ಬೆಂಗಳೂರು: ನಗರದಲ್ಲಿ ಮಾಸ್ಕ್ ಧರಿಸದೆ ಓಡಾಡುವ ಸಾರ್ವಜನಿಕರಿಗೆ ಫೈನ್ ಹಾಕುವ ಕೆಲಸ ಬಿಬಿಎಂಪಿ ಮಾರ್ಷಲ್ಗಳಿಗೆ ತಲೆನೋವಾಗಿ ಪರಿಣಮಿಸಿದೆ. ಫೈನ್ ವಿಚಾರಕ್ಕೆ ಮಾರ್ಷಲ್ಗಳು ಹಾಗೂ ಸಾರ್ವಜನಿಕರ ಮಧ್ಯೆ ಗಲಾಟೆ ಮತ್ತು ಜಗಳ ಹೆಚ್ಚುತ್ತಿದೆ.
ಕೆಲವು ಕಡೆ ಸಾರ್ವಜನಿಕರು ಮಾರ್ಷಲ್ಗಳ ಮೇಲೆ ಹಲ್ಲೆ ಮಾಡಲು ಸಹ ಮುಂದಾಗ್ತಿದ್ದಾರೆ. ಇದಲ್ಲದೆ, ಮಾಸ್ಕ್ ಹಾಕಿಲ್ಲ ಅನ್ನುವುದಕ್ಕೆ ಸಾಕ್ಷಿ ಕೊಡಿ ಎಂದು ಗಲಾಟೆ ಸಹ ಮಾಡುತ್ತಿದ್ದಾರಂತೆ. ಒಂದು ವೇಳೆ, ಮಾಸ್ಕ್ ಹಾಕದವರ ಫೋಟೋ ತೆಗೆದು ಫೈನ್ ಹಾಕುತ್ತಿದ್ದರೂ ಅದು ನನ್ನ ಕೈಯಲ್ಲಿದೆ, ಈಗ ಹಾಕ್ತೀನಿ. ಆದರೆ, ದಂಡ ಮಾತ್ರ ಕಟ್ಟಲ್ಲವೆಂದು ಕೆಲವರು ಕಿರಿಕ್ ಮಾಡುತ್ತಿದ್ದಾರೆ. ಜೊತೆಗೆ, ನನಗೆ ಕಮಿಷನರ್ ಗೊತ್ತು, ಅಧಿಕಾರಿಗಳು ಗೊತ್ತೆಂದು ಮಾರ್ಷಲ್ಗಳ ಮೇಲೆ ಒತ್ತಡ ಸಹ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ, ಸಾರ್ವಜನಿಕರ ಕೂಗಾಟಕ್ಕೆ ಮಾರ್ಷಲ್ಗಳು ಹೈರಾಣಾಗಿ ಹೋಗಿದ್ದಾರೆ.
ಇತ್ತ ಮಲ್ಲೇಶ್ವರದಲ್ಲಿ ಕಾರು ಚಾಲಕನೊಬ್ಬ ಕಿರಿಕ್ ಮಾಡಿದ್ದಾನೆ. ದಂಡ ಕಟ್ಟಿದರೆ ಕೊರೊನಾ ವೈರಸ್ ಹೋಗುತ್ತಾ?ಎಷ್ಟು ಲಕ್ಷ ದುಡ್ಡು ಮಾಡಿದ್ದೀರಾ ಅಂತೆಲ್ಲಾ ಮಾರ್ಷಲ್ಗೆ ಪ್ರಶ್ನೆ ಹಾಕಿದ್ದಾನೆ ಈ ಭೂಪ. ಕೊನೆಗೆ, ನಾನು ಮಾಸ್ಕ್ ಹಾಕುವುದಿಲ್ಲ, ದಂಡವನ್ನೂ ಕಟ್ಟಲ್ಲ ಎಂದು ಕಿರಿಕ್ ಮಾಡಿದ್ದಾನೆ. ತನ್ನ ಉದ್ಧಟತನ ಮುಂದುವರಿಸುತ್ತಾ ಮಾರ್ಷಲ್ ಮೇಲೆ ಕಾರು ಹತ್ತಿಸಲು ಮುಂದಾಗಿದ್ದಾನೆ. ಹಾಗಾಗಿ, ಘಟನಾ ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಮಾಸ್ಕ್ ಫೈನ್ಗೆ ಯುವತಿ ಕಣ್ಣೀರು!
ಈ ನಡುವೆ ಮಾಸ್ಕ್ ಫೈನ್ ಕಟ್ಟಲಾಗದೆ ಯುವತಿಯೊಬ್ಬಳು ಪರದಾಡಿದ ಘಟನೆ ಸಹ ಮಲ್ಲೇಶ್ವರದಲ್ಲಿ ನಡೆದಿದೆ. ಆಟೋದಲ್ಲಿ ಸಂಚಾರ ಮಾಡುವಾಗ ಯುವತಿ ಮಾಸ್ಕ್ ಸರಿಯಾಗಿ ಹಾಕಿರಲಿಲ್ಲ. ಜೊತೆಗೆ, ಆಟೋದಲ್ಲಿ ನಾಲ್ಕು ಜನರು ಒಟ್ಟಿಗೆ ಪ್ರಯಾಣ ಸಹ ಮಾಡ್ತಾ ಇದ್ರು. ಹೀಗಾಗಿ, ಆಕೆಗೆ ಫೈನ್ ಹಾಕಲು ಮಾರ್ಷಲ್ಗಳು ಮುಂದಾದರು.
ಈ ವೇಳೆ ಒಂದು ಸಾವಿರ ರೂಪಾಯಿ ಫೈನ್ ಕಟ್ಟೋಕೆ ತನ್ನ ಬಳಿ ದುಡ್ಡು ಇಲ್ಲಾ ಅಂತಾ ಯುವತಿ ಕೈಯಲ್ಲಿ ಮತ್ತು ಬ್ಯಾಗ್ನಲ್ಲಿದ್ದ ಚಿಲ್ಲರೆ ಕಾಸು ಕೊಡಲು ಮುಂದಾದಳು. ತಮ್ಮ ಬಳಿ ಇರೋ ಎಲ್ಲಾ ಚಿಲ್ಲರೆ ಕಾಸು ನೀಡಲು ಮುಂದಾದಳು. ಆದರೆ, ಇದೆಲ್ಲಾ ಸೇರಿಸಿ ಒಂದು ಸಾವಿರ ರೂಪಾಯಿ ಆಗಲಿಲ್ಲ. ಹಾಗಾಗಿ, ಯುವತಿ ಆಟೋದಲ್ಲೇ ಕುಳಿತು ಕಣ್ಣೀರು ಹಾಕಿದಳು. ಮಾಸ್ಕ್ ಕಡ್ಡಾಯವಾಗಿ ಹಾಕ್ತೀನಿ ಬಿಟುಬಿಡಿ ಅಂತಾ ಮಾರ್ಷಲ್ಗಳಿಗೆ ಬೇಡಿಕೊಂಡಳು. ಕೊನೊಗೆ, ಆಕೆಗೆ ವಾರ್ನ್ ಮಾಡಿ ಮಾರ್ಷಲ್ಗಳು ಕಳುಹಿಸಿಕೊಟ್ಟರು.