟ್ಟು 12 ಕಡೆ ಕೇರ್ ಸೆಂಟರ್ ನಿರ್ಮಾಣ ಮಾಡಲಾಗಿದೆ.
ಹೆಚ್ಚಿನ ಸೋಂಕಿತರು ಹೋಮ್ ಐಸೋಲೇಶನ್ ಆಗುತ್ತಿರೋದ್ರಿಂದ ಕಾಲೇಜು ಹಾಸ್ಟೆಲ್‌ಗಳನ್ನ ಕೇರ್ ಸೆಂಟರ್ ನಿಂದ ಮುಕ್ತಿ ನೀಡುವಂತೆ ಆಯಾ ವಿಶ್ವವಿದ್ಯಾಲಯಗಳಿಂದ ಮನವಿ ಬರುತ್ತಿವೆ. ಹೀಗಾಗಿ ಕೆಲ ಕೇರ್ ಸೆಂಟರ್‌ಗಳನ್ನ ಕೈ ಬಿಡುವ ಬಗ್ಗೆ ಚರ್ಚೆ ನಡೆದಿದ್ದು, ಖಾಲಿ ಬಿದ್ದಿರುವ ಬೆಡ್ ಮತ್ತು ಕಾಟ್ ಗಳನ್ನ ಸರ್ಕಾರಿ ಹಾಸ್ಟೆಲ್ ಗಳಿಗೆ ಶಿಫ್ಟ್ ಮಾಡುವ ಕುರಿತು ಚರ್ಚೆ ನಡೆಸಲಾಗುತ್ತಿದೆ.
ಆದರೆ ಇಲ್ಲಿವರೆಗೂ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಮುಂದಿನ ಒಂದೆರಡು ವಾರಗಳಲ್ಲಿ ಪರಿಸ್ಥಿತಿ ನೋಡಿಕೊಂಡು, ಸರ್ಕಾರದ ಆದೇಶದನ್ವಯ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳು ಪ್ಲಾನ್ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.