ಉಡುಪಿ: ಪ್ರವಾಸೋದ್ಯಮದ ಅಂಗವಾಗಿ ಉಡುಪಿಯ ಪಡುಬಿದ್ರಿ ಕಡಲ ತೀರದ ಎಂಡ್ ಪಾಯಿಂಟ್‌ನಲ್ಲಿ ಎಂಟು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಬ್ಲೂಫ್ಲಾಗ್ ಬೀಚ್ ಯೋಜನೆ ( ‘Blue Flag’ Beach) ಈಗ ಅಂತಿಮ ಹಂತಕ್ಕೆ ಬಂದಿದ್ದು, ಕೆಲದಿನಗಳಲ್ಲಿಯೇ ಕಾರ್ಯನಿರ್ಹಹಿಸಲು ರೆಡಿಯಾಗಲಿದೆ.
ಹೌದು ಕೇಂದ್ರ ಸರ್ಕಾರದ ಅನುಮೋದನೆಯಂತೆ ಗೊತ್ತು ಪಡಿಸಲಾದ ಬ್ಲೂಫ್ಲ್ಯಾಗ್ ಬೀಚ್ ಯೋಜನೆಯ ಬೀಚ್ ಅಭಿವೃದ್ಧಿ ಕಾಮಗಾರಿಯನ್ನ ಗುರ್‌ಗಾಂವ್‌ನ ‘ಎ ಟು ಝಡ್’ ಸಂಸ್ಥೆಗೆ ವಹಿಸಿಕೊಂಡಲಾಗಿತ್ತು. ಈ ನಿಟ್ಟಿನಲ್ಲಿ ಪಡುಬಿದ್ರಿ ಬೀಚ್ ಕಾಮಗಾರಿಯನ್ನ ವರ್ಷದ ಹಿಂದೆ ಆರಂಭಿಸಲಾಗಿದ್ದು, ರಾಜ್ಯ ಸರ್ಕಾರ ಸುಮಾರು 2.5ಕೋಟಿ ರೂಪಾಯಿ ವೆಚ್ಚದಲ್ಲಿ ಮೂಲ ಸೌಕರ್ಯಗಳನ್ನ ಕಲ್ಪಿಸಿದೆ.
ಸಮರೋಪಾದಿಯಲ್ಲಿ ಬೀಚ್ ಅಭಿವೃದ್ಧಿ ಕಾರ್ಯ
ತಾತ್ಕಾಲಿಕ ಶೌಚಗೃಹ, ಸ್ನಾನ ಗೃಹ, ಬಟ್ಟೆ ಬದಲಾಯಿಸುವ ಕೋಣೆ, ನೀರು ಶುದ್ದೀಕರಣ ಘಟಕ, ಕುಡಿಯುವ ನೀರಿನ ವ್ಯವಸ್ಥೆ, ಸಿಸಿ ಕ್ಯಾಮರಾ ಹಾಗೂ ನಿಯಂತ್ರಣ ಕೊಠಡಿ, ಮಕ್ಕಳ ಆಟಿಕೆ ಸಾಮಾಗ್ರಿಗಳು, ಪ್ರಥಮ ಚಿಕಿತ್ಸಾ ಕೊಠಡಿ, ಘನತ್ಯಾಜ್ಯ ಸಂಸ್ಕರಣಾ ಘಟಕ ಹಾಗೂ ಸೋಲಾರ್ ಪ್ಯಾನಲ್ ಅಳವಡಿಸಿ ಬೀಚ್‌ಗೆ ಅಗತ್ಯವಿರುವ ವಿದ್ಯುತ್ ಉತ್ಪಾದಿಸಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ.
ಕಾಲು ದಾರಿಗಳು, ವಾಹನ ನಿಲುಗಡೆ ಸ್ಥಳಕ್ಕೆ ಇಂಟರ್ ಲಾಕ್, ಹಸಿರು ಹುಲ್ಲು ಹಾಸುವಿಕೆ ಹಾಗೂ ಮಾಹಿತಿ ಫಲಕ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ.
ಪ್ರವಾಸೋದ್ಯಮಕ್ಕೆ ಭಾರೀ ಅನುಕೂಲ
ಜುಲೈ 15ರೊಳಗೆ ಕೇಂದ್ರ ನಿರ್ಣಾಯಕರ ಮಂಡಳಿಯಿಂದ ಪರಿಶೀಲನೆ ನಡೆಯಲಿದ್ದು, ಬಳಿಕ ಡೆನ್ಮಾರ್ಕ್‌ನ ಅಂತಾರಾಷ್ಟ್ರೀಯ ನಿರ್ಣಾಯಕರ ಮಂಡಳಿ ಪರಿಶೀಲಿಸಿ ಬ್ಲೂ ಫ್ಯ್ಲಾಗ್ ಬೀಚ್ ಪ್ರಮಾಣ ಪತ್ರ ನೀಡಲಿದೆ. ಈ ಪ್ರಮಾಣ ಪತ್ರ ಲಭಿಸಿದಲ್ಲಿ ಕಡಲ ತೀರಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆತು ಪ್ರವಾಸೋದ್ಯಮಕ್ಕೆ ನಾಂದಿಯಾಗಲಿದೆ.
ಸ್ಥಳೀಯರಿಗೆ ಸಿಗಲಿದೆ ಉದ್ಯೋಗ
ಈ ಬ್ಲೂ ಫ್ಲ್ಯಾಗ್ ಪ್ರಮಾಣೀಕರಣಕ್ಕೆ ಅಗತ್ಯವಿರುವ 33ಅಂಶಗಳನ್ನು ಪಡುಬಿದ್ರಿ ಯೋಜನೆ ಅನುಷ್ಠಾನಗೊಳಿಸಿದೆ. ಯೋಜನೆಯಲ್ಲಿ ಈಗಾಗಲೇ ಸುಮಾರು 50ಮಂದಿ ಸ್ಥಳೀಯರಿಗೆ ಉದ್ಯೋಗ ದೊರೆತಿದ್ದು, ಮುಂದೆ ಹೋಂ ಸ್ಟೇ, ವ್ಯಾಪಾರ ವಹಿವಾಟುಗಳ ಮೂಲಕ ಇನ್ನಷ್ಟು ಉದ್ಯೋಗ ಸೃಷ್ಟಿಯಾಗಲಿದೆ. -ಹರೀಶ್ ಪಾಲೆಚ್ಚಾರ್
Published On - 5:32 pm, Thu, 9 July 20