ನವದೆಹಲಿ: ಚುನಾವಣಾ ಚಾಣಕ್ಯ ಎಂದೇ ಹೆಸರಾಗಿರುವ ಪ್ರಶಾಂತ್ ಕಿಶೋರ್ (Prashant Kishor) ಇನ್ನೇನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದು ಖಚಿತ ಎನ್ನಲಾಗಿತ್ತು. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಕುರಿತು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರೊಂದಿಗೆ ಸಭೆಗಳು ಕೂಡ ನಡೆದಿದ್ದವು. ಆದರೆ, ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದು ಸದ್ಯಕ್ಕೆ ಅನುಮಾನ ಎನ್ನಲಾಗುತ್ತಿದೆ. ಅಷ್ಟಕ್ಕೂ ಕಳೆದೊಂದು ವರ್ಷದಿಂದ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಎದ್ದಿದ್ದ ಸುದ್ದಿಗಳಿಗೆ ಫುಲ್ ಸ್ಟಾಪ್ ಬೀಳಲು ಕಾರಣ ಏನಿರಬಹುದು ಎಂದು ನಿಮಗೆ ಆಶ್ಚರ್ಯವಾಗಬಹುದು. ಅದಕ್ಕೆ ಕಾರಣ ನಂಬಿಕೆಯ ಕೊರತೆ. ಕಾಂಗ್ರೆಸ್ ನಾಯಕರ ನಂಬಿಕೆ ಕಳೆದುಕೊಳ್ಳುವಂತಹ ಯಾವ ಕೆಲಸವನ್ನು ಪ್ರಶಾಂತ್ ಕಿಶೋರ್ ಮಾಡಿದರು? ಇದ್ದಕ್ಕಿದ್ದಂತೆ ಚುನಾವಣಾ ತಂತ್ರಗಾರನ ಬಗ್ಗೆ ಕಾಂಗ್ರೆಸ್‌ಗೆ ಒಲವು ಕಡಿಮೆಯಾಗಲು ಕಾರಣವೇನು? ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ.
ಪ್ರಶಾಂತ್ ಕಿಶೋರ್ ಬಹಳ ಮೊದಲಿನಿಂದಲೂ ಕಾಂಗ್ರೆಸ್ ಬಗ್ಗೆ ಆಗಾಗ ಅಪಸ್ವರ ಎತ್ತುತ್ತಿದ್ದರು, ಟೀಕಿಸುತ್ತಿದ್ದರು. ಕಾಂಗ್ರೆಸ್ ನಾಯಕರ ತಂತ್ರಗಾರಿಕೆಯೇ ಸರಿಯಿಲ್ಲ ಎಂದು ಕೂಡ ಹೇಳಿದ್ದರು. ಆದರೆ, ಉಪಚುನಾವಣೆಗಳು ಮತ್ತು 2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕರು ಪ್ರಶಾಂತ್ ಕಿಶೋರ್ಗೆ ಬಲೆ ಬೀಸಲು ಮುಂದಾಗಿದ್ದರು. ಈ ಬಗ್ಗೆ ಕಳೆದ ಜುಲೈನಲ್ಲಿ ಕೂಡ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಜೊತೆ ಸಭೆ ನಡೆಸಿದ್ದರು. ಇದಾದ ಬಳಿಕ ಪ್ರಶಾಂತ್ ಕಾಂಗ್ರೆಸ್ ಸೇರುವುದು ಖಚಿತ ಎನ್ನಲಾಗಿತ್ತು. ಪ್ರಶಾಂತ್ ಕಿಶೋರ್ ನಮ್ಮ ಪಕ್ಷ ಸೇರಿದರೆ ಮುಂಬರುವ ಚುನಾವಣೆಗೆ ಬಹಳ ಸಹಕಾರಿಯಾಗಲಿದೆ. ಅವರಿಗೆ ಉನ್ನತ ಹುದ್ದೆಯನ್ನು ನೀಡಿದರೂ ನಮಗೇನೂ ಬೇಸರವಿಲ್ಲ ಎಂದು ಕಾಂಗ್ರೆಸ್ ನಾಯಕರು ಕೂಡ ಇದಕ್ಕೆ ಬೆಂಬಲ ನೀಡಿದ್ದರು.
ಆದರೆ, ಕಾಂಗ್ರೆಸ್ ನಾಯಕರಿಗೆ ಪ್ರಶಾಂತ್ ಕಿಶೋರ್ ಮೇಲೆ ಅಸಮಾಧಾನ ಉಂಟಾಗುವಂತೆ ಮಾಡಿದ್ದು ಗೋವಾದ ಮಾಜಿ ಸಿಎಂ ಲುಯಿಜಿನೋ ಫೆಲೆರಿಯೋ ಅವರ ರಾಜೀನಾಮೆ. ಗೋವಾದ ಕಾಂಗ್ರೆಸ್ ನಾಯಕರಾಗಿದ್ದ ಫೆಲೆರಿಯೋ ಸೆಪ್ಟೆಂಬರ್ನಲ್ಲಿ ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದರು. ನನಗೆ ಯಾವ ನಿರ್ಧಾರ ತೆಗೆದುಕೊಳ್ಳಬೇಕೆಂಬ ಗೊಂದಲವಿತ್ತು. ಆಗ ನಾನು ಪ್ರಶಾಂತ್ ಕಿಶೋರ್ ಅವರ ಸಲಹೆಯನ್ನು ಕೇಳಿದ್ದೆ. ಅವರ ಜೊತೆ ಸಾಕಷ್ಟು ಚರ್ಚೆ ನಡೆಸಿದ ನಂತರ ಕಾಂಗ್ರೆಸ್ ತೊರೆದು ಟಿಎಂಸಿಗೆ ಸೇರಲು ನಿರ್ಧರಿಸಿದೆ ಎಂದು ಹೇಳಿದ್ದರು. ಅದಾದ ಬಳಿಕ ಪ್ರಶಾಂತ್ ಕಿಶೋರ್ ನನಗೆ ಟಿಎಂಸಿ ಸೇರಲು ಸಲಹೆ ನೀಡಿರಲಿಲ್ಲ, ಅದು ನನ್ನ ಸ್ವಂತ ನಿರ್ಧಾರ ಎಂದು ಕೂಡ ಹೇಳಿದ್ದರು. ಇದು ಕಾಂಗ್ರೆಸ್ ನಾಯಕರಿಗೆ ಪ್ರಶಾಂತ್ ಕಿಶೋರ್ ಮೇಲಿರುವ ಅಸಮಾಧಾನಕ್ಕೆ ಒಂದು ಕಾರಣ. ಸುಮಾರು 1 ತಿಂಗಳ ಹಿಂದೆ ಕಾಂಗ್ರೆಸ್ ಉನ್ನತ ನಾಯಕರೊಂದಿಗೆ ಪ್ರಶಾಂತ್ ಕಿಶೋರ್ ಭೇಟಿ ಮಾಡಿದಾಗ ಹಲವು ಬೇಡಿಕೆಗಳನ್ನು ಇಟ್ಟಿದ್ದರು ಎನ್ನಲಾಗಿದೆ. ಇದು ಕೂಡ ಕಾಂಗ್ರೆಸ್ ಹಿಂದೇಟು ಹಾಕಲು ಮತ್ತೊಂದು ಕಾರಣ ಎಂದು ‘ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಇದಷ್ಟೇ ಅಲ್ಲದೆ, ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಎರಡು ಕಾರುಗಳು ಹರಿದು ರೈತರು ಸಾವನ್ನಪ್ಪಿದ್ದು, ಅದಾದ ಬಳಿಕ ನಡೆದ ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದ ಘಟನೆಗೆ ಕಾಂಗ್ರೆಸ್ ಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪಕ್ಷಗಳು ರಾಜಕೀಯ ಗೆಲುವು ಎಂದು ಭಾವಿಸಿ ಸಂಭ್ರಮಿಸುತ್ತಿದ್ದಾರೆ. ಜಿಓಪಿ ನೇತೃತ್ವದ ವಿರೋಧ ಪಕ್ಷಗಳು ಇದನ್ನು ರಾಜಕೀಯ ದಾಳವನ್ನಾಗಿ ಮಾಡಿಕೊಂಡಿವೆ. ಈ ಕೃತ್ಯಕ್ಕೆ ಪರಿಹಾರ ಕಂಡುಹಿಡಿಯುವ ಬದಲು ರಾಜಕೀಯ ಮಾಡುತ್ತಿದ್ದಾರೆ. ಯಾವುದೇ ತ್ವರಿತ ಪರಿಹಾರವಿಲ್ಲದೆ ಗ್ರ್ಯಾಂಡ್ ಓಲ್ಡ್ ಪಾರ್ಟಿ” (GOP) ಯಲ್ಲಿ ಸಮಸ್ಯೆಗಳು ಆಳವಾಗಿ ಬೇರೂರಿವೆ ಎಂದು ಹೇಳಿದ್ದಾರೆ. ಲಖಿಂಪುರ್ ಖೇರಿ ಘಟನೆಯ ಆಧಾರದ ಮೇಲೆ ಗ್ರ್ಯಾಂಡ್ ಓಲ್ಡ್ ಪಾರ್ಟಿ ನೇತೃತ್ವದ ವಿರೋಧ ಪಕ್ಷದಲ್ಲಿ ತ್ವರಿತ, ಸ್ವಾಭಾವಿಕ ಚೇತರಿಕೆ ಹುಡುಕುತ್ತಿರುವ ಜನರಿಗೆ ನಿರಾಶೆಯಾಗಲಿದೆ. ದುರದೃಷ್ಟವಶಾತ್ ಜಿಒಪಿಯ ಆಳವಾಗಿ ಬೇರೂರಿರುವ ಸಮಸ್ಯೆಗಳು ಮತ್ತು ರಚನಾತ್ಮಕ ದೌರ್ಬಲ್ಯಗಳಿಗೆ ಯಾವುದೇ ತ್ವರಿತ ಪರಿಹಾರಗಳಿಲ್ಲ ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದರು. ಜಿಒಪಿ ಎಂದರೆ ಹಳೆಯ ಪಕ್ಷ ಎಂದು ಅರ್ಥ. ಇದನ್ನು ಕೆಲವೊಮ್ಮೆ ಕಾಂಗ್ರೆಸ್ ಪಕ್ಷಕ್ಕೆ ಬಳಸಲಾಗುತ್ತದೆ.
ಮುಂಬರುವ ದಿನಗಳಲ್ಲಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಇದಾದ ನಂತರ ಸಾರ್ವತ್ರಿಕ ಚುನಾವಣೆ ಬರುವ ಹಿನ್ನಲೆಯಲ್ಲಿ ಪಕ್ಷದಲ್ಲಿ ಅವರಿಗೆ ನೀಡುವ ಸ್ಥಾನದ ವಿಚಾರವಾಗಿ ಚರ್ಚೆಗಳನ್ನು ಮಾಡಲಾಗಿದೆ ಎಂದು ಮೂಲಗಳು ಹೇಳಿತ್ತು. 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯ ತಂತ್ರವನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಪ್ರಶಾಂತ್ ಕ್ರಿಶೋರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿತ್ತು. ಏಪ್ರಿಲ್-ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಚುನಾವಣೆಗಳಲ್ಲಿ ಪ್ರಶಾಂತ್ ಕಿಶೋರ್ ತಂತ್ರಗಾರಿಕೆ ರೂಪಿಸುವಲ್ಲಿ ಯಶಸ್ವಿಯಾಗಿದ್ದರು.
ಈ ವರ್ಷ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಮತ್ತು ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಗೆಲ್ಲಲು ಹಾಗೂ ಕಳೆದ ವರ್ಷ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಗೆಲ್ಲಲು ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆಯೂ ಕಾರಣ. ಪ್ರಶಾಂತ್ ಕಿಶೋರ್ ಅವರ ಆಪ್ತರು ಹೇಳುವ ಪ್ರಕಾರ, ಪ್ರಶಾಂತ್ ಕಿಶೋರ್ ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂಬುದು ಖುದ್ದು ಅವರ ಯೋಚನೆ, ದೃಷ್ಟಿಕೋನಗಳಲ್ಲಿ ಯಾವ ಬದಲಾವಣೆಯನ್ನೂ ಮಾಡಿಲ್ಲ. ಅವರು ಈಗಲೂ ಯಾವುದೇ ಮುಲಾಜಿಲ್ಲದೆ ಯಾವ ಪಕ್ಷವನ್ನು ಬೇಕಾದರೂ ಟೀಕಿಸುತ್ತಾರೆ. ಲಖಿಂಪುರ ಖೇರಿ ಹಿಂಸಾಚಾರದ ಸ್ಥಳಕ್ಕೆ ಹೋಗಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಪೊಲೀಸರು ಬಂಧಿಸಿದ್ದರು. ಕಾಂಗ್ರೆಸ್ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದರೂ, ಕಾಂಗ್ರೆಸ್ ಸೇರಲು ಸಿದ್ಧವಾಗಿದ್ದರೂ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟಾಗುವ ರೀತಿಯ ಟ್ವೀಟ್ಗಳನ್ನು ಮಾಡುತ್ತಲೇ ಇದ್ದರು. ಹೀಗಾಗಿ, ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದರ ಬಗ್ಗೆ ಕಾಂಗ್ರೆಸ್ ನಾಯಕರು ಹೆಚ್ಚು ಗಂಭೀರವಾಗಿ ಯೋಚನೆ ಮಾಡಿದಂತೆ ಕಾಣುತ್ತಿಲ್ಲ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕಾಂಗ್ರೆಸ್ ನಾಯಕರೊಬ್ಬರು ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ನಿಂದಲೂ ಪ್ರಶಾಂತ್ ಕಿಶೋರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ಬಗ್ಗೆ ನಾಯಕರಲ್ಲಿ ಗೊಂದಲ ಮೂಡಿದೆ. ಕೊನೆಯ ಮೀಟಿಂಗ್ನಲ್ಲಿ ಪ್ರಶಾಂತ್ ಕಿಶೋರ್ ನಾನು ಕಾಂಗ್ರೆಸ್‌ಗೆ ಸೇರುವ ಮೊದಲು ಸಂಘಟನಾತ್ಮಕ ಬದಲಾವಣೆಗಳು ಆಗಬೇಕು. ಉತ್ತಮ ಹುದ್ದೆ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಹಾಗೇ, ನಾನು ಯಾರಿಗೆ ವರದಿ ಮಾಡಿಕೊಳ್ಳಬೇಕು? ನನ್ನ ಸ್ಥಾನ ಏನಾಗಿರುತ್ತದೆ? ಎಂದು ಕೂಡ ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಇದೆಲ್ಲವೂ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಸೇರ್ಪಡೆಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಅವರ ಬೇಡಿಕೆ ಮತ್ತು ವರ್ತನೆಯೇ ಅವರನ್ನು ಕಾಂಗ್ರೆಸ್ ನಾಯಕರನ್ನಾಗಿಸುವ ಹಾದಿಗೆ ಅಡ್ಡಿಯಾಗಿವೆ ಎನ್ನಲಾಗಿದೆ.
ಇದನ್ನೂ ಓದಿ: ಲಖಿಂಪುರ್ ಖೇರಿ ಪ್ರಕರಣವು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಅವಕಾಶವನ್ನು ಹೆಚ್ಚಿಸಲಿದೆಯೇ? ಪ್ರಶಾಂತ್ ಕಿಶೋರ್ ಏನಂತಾರೆ?