ಕೋಲಾರ: ಇಷ್ಟು ದಿನ ಚೆನ್ನೈ ಮಾರುಕಟ್ಟೆಯಿಂದ ಸಾಕಷ್ಟು ಆತಂಕ ಎದುರಿಸಿದ್ದ ಕೋಲಾರಕ್ಕೆ ಈಗ ಸಲೂನ್ ಶಾಪ್ನಿಂದ ಕೊರೊನಾ ಆತಂಕ ಎದುರಾಗಿದೆ. ಮಲೇಷಿಯಾದಿಂದ ಬಂದ ವ್ಯಕ್ತಿಯೊಬ್ಬನ ಕ್ವಾರಂಟೈನ್ ಉಲ್ಲಂಘನೆ ಹಾಗೂ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಕೋಲಾರದಲ್ಲಿ ಢವ ಢವ ಶುರುವಾಗಿದೆ.
ಅಧಿಕಾರಿಗಳು ಮಾಡಿದ ಎಡವಟ್ಟು ಏನು?
ಕೊರೊನಾ ಸೋಂಕಿನಿಂದ ಅಂತಾರಾಷ್ಟ್ರೀಯ ವಿಮಾನ ಸಂಚಾರ ಬಂದ್ ಆಗಿತ್ತು. ವಿದೇಶದಲ್ಲಿ ಸಿಕ್ಕಿಕೊಂಡಿದ್ದ ಸಾವಿರಾರು ಜನ ಭಾರತೀಯರನ್ನು ತಮ್ಮ ತಾಯ್ನಾಡಿಗೆ ಕರೆದುಕೊಂಡು ಬರಬೇಕೆಂದು ನಿರ್ಧರಿಸಿದ ಸರ್ಕಾರ ಇದೇ ಮೇ 22 ರಂದು ಹೊರ ದೇಶದಲ್ಲಿದ್ದವರನ್ನು ಕರೆತಂದಿತ್ತು. ಆ ಪೈಕಿ ಮಲೇಷಿಯಾದಿಂದ ಬಂದಿದ್ದ ಬಂಗಾರಪೇಟೆ ಮೂಲದ ಟೆಕ್ಕಿ ಪಿ 3186 ಕೂಡಾ ಒಬ್ಬ.
ಮೇ 22 ರಂದು ಭಾರತಕ್ಕೆ ಬಂದವನನ್ನು ಬೆಂಗಳೂರಿನ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ವೇಳೆ ಮೇ 27 ರಂದು ಆ ವ್ಯಕ್ತಿಯ ಗಂಟಲು ದ್ರವದ ಮಾದರಿ ಹಾಗೂ ರಕ್ತದ ಮಾದರಿ ಸಂಗ್ರಹಿಸಲಾಗಿತ್ತು. ನಂತರ ವರದಿ ಬರುವ ಮುನ್ನವೇ ಮೇ 29 ರಂದು ಟೆಕ್ಕಿಯನ್ನು ಹೋಂ ಕ್ವಾರಂಟೈನ್ನಲ್ಲಿರಲು ಸೂಚನೆ ನೀಡಿ ಕಳುಹಿಸಲಾಗಿತ್ತು. ಈ ಟೆಕ್ಕಿಯ ಪರೀಕ್ಷಾ ವರದಿ ಬರುವ ಮುನ್ನವೇ ಮನೆಗೆ ಕಳುಹಿಸಿ ಇಲ್ಲಿ ಬೆಂಗಳೂರಿನ ಆರೋಗ್ಯ ಇಲಾಖೆ ಮಾಡಿದ ಎಡವಟ್ಟಿನಿಂದ ಈಗ ಬಂಗಾರಪೇಟೆ ಪಟ್ಟಣದಲ್ಲಿ ಬಹುದೊಡ್ಡ ಆತಂಕವೊಂದು ಶುರುವಾಗಿದೆ.
ಮೇ 29 ರಂದು ಬಂಗಾರಪೇಟೆಗೆ ಬಂದಿದ್ದ ವ್ಯಕ್ತಿ ತನ್ನ ವಯಸ್ಸಾದ ತಂದೆ-ತಾಯಿಯ ಜೊತೆಗೆದ್ದ. ಅಷ್ಟೇ ಅಲ್ಲದೆ ಮೇ 31 ರಂದು ಬೆಳಗ್ಗೆ ಅಲ್ಲೇ ಅವರ ಮನೆ ಬಳಿ ಇದ್ದಂತ ಸಲೂನ್ನಲ್ಲಿ ಹೋಗಿ ಹೇರ್ ಕಟ್ ಮಾಡಿಸಿಕೊಂಡಿದ್ದ. ಆದ್ರೆ ಮಧ್ಯಾಹ್ನದ ಹೊತ್ತಿಗೆ ಈ ಟೆಕ್ಕಿಯ ವರದಿಯಲ್ಲಿ ಕೊರೊನಾ ಪಾಸಿಟಿವ್ ಬಂದಿದೆ. ಇದು ಸದ್ಯ ಆತಂಕಕ್ಕೆ ಕಾರಣವಾಗಿದೆ.
ಸಲೂನ್ಗೆ ಬಂದಿದ್ದವರಿಗಾಗಿ ಮೈಕ್ ಹಿಡಿದು ಜಾಲಾಡಿದ್ರು!
ಇನ್ನು ಆತನ ಟ್ರಾವೆಲ್ ಹಿಸ್ಟರಿ ಪರೀಕ್ಷೆ ಮಾಡಿದಾಗಲೇ ಒಂದು ಕ್ಷಣ ಅವರಿಗೆ ಶಾಕ್ ಆಗಿತ್ತು. ಕಾರಣ ಆತ ಭಾನುವಾರ ಬೆಳಗ್ಗೆ ಅಲ್ಲೇ ಮನೆ ಬಳಿ ಇದ್ದ ಸಲೂನ್ ಶಾಪ್ನಲ್ಲಿ ಕಟಿಂಗ್ ಮಾಡಿಸಿಕೊಂಡಿದ್ದ. ತಕ್ಷಣ ಸಲೂನ್ ಶಾಪ್ ಮಾಲೀಕನನ್ನು ಕ್ವಾರಂಟೈನ್ ಮಾಡಿ, ಸೋಂಕಿತ ಟೆಕ್ಕಿ ಬಂದು ಹೋದ ನಂತರ ಯಾರ್ಯಾರು ಶಾಪ್ಗೆ ಬಂದು ಹೋದರು ಅನ್ನೋದನ್ನು ಹುಡುಕಾಟ ಶುರು ಮಾಡಿದ್ರು. ಅಲ್ಲಿ ಹತ್ತಕ್ಕೂ ಹೆಚ್ಚು ಜನ ಬಂದು ಹೋಗಿರುವ ಮಾಹಿತಿ ಪಡೆದ ಅಧಿಕಾರಿಗಳು ಬೇರೆ ದಾರಿ ಕಾಣದೆ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಮೈಕ್ ಹಿಡಿದು ಅನೌನ್ಸ್ ಮಾಡೋದಕ್ಕೆ ಆರಂಭ ಮಾಡಿದ್ರು.
ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ರಣಕೇಕೆ ಜೋರಾಗಿದ್ದು, ಇಷ್ಟು ದಿನ ಹೊರ ರಾಜ್ಯಕ್ಕೆ ಹೋಗಿ ಬಂದವರಿಂದ ಸೋಂಕು ಹರಡಿ ಕಂಗಾಲಾಗಿದ್ದ ಜಿಲ್ಲೆಯ ಜನರಲ್ಲಿ, ಇನ್ಮುಂದೆ ವಿದೇಶಗಳಿಗೆ ಹೋಗಿ ಬಂದವರಿಂದ ಸೋಂಕು ಹರಡುವ ಭೀತಿ ಶುರುವಾಗಿದೆ.