ಮಂಗಳೂರು:ಈ ಬಾರಿಯ SSLC ಪರೀಕ್ಷೆ ನಡೆಸುವುದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪರೀಕ್ಷಾರ್ಥಿಗಳನ್ನು ಪರೀಕ್ಷಾ ಕೇಂದ್ರದವರೆಗೂ ಕರೆತರಲು ಹರಸಾಹಸ ಪಡುತ್ತಿದ್ದಾರೆ. ಈ ಮಧ್ಯೆ ಯಾವುದೇ ಚ್ಯುತಿ ಬಾರದಂತೆಯೂ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.
ಅಷ್ಟೇ ಸಾಲದು ಅಂತಾ ವಿದ್ಯಾರ್ಥಿಗಳನ್ನು ಉತ್ತೇಜಿಸಲು ಯಾವ ಮೂಲೆಯಿಂದ ಪ್ರೇರೇಪಣೆಗಳು ಸಿಗುತ್ತವೆ ಎಂಬುದರ ಮೇಲೂ ಹದ್ದಿನಕಣ್ಣಿಟ್ಟಿದ್ದಾರೆ. ಹೀಗಿರುವಾಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರ ಕಣ್ಣಿಗೆ ಒಬ್ಬ ವಿದ್ಯಾರ್ಥಿ ಕಂಡುಬಂದಿದ್ದಾನೆ. ಅದರಿಂದ ಹೃದಯ ತುಂಬಿಬಂದು, ಆತನ ಸಾಹಸವನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ಫೋಟೋ ಸಮೇತ ಹಾಕಿಕೊಂಡಿದ್ದಾರೆ. ಮನಸ್ಸಿದ್ದರೆ ಮಾರ್ಗ ಅಂತಾ ಹೇಳೋರು ಸಾಕಷ್ಟು ಮಂದಿ. ಆದ್ರೆ ಈ ಮಾತನ್ನ ಮಾಡಿತೋರಿಸುತ್ತಿದ್ದಾನೆ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿ.
ಹೌದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿದ್ಯಾರ್ಥಿ ಕೌಶಿಕ್ ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದಿದ್ದಾನೆ. ಬಂಟ್ವಾಳದ ಎಸ್‌ವಿಎಸ್ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನ ಯಾರ ನೆರವೂ ಇಲ್ಲದೇ, ನೆಲದ ಮೇಲೆ ಕುಳಿತು ಬರೆದಿದ್ದಾನೆ. ಕೌಶಿಕ್ ಹೀಗೆ ಪರೀಕ್ಷೆ ಬರೆದಿದ್ದು ಈಗ ಶಿಕ್ಷಣ ಸಚಿವರ ಗಮನ ಸೆಳೆದಿದೆ.
ಕೊರೊನಾ ಭಯದ ಮಧ್ಯೆಯೂ ದೈರ್ಯದಿಂದ, ನೆಲದ ಮೇಲೆ ಕುಳಿತು ಯಾರ ನೆರವೂ ಇಲ್ಲದೇ ಪರೀಕ್ಷೆ ಬರೆದ ವಿದ್ಯಾರ್ಥಿ ಬಗ್ಗೆ ಸುರೇಶ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ ಪರೀಕ್ಷೆ ಬರೆಯುತ್ತಿರುವ ಪೋಟೋವನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಇತರರಿಗೂ ಮಾದರಿಯಾಗಲಿ ಎಂಬ ಸದಾಶಯ ಎಲ್ಲರದ್ದೂ ಆಗಿದೆ.
Published On - 2:03 pm, Fri, 26 June 20