ದೆಹಲಿ: ದೇಶದ ಮೊತ್ತ ಮೊದಲ ಚಾಲಕ ರಹಿತ ಮೆಟ್ರೋ (Driverless Metro) ರೈಲು ಇಂದಿನಿಂದ (ಡಿ.28) ಆರಂಭವಾಗಲಿದೆ. ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ನ (DMRC) ಈ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಈ ಸೇವೆಯಿಂದಾಗಿ ಮೆಟ್ರೋ ರೈಲು ಸಂಚಾರದ ಖುಷಿ ಇನ್ನಷ್ಟು ಹೆಚ್ಚಲಿದೆ. ಪ್ರಯಾಣದ ಸಂಭ್ರಮಕ್ಕೆ ಹೊಸ ಶಕೆ ಆರಂಭವಾಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಜಾನಕ್ಪುರಿ-ಬೊಟಾನಿಕಲ್ ಗಾರ್ಡನ್ ಮಧ್ಯೆ ಚಾಲಕ ರಹಿತ ಮೆಟ್ರೋ ಸಂಚರಿಸಲಿದೆ. 2021ರಲ್ಲಿ ಈ ಸೇವೆಯನ್ನು ಮತ್ತಷ್ಟು ವಿಸ್ತರಿಸುವ ಆಲೋಚನೆ ಡಿಎಂಆರ್ಸಿಗೆ ಇದೆ. ಮುಂದಿನ ವರ್ಷದ ಜೂನ್ ತಿಂಗಳೊಳಗಾಗಿ ಚಾಲಕ ರಹಿತ ರೈಲು ಸೇವೆ, ದೆಹಲಿಯ ಪಿಂಕ್ ಲೈನ್ನಲ್ಲೂ ಆರಂಭವಾಗುವ ನಿರೀಕ್ಷೆ ಇದೆ.
ಚಾಲಕ ರಹಿತ ರೈಲು ಸಂಪೂರ್ಣ ಯಾಂತ್ರಿಕವಾಗಿರಲಿದೆ. ಚಾಲಕನಿಂದ ಆಗಬಹುದಾದ ತಪ್ಪುಗಳನ್ನು ಈ ಯಾಂತ್ರೀಕೃತ ರೈಲು ಕಡಿಮೆ ಮಾಡಲಿದೆ ಎಂದು ಹೇಳಲಾಗಿದೆ. ಚಾಲಕ ರಹಿತ ಮೆಟ್ರೋ ರೈಲಿಗಾಗಿ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್, ಕಳೆದ ಮೂರು ವರ್ಷಗಳಿಂದ ಪ್ರಯೋಗಗಳನ್ನು ನಡೆಸುತ್ತಿತ್ತು. ಪಿಂಕ್ ಲೈನ್ನಲ್ಲಿ 20 ಕಿ.ಮೀ. ಸಂಚಾರ ನಡೆಸುವ ಮೂಲಕ, ಚಾಲಕ ರಹಿತ ಮೆಟ್ರೋ ರೈಲು ಪ್ರಯೋಗವನ್ನು DMRC 2017ರಲ್ಲಿ ನಡೆಸಿತ್ತು.
ಚಾಲಕ ರಹಿತ ಮೆಟ್ರೋ ರೈಲಿನಲ್ಲಿ ಏನೆಲ್ಲಾ ವ್ಯವಸ್ಥೆಗಳಿವೆ?
ನೂತನ ಚಾಲಕ ರಹಿತ ಮೆಟ್ರೋ ರೈಲು, ಅನ್ಅಟೆಂಡೆಡ್ ಟ್ರೈನ್ ಆಪರೇಷನ್ಸ್ (UTO) ಹಾಗೂ ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ (CBTC) ವಿಧಾನದ ಮೂಲಕ ಸಂಚಾರ ನಡೆಸಲಿದೆ. ಈ ರೈಲಿನಲ್ಲಿ ಆರು ಬೋಗಿಗಳು ಇರಲಿವೆ. ಜೊತೆಗೆ, ವಿದ್ಯುತ್ ಶಕ್ತಿ ಉಳಿತಾಯವಾಗುವಂತೆ ಎಲ್ಇಡಿ ಲೈಟ್ಗಳು, ಉತ್ತಮ ಬ್ರೇಕಿಂಗ್ ಹಾಗೂ ಹವಾನಿಯಂತ್ರಣ ವ್ಯವಸ್ಥೆಗಳು ಇರಲಿವೆ. ನೂತನ ಮೆಟ್ರೋ ರೈಲು ಗಂಟೆಗೆ 95 ಕಿ.ಮೀ ಗರಿಷ್ಠ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ. ಸದ್ಯಕ್ಕೆ 85 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚಾರ ನಡೆಸಲಿದೆ.
ಆರು ಬೋಗಿಗಳಿರುವ ರೈಲಿನ ಪ್ರತಿ ಬೋಗಿಯಲ್ಲಿ ತಲಾ 380 ಪ್ರಯಾಣಿಕರು ಸಂಚಾರ ನಡೆಸಬಹುದು. ಅದರಂತೆ ಒಂದು ರೈಲಿನಲ್ಲಿ ಒಟ್ಟು 2,280 ಪ್ರಯಾಣಿಕರು ಸಂಚಾರ ನಡೆಸಬಹುದಾಗಿದೆ.
ನಿಯಂತ್ರಣ ಹೇಗೆ?
ಚಾಲಕ ರಹಿತ ರೈಲುಗಳನ್ನು, ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ನ ಮೂರು ಕಮಾಂಡ್ ಸೆಂಟರ್ಗಳ ಮೂಲಕ, ಮನುಷ್ಯರ ಮಧ್ಯಸ್ಥಿಕೆ ಇಲ್ಲದೆ ನಿಯಂತ್ರಿಸಲಾಗುವುದು. ರೈಲಿನಲ್ಲಿ ತಾಂತ್ರಿಕ ಸಮಸ್ಯೆಗಳು ಉಂಟಾದರೆ, ಅವುಗಳನ್ನೂ ಕಮ್ಯುನಿಕೇಷನ್ ಬೇಸ್ಡ್ ಟ್ರೈನ್ ಕಂಟ್ರೋಲ್ ಮೂಲಕ ಸರಿಪಡಿಸಲು ಸಾಧ್ಯವಿದೆ. ರೈಲಿನ ಹಾರ್ಡ್ವೇರ್ ತೊಂದರೆ, ದುರಸ್ತಿ ಕಾರ್ಯಗಳಿಗೆ ಮಾತ್ರ ಕಾರ್ಮಿಕರು ಕೆಲಸ ಮಾಡಬೇಕಾಗುತ್ತದೆ.
ಕಮಾಂಡ್ ಕೇಂದ್ರಗಳಲ್ಲಿ ಮಾಹಿತಿ ನಿರ್ವಾಹಕರು ಪ್ರಯಾಣಿಕರ ಹಾಗೂ ಜನದಟ್ಟಣೆಯ ನಿಯಂತ್ರಣ ಕಾರ್ಯ ಮಾಡುತ್ತಾರೆ. ಜೊತೆಗೆ, ರೈಲುಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಮೂಲಕ ರೈಲಿನ ಸಾಧನಗಳು, ತೊಂದರೆಗಳು ಮತ್ತಿತರ ವಿವರಗಳನ್ನು ನಿರ್ವಾಹಕರು ತತ್ಕ್ಷಣವೇ ಪಡೆಯಬಹುದಾಗಿದೆ. ರಿಮೋಟ್ ತಂತ್ರಜ್ಞಾನದ ಮೂಲಕ ಅವುಗಳನ್ನು ನಿಯಂತ್ರಿಸಬಹುದಾಗಿದೆ.
100ನೇ ಕಿಸಾನ್ ರೈಲಿಗೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ!
ಪ್ರಧಾನಿ ನರೇಂದ್ರ ಮೋದಿ ಇಂದು (ಡಿ.28) ಸಂಜೆ 4.30 ಗಂಟೆಗೆ ದೇಶದ 100ನೇ ಕಿಸಾನ್ ರೈಲಿಗೂ ಚಾಲನೆ ನೀಡಲಿದ್ದಾರೆ. ಮಹಾರಾಷ್ಟ್ರದ ಸಂಗೋಲಾದಿಂದ ಪಶ್ಚಿಮ ಬಂಗಾಳದ ಶಾಲಿಮಾರ್ವರೆಗೆ ರೈಲು ಸಂಚಾರ ನಡೆಸಲಿದೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ರೈಲ್ವೇ ಖಾತೆ ಸಚಿವ ಪಿಯೂಶ್ ಗೋಯಲ್ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.
ಕಿಸಾನ್ ರೈಲು 2,132 ಕಿ.ಮೀ.ಗಳನ್ನು ಸುಮಾರು 39 ಗಂಟೆಗಳಲ್ಲಿ ತಲುಪಲಿದೆ. 400 ಟನ್ಗಳಷ್ಟು ಹಣ್ಣು, ತರಕಾರಿ, ಕೃಷಿ ಉತ್ಪನ್ನಗಳನ್ನು ರೈಲು ಹೊತ್ತೊಯ್ಯಲಿದೆ. ಮಧ್ಯಪ್ರದೇಶ, ಚತ್ತೀಸ್ಗಢ, ಒಡಿಸ್ಸಾ ಮೂಲಕ ರೈಲು ಪ್ರಯಾಣ ನಡೆಸಲಿದೆ.
ಸದ್ಯ ದೇಶದ 9 ಮಾರ್ಗಗಳಲ್ಲಿ ಕಿಸಾನ್ ರೈಲು ಸಂಚಾರ ನಡೆಸುತ್ತಿದೆ. ರೈತರಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಹಾಗೂ ಬಳಕೆದಾರ ಗ್ರಾಹಕರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಒದಗಿಸುವ ಉದ್ದೇಶವನ್ನು ಕಿಸಾನ್ ರೈಲು ಹೊಂದಿದೆ.
Published On - 3:31 pm, Sun, 27 December 20