ಧಾರವಾಡ: ಭಾರತೀಯ ರೈಲು ಜನರಿಗೆ ದೇಶದ ಇತರೆ ಭಾಗಗಳಿಗೆ ಕೇವಲ ಸಂಪರ್ಕ ಕಲ್ಪಿಸುವ ಮಾಧ್ಯಮವಾಗದೆ ಭಾವನಾತ್ಮಕ ನಂಟನ್ನು ಸಹ ಹೊಂದಿದೆ. ಇದೀಗ, ಭಾರತೀಯ ರೈಲು ಸಾಗಿ ಬಂದಿರುವ ಹಾದಿಯನ್ನು ಉತ್ತರ ಕರ್ನಾಟಕದ ಮಂದಿಗೆ ತಿಳಿಸಿಕೊಡಲು ನೈರುತ್ಯ ರೈಲ್ವೇ ವಿಭಾಗವು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಿನೂತನವಾದ ರೈಲು ಸಂಗ್ರಹಾಲವನ್ನ ಲೋಕಾರ್ಪಣೆ ಮಾಡಿದೆ.
ರೈಲ್ವೇ ಇಲಾಖೆಯ ಐತಿಹ್ಯವನ್ನ ತಿಳಿಸೋ ಉದ್ದೇಶದಿಂದ ಈ ಮ್ಯೂಸಿಯಂ ನಿರ್ಮಾಣವಾಗಿದ್ದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್‌ರಿಂದ ಮೊನ್ನೆ ಆನ್ಲೈನ್ ಮೂಲಕ ಉದ್ಘಾಟನೆಯಾಯಿತು. ಇದೀಗ ಸಂಗ್ರಹಾಲಯವು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ.
ನಗರದ ಗದಗ ರಸ್ತೆಯಲ್ಲಿ ನಿರ್ಮಾಣವಾಗಿರೋ ಈ ಸಂಗ್ರಹಾಲಯದಲ್ಲಿ ವಿವಿಧ ಪ್ರಕಾರದ ಎಂಜಿನ್ಗಳು, ರೈಲು ಬೋಗಿಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ. ಜೊತೆಗೆ, ರೈಲ್ವೇ ಇಲಾಖೆ ತನ್ನ ದೈನಂದಿನ ಚಟುವಟಿಕೆಗಳಲ್ಲಿ ಬಳಸುವ ಪರಿಕರ ಹಾಗೂ ಸಾಧನಗಳನ್ನೂ ಸಹ ಪ್ರದರ್ಶನಕ್ಕೆ ಇಟ್ಟಿದೆ.
ಸದ್ಯ ರಾಜ್ಯದ ಎರಡನೇ ಅತಿ ದೊಡ್ಡ ರೈಲ್ವೇ ಮ್ಯೂಸಿಯಂ ಆಗಿರುವ ಈ ಸಂಗ್ರಹಾಲಯವು ಭಾರತೀಯ ರೈಲ್ವೆ ಇಲಾಖೆಯ ಗತವೈಭವದ ಮೇಲೆ ಬೆಳಕು ಚೆಲ್ಲಲು ಸಜ್ಜಾಗಿದ್ದು ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.