ಅಂತರಂತರದಲ್ಲಿ ಅಂತರಂಗ ಬೆಳಗುವ ಭಾಷೆ ಎಂಬ ದೀವಿಗೆ: ಆನ್​ಲೈನ್ ಲ್ಯಾಂಗ್ವೇಜ್​ ಲರ್ನಿಂಗ್

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 23, 2020 | 7:58 PM

ಬದುಕಿನ ಓಟದಲ್ಲಿ ಸ್ಥಗಿತಗೊಂಡ ನಮ್ಮ ಆಸಕ್ತಿಗಳನ್ನು ಈಗ ‘ಆನ್​ಲೈನ್​ ಪ್ಯಾಕೇಜ್​’ಗಳು ಮರುಪೂರಣಗೊಳಿಸಲು ಸಹಾಯ ಮಾಡುತ್ತಿವೆ. ಈ ನೆಪದಲ್ಲಿ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತ ಮತ್ತಷ್ಟು ಕ್ರಿಯಾಶೀಲರಾಗುತ್ತಿದ್ದೇವೆ. ನಾವು ಏನೇ ಕಲಿತರೂ ನಮ್ಮ ಪರಿಸರದಿಂದಲೇ. ಇದು ಭಾಷೆಗೂ ಅನ್ವಯಿಸುತ್ತದೆ.

ಅಂತರಂತರದಲ್ಲಿ ಅಂತರಂಗ ಬೆಳಗುವ ಭಾಷೆ ಎಂಬ ದೀವಿಗೆ: ಆನ್​ಲೈನ್ ಲ್ಯಾಂಗ್ವೇಜ್​ ಲರ್ನಿಂಗ್
ಪ್ರಾತಿನಿಧಿಕ ಚಿತ್ರ
Follow us on

ಇನ್ನೇನು ಎಲ್ಲವೂ ನಿಧಾನವಾಗಿ ಸಹಜ ಜೀವನಕ್ಕೆ ಮರಳುತ್ತಿದೆ ಎನ್ನುತ್ತಿರುವಾಗಲೇ ಕೊರೋನಾದಿಂದ ರೂಪಾಂತರಗೊಂಡ ಮತ್ತೊಂದು ವೈರಸ್ ಆತಂಕಕ್ಕೆ ದೂಡಲು ಸಜ್ಜಾಗಿ ನಿಂತಿದೆ. ನಾವು ನಮ್ಮನ್ನು ಎಷ್ಟೇ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದರೂ ನಮ್ಮೊಳಗೆ ಆತಂಕ ಬಿಡುಗಣ್ಣು ಬಿಟ್ಟು ಕುಳಿತಿದೆ. ಈ ಕಣ್ಣು ಸಮಸ್ಥಿತಿಗೆ ಬರಬೇಕೆಂದರೆ ಒಳಗಣ್ಣಿಗೆ ನಾವು ಹೆಚ್ಚು ಪ್ರಾಶಸ್ತ್ಯ ಕೊಡಬೇಕಾದ ಅನಿವಾರ್ಯವಿದೆ. ಈ ಅನಿವಾರ್ಯವೇ ನಮ್ಮ ಕೈಗೆ ಅರಿವು ಎಂಬ ಕಂದೀಲನ್ನು ಕೊಟ್ಟು ಕೈಹಿಡಿದು ನಡೆಸಿಕೊಂಡು ಹೋಗುವಂಥದ್ದು. ಅದು ಭಾಷೆಯೋ, ಕಲೆಯೋ, ವ್ಯವಹಾರವೋ, ಉದ್ಯಮವೋ, ಅಡುಗೆಯೋ ಇನ್ನೊಂದೋ ಮತ್ತೊಂದೋ ಒಟ್ಟು ಆನ್​ಲೈನ್​ ಕಲಿಕೆ-ಕಲಿಸುವಿಕೆಯೆಂಬ ‘ದಾರಿ’.

ಬದುಕಿನ ಓಟದಲ್ಲಿ ಸ್ಥಗಿತಗೊಂಡ ನಮ್ಮ ಆಸಕ್ತಿಗಳನ್ನು ಈಗ ‘ಆನ್​ಲೈನ್​ ಪ್ಯಾಕೇಜ್​’ಗಳು ಮರುಪೂರಣಗೊಳಿಸಲು ಸಹಾಯ ಮಾಡುತ್ತಿವೆ. ಈ ನೆಪದಲ್ಲಿ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತ ಮತ್ತಷ್ಟು ಕ್ರಿಯಾಶೀಲರಾಗುತ್ತಿದ್ದೇವೆ. ನಾವು ಏನೇ ಕಲಿತರೂ ನಮ್ಮ ಪರಿಸರದಿಂದಲೇ. ಇದು ಭಾಷೆಗೂ ಅನ್ವಯಿಸುತ್ತದೆ. ಮುಖಾಮುಖಿಯಾದ ಒಡನಾಟದಿಂದ ಭಾಷೆಯನ್ನು ಕಲಿಯುವ ಮತ್ತು ಕಲಿಸುವ ಸಂಪ್ರದಾಯಕ್ಕೆ ನಾವೆಲ್ಲ ಇಷ್ಟು ವರ್ಷ ಒಳಗೊಂಡಿದ್ದೆವು. ಆದರೆ ಕಾಲವು ನಮ್ಮ ಕಾಲನ್ನು ಕಟ್ಟಿ ಗೂಡಿನೊಳಗೇ ಇರಬೇಕೆಂಬ ನಿಯಮ ಹಾಕುತ್ತಿದ್ದಂತೆ, ಒಳಗಿದ್ದುಕೊಂಡೇ ದೂರ ಹಾರುವುದು ಹೇಗೆ ಎಂಬ ಸಾಧ್ಯತೆಗಳನ್ನು ಹುಡುಕುತ್ತ ಹೊರಟಿದ್ದೇವೆ.

‘ಕೊರೋನಾ ಕಾಲಿಟ್ಟಾಗ ಮುಖಾಮುಖಿಯಾಗಿ ಸ್ಪಂದಿಸದೆ ಭಾಷಾ ಕಲಿಸುವಿಕೆ ಇನ್ನು ಸಾಧ್ಯವೇ ಇಲ್ಲವೇನೋ, ಇದೇ ಕಲಿಸುವಿಕೆಯ ಕೊನೆಯೇನೋ ಅಂದುಕೊಂಡೆ. ಆದರೆ ಆನ್​ಲೈನ್ ಟೀಚಿಂಗ್ ಅನುಭವ ನನಗಂತೂ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿತು. ವಿಶೇಷವಾಗಿ ಅನೌಪಚಾರಿಕ ಬೋಧನೆಯ ಖುಷಿ-ಸುಖವನ್ನು ಅನುಭವಿಸಿದೆ.’ ಮೈಸೂರಿನಲ್ಲಿ ಹನ್ನೆರಡು ವರ್ಷಗಳಿಂದ ಫ್ರೆಂಚ್ ಮತ್ತು ಕನ್ನಡ ಕಲಿಸುತ್ತಿರುವ ಜಯಶ್ರೀ ಜಗನ್ನಾಥ ತಮ್ಮ ಅನುಭವದೊಂದಿಗೆ ತೆರೆದುಕೊಳ್ಳುವುದು ಹೀಗೆ.

ಜಯಶ್ರೀ ಜಗನ್ನಾಥ

‘ನಾನು ಕಲಿಸುವುದು ವಯಸ್ಕರಿಗೆ ಮಾತ್ರ. ಆನ್​ಲೈನ್ ತರಗತಿಗಳಲ್ಲಿ ಮೊದಮೊದಲು ವಿದ್ಯಾರ್ಥಿಗಳಲ್ಲಿ ತಲ್ಲೀನತೆಯ ಕೊರತೆ ಎನ್ನಿಸಿದಾಗ ಅವರನ್ನು ಹೆಚ್ಚು ಹೆಚ್ಚು ಗಮನಿಸಲಾರಂಭಿಸಿದೆ. ಯಾರು ಯಾವುದಕ್ಕೆ ಸ್ಪಂದಿಸುತ್ತಾರೆ ಯಾವ ವಿಷಯ ಅವರ ಮನಸ್ಸನ್ನು ಅರಳಿಸುತ್ತದೆ ಇದೆಲ್ಲವನ್ನೂ ಸ್ಕ್ರೀನ್ ಮೂಲಕ ಗ್ರಹಿಸಲಾರಂಭಿಸಿದೆ.  ಆಪ್ತಸಂವಾದದ ಮೂಲಕ ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳುತ್ತ ಹೋದೆ. ಆಗ ನಾನು ನನ್ನ ‘ಧ್ವನಿ’ಗೆ ಹೆಚ್ಚು ಪ್ರಾಮುಖ್ಯ ಕೊಟ್ಟುಕೊಳ್ಳಬೇಕು ಎನ್ನಿಸಿತು. ಅವರ ಮನೋಭಾವವನ್ನು ಅರ್ಥೈಸಿಕೊಳ್ಳುತ್ತ ಅವರ ಆಸಕ್ತಿ ಅಭಿರುಚಿಗೆ ಅನುಗುಣವಾಗಿ ಕ್ಲಾಸ್​ವರ್ಕ್​, ಹೋಮ್​ವರ್ಕ್ ಯೋಜಿಸಿದೆ. ಗುಂಪಿನಲ್ಲಿ ಹೇಳಿಕೊಡುವುದಕ್ಕಿಂತ ಪ್ರತ್ಯೇಕವಾಗಿ ಹೇಳಿಕೊಟ್ಟಾಗ ಹೆಚ್ಚು ಏಕಾಗ್ರತೆ ಒದಗುತ್ತದೆ ಎನ್ನುವುದು ಪರಸ್ಪರ ಅರ್ಥವಾಗುತ್ತಾ ಹೋಯಿತು.’

ಮುಕ್ತಮನಸ್ಸಿನಿಂದ ಯೋಚಿಸಿ ತೊಡಗಿಕೊಂಡಾಗ ಹಲವಾರು ಸಾಧ್ಯತೆಗಳು ಕಾಣುವುದುಂಟು. ಜಯಶ್ರೀಯವರದು ಸೃಜನಶೀಲ ವ್ಯಕ್ತಿತ್ವ. ವಿದ್ಯಾರ್ಥಿಯ ವೈಯಕ್ತಿಕ ಅಭಿರುಚಿಗೆ ತಕ್ಕಂತೆ ರೂಪಾಂತರಿಸಿ ಕಲಿಸುವ ತಾಳ್ಮೆ, ಜಾಣ್ಮೆ ಅವರ ಭಾವ-ಬುದ್ಧಿಕೋಶದೊಳಗೆ ಸದಾ ಜಾಗೃತವಾಗಿದೆ. ‘ಒಬ್ಬ ವಿದ್ಯಾರ್ಥಿನಿಗೆ ಕವನವೆಂದರೆ ಇಷ್ಟ. ಈ ಮಾಧ್ಯಮದ ಮೂಲಕ ಪ್ರಾಯೋಗಿಕವಾಗಿ ಆಕೆಗೆ ಫ್ರೆಂಚ್ ಕಲಿಸುವುದು ಹೇಗೆ ಎಂದು ಯೋಚಿಸಿ, ಆನ್​ಲೈನಿನಲ್ಲೇ ಬೇರೆಬೇರೆ ಕವಿಗಳ ಕವನಗಳ ಲಿಂಕ್​ ಕಳಿಸಲಾರಂಭಿಸಿದೆ. ಮೊದಮೊದಲು ಹಾಯ್ಕುಗಳು, ನಂತರ ಕವನಗಳು ಹೀಗೆ ಅನುವಾದದ ಮೂಲಕ ಕಲಿಕೆ ಸಾಗಿತು. ಯಾವ ಸಮಯದಲ್ಲಿಯೂ ಪರಸ್ಪರ ಸಂಪರ್ಕ ಸಾಧಿಸಬಹುದಾಗಿದ್ದರಿಂದ ನಾನಿದ್ದ ಜಾಗದಿಂದಲೇ ವಸ್ತುಗಳ ಫೋಟೋ ತೆಗೆದು ಇದಕ್ಕೆ ಫ್ರೆಂಚಿನಲ್ಲಿ ಏನು ಹೇಳುತ್ತಾರೆ ಎಂದು ಕೇಳಲಾರಂಭಿಸಿದೆ. ಅದೊಂದು ಪಲ್ಯವೋ, ಚಮಚವೋ, ಚಪ್ಪಲಿಯೋ, ನಾಯಿಯೋ ಇನ್ನೇನೋ.’

‘ಅಮೆರಿಕದ ಹುಡುಗಿಯೊಬ್ಬಳಿಗೆ ಕನ್ನಡ ಕಲಿಯಬೇಕಿತ್ತು. ಆಕೆಗೆ ಸಂಗೀತವೆಂದರೆ ಇಷ್ಟ. ಅವಳಿಗೆ ರೇಡಿಯೋ ಹಾಡು ಕೇಳಿಸುವುದು ಯೂಟ್ಯೂಬ್ ಲಿಂಕಿನ ಹಾಡು ಕೇಳಿಸುವುದು, ಕೆಲವೊಮ್ಮೆ ಟಿವಿ ಹೆಡ್​ಲೈನ್ ಸ್ಕ್ರೀನ್ ಶಾಟ್ ಕಳಿಸಿ ಓದಲು ಪ್ರಯತ್ನಿಸು ಎನ್ನುವುದು… ಹೀಗೆ ನನ್ನ ದೈನಂದಿನ ಚಟುವಟಿಕೆಗಳ ಮೂಲಕ ಪಾಠ ಸಾಗುತ್ತಿತ್ತು. ಒಟ್ಟಿಗೆ ಮಿನಿಕಥೆಗಳನ್ನು ಬರೆದೆವು, ಸಿನೆಮಾ ನೋಡಿ ಚರ್ಚಿಸಿದೆವು. ಒಟ್ಟಾರೆ ಕಲಿಕೆ ಎನ್ನುವುದು ಒಂದು ಆಪ್ತ ಅನುಭವ. ಮನಸ್ಸು ಹುಡುಕಾಟಕ್ಕೆ ತೊಡಗಿಕೊಳ್ಳಬೇಕು. ಏನೋ ಕೊರತೆ ಇದೆ ಅನ್ನಿಸುತ್ತ ಹೋಗಬೇಕು. ಆಗಲೇ ಅದನ್ನು ಉತ್ತಮಪಡಿಸಿಕೊಳ್ಳೋದಕ್ಕೆ ಪ್ರಯತ್ನಿಸುತ್ತೇವೆ. ಬದುಕಿನ ಪರಿಪೂರ್ಣತೆ ಏನು ಅಂತ ಯೋಚಿಸಲು ಆರಂಭಿಸಿದಾಗಲೇ ಹತ್ತಾರು ಮಾರ್ಗಗಳು ತೆರೆದುಕೊಳ್ಳುವುದಲ್ಲವೆ?’

ಈ ಮಾರ್ಗಗಳೇ ಕ್ರಮೇಣ ಹಿಟ್ಟಿಗೂ, ಮಲ್ಲಿಗೆಗೂ ತೆರೆದುಕೊಳ್ಳುವಲ್ಲಿ ಸಂಶಯವಿಲ್ಲ. ದೇಶೀಯ-ವಿದೇಶೀಯ ಭಾಷೆಗಳ ಕೋರ್ಸ್​ ಕಲಿಯುವುದರಿಂದ  ನಾಲ್ಕೈದು ವರ್ಷಗಳಲ್ಲೇ ವೃತ್ತಿಪರ ಅನುವಾದಕರಾಗಿಯೂ ಪರಿಣತಿ ಸಾಧಿಸಲು ಸಾಧ್ಯ.

ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕ್ಲೈಂಟ್​ಗಳೊಂದಿಗೆ ಮಾತನಾಡಲು, ಪತ್ರವ್ಯವಹಾರ ನಡೆಸಲೆಂದೇ ಭಾಷಾಪರಿಣತರನ್ನು ನೇಮಿಸಿಕೊಳ್ಳಲಾಗುತ್ತದೆ. ಅನುವಾದಕ್ಕೆ ಸಂಬಂಧಿಸಿದ ವೆಬ್​ಸೈಟ್​ಗಳಿಗೆ ನಿಯಮಿತವಾಗಿ ಅನುವಾದ ಮಾಡಿ ಉತ್ತಮ ಸಂಭಾವನೆಯನ್ನೂ ಪಡೆಯಬಹುದಾಗಿದೆ. ಸ್ವಲ್ಪ ಹೆಚ್ಚು ಶ್ರಮ ವಹಿಸಿದರೆ ರಾಜಕೀಯ ಲೇಖನಗಳನ್ನು ಕೂಡ ಅನುವಾದಿಸಬಹುದು. ಮನಸ್ಸು ಕೊಟ್ಟರೆ ಸಾಹಿತ್ಯಕ್ಕೆ ಸಂಬಂಧಿಸಿದ ಅನುವಾದ ಕಾರ್ಯಗಳಲ್ಲಿಯೂ ತೊಡಗಿಕೊಳ್ಳಬಹುದು. ಅಷ್ಟೇ ಯಾಕೆ? ತಿರುಗಾಡುವ ಖಯಾಲಿ ಇದ್ದರೆ ಟೂರಿಸ್ಟ್ ಗೈಡ್ ಕೂಡ ಆಗಬಹುದು. ‘ಒಟ್ಟಾರೆಯಾಗಿ ಭಾಷೆ ಕಲಿಯಲು ಒಂದು ಮನೋಭಾವ ಬೇಕು. ಅದೂ ಕೂಡ ಒಂದು ಕಲೆಯೇ. ಎಳವೆಯಲ್ಲಿ ಒಂದು ಭಾಷೆ ಕಲಿಯುವುದು ಸುಲಭ. ಆದರೆ ನಂತರದ ಹಂತದಲ್ಲಿ ವಿಶೇಷ ಪರಿಶ್ರಮ ಬೇಕು. ಅದಕ್ಕಾಗಿ ಮನಸ್ಸು ತೆರೆದುಕೊಂಡಿರಬೇಕು.’ ಎನ್ನುತ್ತಾರೆ ಜಯಶ್ರೀ.

ಡಾ.ದೀಪಾ ಜೋಶಿ

ಮನಸ್ಸಿದ್ದರೆ ಮಾರ್ಗ ಅಲ್ಲವೆ?

ಸಂಸ್ಕೃತ ಪ್ರಾಧ್ಯಾಪಕಿಯಾಗಿ ಇಷ್ಟು ವರ್ಷ ವಿವಿಧ ಕಾಲೇಜುಗಳಲ್ಲಿ ಕೆಲಸ ಮಾಡಿದ ಡಾ. ದೀಪಾ ಜೋಶಿಯವರದು ಜಯಶ್ರೀಯವರಿಗಿಂತ ಭಿನ್ನ ಅನುಭವ. ಎರಡು ವರ್ಷಗಳ ಹಿಂದೆ ಸ್ವಂತ ವೆಬ್​ಸೈಟ್ ರೂಪಿಸಿಕೊಂಡ ಅವರ ಬಳಿ ಐದೂವರೆ ವರ್ಷದಿಂದ ಅರವತ್ತು ಎಪ್ಪತ್ತು ವರ್ಷಗಳವರೆಗಿನ ವಿದ್ಯಾರ್ಥಿಗಳು ಸಂಸ್ಕೃತ ಹೇಳಿಸಿಕೊಳ್ಳುತ್ತಾರೆ. ಅಷ್ಟು ವಿದ್ಯಾರ್ಥಿಗಳನ್ನು ಸಂಭಾಳಿಸುವುದೇ ಅವರಿಗೆ ಈಗ ಸವಾಲಾಗಿ ಪರಿಣಮಿಸಿದೆ. ‘ನಾನು ವೆಬ್​ಸೈಟ್ ಲಾಂಚ್ ಮಾಡುತ್ತಿದ್ಧಂತೆ ‘ದ್ರೋಣ ಲರ್ನಿಂಗ್ ಸೊಲ್ಯೂಷನ್’ ಮತ್ತು ‘ಮೈ ಸ್ಕೂಲ್ ಪೇಜ್’ ನನ್ನನ್ನು ಆನ್​ಲೈನ್​ ತರಗತಿಗಳಿಗೆ ನೇಮಿಸಿಕೊಂಡವು. ಕಾಲೇಜಿಗೆ ಹೋಗಿ ಪಾಠ ಮಾಡುತ್ತಿದ್ದ ದಿನಗಳಿಗಿಂತ ನಾನು ಹೆಚ್ಚು ಸಮಯವನ್ನು ಆನ್​ಲೈನ್​ ತರಗತಿಗಳಲ್ಲಿ ಕಳೆಯಹತ್ತಿದೆ. ಕೊರೋನಾ ಸಮಯದಲ್ಲಿ ಗೋವಾದ ಕಾಲೇಜೊಂದು ನಾಲ್ಕು ತಿಂಗಳಲ್ಲಿ ಪದವಿಯ ಪಠ್ಯವನ್ನು ಮುಗಿಸಿಕೊಡಬೇಕು ಎಂದು ಕೇಳಿತು. ಇದು ವರ್ಷಪೂರ್ತಿ ಆದಾಯವನ್ನು ನಾಲ್ಕೇ ತಿಂಗಳಲ್ಲಿ ತಂದುಕೊಟ್ಟಿತು.’

‘ಶಾಲಾ ಕಾಲೇಜು ವಿದ್ಯಾರ್ಥಿಗಳ ಪಠ್ಯಕ್ಕನುಗುಣವಾಗಿ ಗುಂಪುಗಳಲ್ಲಿ ಕಲಿಕೆ ಒಂದೆಡೆ. ವೇದ, ಸೂಕ್ತ, ಉಪನಿಷತ್ತು, ರಾಮಾಯಣ, ಮಹಾಭಾರತ, ಲಲಿತಾ ಸಹಸ್ರನಾಮ, ವಿಷ್ಣು ಸಹಸ್ರನಾಮದ ಅರ್ಥವನ್ನು ತಿಳಿದುಕೊಳ್ಳಲೆಂದೇ ಹುಟ್ಟಿಕೊಂಡ ಹೊಸ ವರ್ಗ ಇನ್ನೊಂದೆಡೆ. ಸದ್ಯಕ್ಕಂತೂ ಅನಿವಾಸಿ ಭಾರತೀಯರು ಆನ್​ಲೈನ್​ ತರಗತಿಗಳಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಹೀಗಾಗಿ ನನಗಂತೂ ಬಿಡುವಿಲ್ಲ. ಒಟ್ಟಾರೆಯಾಗಿ ಈ ಆನ್​ಲೈನ್​ ತರಗತಿಗಳಿಂದ ಓಡಾಟದ ಸಮಯವೂ ಉಳಿಯುತ್ತದೆ, ಗಳಿಕೆಯೂ ಹೆಚ್ಚುತ್ತದೆ. ಮುಖ್ಯವಾಗಿ ವೈಯಕ್ತಿಕ ನಿರ್ಧಾರಗಳಿಂದ ನೆಮ್ಮದಿಯೂ ಇರುತ್ತದೆ’ ಮನಸ್ಸಿದ್ದರೆ ಮಾರ್ಗ ಅಲ್ಲವೆ? ಎನ್ನುತ್ತಾರೆ ಅವರು.

ಡಾ.ಅಭಿಲಾಶಾ, ಡಾ.ಜಯಂತಿ ದತ್ತಾ

ಹೀಗಿವರು ಮಾರ್ಗ ಕಂಡುಕೊಳ್ಳಲು ಸಹಾಯವಾಗಿದ್ದರಲ್ಲಿ ‘ದ್ರೋಣ ಲರ್ನಿಂಗ್ ಸೊಲ್ಯೂಷನ್’ನ ಪಾಲೂ ಇದೆ. ಐಐಎಸ್​ಸಿಯಲ್ಲಿ ವಿಜ್ಞಾನಿಯಾಗಿದ್ದ ಡಾ. ಅಭಿಲಾಷಾ ಮೂರು ವರ್ಷದ ಹಿಂದೆ ಸ್ನೇಹಿತೆ ಡಾ. ಜಯಂತಿ ದತ್ತಾ ಅವರೊಂದಿಗೆ ಈ ಸಂಸ್ಥೆಯನ್ನು ಪ್ರಾರಂಭಿಸಿದರು. ‘ಮಕ್ಕಳನ್ನೂ ಮನೆಯನ್ನೂ ಬಿಟ್ಟು ನನಗೆ ಕೆಲಸಕ್ಕೆ ಹೋಗಲು ಸಾಧ್ಯವಿಲ್ಲವೆನ್ನಿಸಿದಾಗ ಮನೆಯಲ್ಲೇ ಕುಳಿತು, ಗ್ರಾಮೀಣ ಭಾಗದ ಸರಕಾರಿ ಶಾಲೆಗಳಿಗೆ ಆನ್​ಲೈನ್​ ಪಾಠ ಹೇಳಿಕೊಡಲು ಶುರುಮಾಡಿದೆ. ಪಾಠವೆಂದರೆ ಕೇವಲ ಪಠ್ಯವಲ್ಲ, ವಿದ್ಯಾರ್ಥಿಗಳು ಸ್ವ-ಕಲಿಕೆಯಲ್ಲಿ ಹೇಗೆ ತೊಡಗಿಕೊಳ್ಳಬೇಕು ಎನ್ನುವ ಪರಿಕಲ್ಪನೆ. ಈ ಪ್ರಯೋಗದ ನಂತರ ಈ ಸಂಸ್ಥೆಯನ್ನು ಹುಟ್ಟುಹಾಕಿದೆವು. ಗಣಿತ, ವಿಜ್ಞಾನದೊಂದಿಗೆ ಈಗ ಭಾರತೀಯ ಮತ್ತು ವಿದೇಶಿ ಭಾಷೆಗಳನ್ನು ಕಲಿಸುತ್ತಿದ್ದೇವೆ. ಸಮರ್ಪಣಾ ಮನೋಭಾವದ 17 ಶಿಕ್ಷಕರು ನಮ್ಮ ಬಳಗದಲ್ಲಿದ್ದಾರೆ. ಅವರಿಗೆ ಸೂಕ್ತ ಸಂಭಾವನೆಯೂ ಲಭ್ಯವಿದೆ. ಸುಮಾರು 70 ವಿದ್ಯಾರ್ಥಿಗಳಿದ್ದಾರೆ. ಆದರೆ ಕೊರೋನಾಗಿಂತ ಮೊದಲೇ ನಮ್ಮ ಚಟುವಟಿಕೆಗಳು ಆರಂಭವಾಗಿವೆ’ ಎನ್ನುತ್ತಾರೆ ಅಭಿಲಾಷಾ.

ಆನ್​ಲೈನ್​ ಜಗತ್ತಿನಲ್ಲಿ ಕಲಿಕೆಗೆ-ಗಳಿಕೆಗೆ ಪೂರಕವಾಗಿ ಸಾಕಷ್ಟು ಮಾರ್ಗೋಪಾಯಗಳು ನಮ್ಮೆದುರಿಗಿವೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಅವಕಾಶಗಳು ಸೃಷ್ಟಿಯಾಗುವುದು ಈ ವೇದಿಕೆಯಲ್ಲಿಯೇ. ಏನೇ ಆದರೂ ಮೂಲದಲ್ಲಿ ಬೇಕಿರುವುದು ಆಸಕ್ತಿ, ಶ್ರದ್ಧೆ ಮತ್ತು ಸೂಕ್ತ ರೀತಿಯ ಪ್ರಯತ್ನ.

ಭರವಸೆಯಿರಲಿ.

Published On - 6:33 pm, Wed, 23 December 20