ಧಾರವಾಡ: ಎಲ್ಲೆಲ್ಲೂ ಕೊರೊನಾದ್ದೇ ಮಾತು, ಕೊರೊನಾದ್ದೇ ಚರ್ಚೆ. ಒಂದು ದಿನದ ಹಿಂದೆ ಗ್ರೀನ್ ಝೋನ್ನಲ್ಲಿದ್ದ ಜಿಲ್ಲೆಗೆ, ಅದ್ಯಾವ ಕ್ಷಣದಲ್ಲಿ ‘ರೆಡ್ ಝೋನ್’ ಪಟ್ಟ ಬರುತ್ತೋ ಗೊತ್ತಾಗೋದಿಲ್ಲ. ಪರಿಸ್ಥಿತಿ ಹೀಗಿರುವಾಗ ವೆಂಟಿಲೇಟರ್ಗಳ ಸಂಗ್ರಹಣೆ ಬಹುಮುಖ್ಯ. ಆದ್ರೆ ಬಡವರ ಕೈಗೆಟುಕದ ವೆಂಟಿಲೇಟರ್ಸ್ ಗಗನ ಕುಸುಮವಾಗಿದ್ದವು. ಆದ್ರೆ ಈ ಮಾತನ್ನ ಇಲ್ಲೊಬ್ಬ ಪ್ರಾಧ್ಯಾಪಕರು ಸುಳ್ಳಾಗಿಸಿದ್ದಾರೆ.
ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲಿ ವೆಂಟಿಲೇಟರ್ಸ್ ಅತ್ಯಗತ್ಯ. ಯಾಕಂದ್ರೆ ನೇರವಾಗಿ ಶ್ವಾಸಕೋಶದ ಮೇಲೆ ಅಟ್ಯಾಕ್ ಮಾಡುವ ‘ಕೊರೊನಾ’, ಉಸಿರಾಟದ ವ್ಯವಸ್ಥೆಯನ್ನೇ ಹಾಳು ಮಾಡಿಬಿಡುತ್ತದೆ. ಅದರಲ್ಲೂ ಶ್ವಾಸಕೋಶದ ಸಮಸ್ಯೆ ಅಥವಾ ಕ್ಯಾನ್ಸರ್, ಡಯಾಬಿಟೀಸ್ನಂಥ ಕಾಯಿಲೆ ಇರುವವರಿಗೆ ಭಾರಿ ಅಪಾಯಕರವಾದ ಪರಿಸ್ಥಿತಿ ಇದೆ. ಇಂತಹ ಹೊತ್ತಲ್ಲಿ ವೆಂಟಿಲೇಟರ್ಗಳು ಬೇಕೇ ಬೇಕು. ಆದ್ರೆ ಲಕ್ಷಾಂತರ ರೂಪಾಯಿ ಬೆಲೆಬಾಳುವ ವೆಂಟಿಲೇಟರ್ಸ್ ಕೊಳ್ಳುವುದು ಸುಲಭದ ಮಾತಲ್ಲ. ಇದೀಗ ಆ ಮಾತು ಸುಳ್ಳಾಗಿದ್ದು, ಕಡಿಮೆ ವೆಚ್ಚದಲ್ಲಿ ವೆಂಟಿಲೇಟರ್ ಸಿದ್ಧವಾಗಿದೆ.
₹7 ಸಾವಿರ ವೆಚ್ಚದಲ್ಲಿ ವೆಂಟಿಲೇಟರ್ ಸಿದ್ಧ..!
ಯೆಸ್, ಇದು ಆಶ್ಚರ್ಯವಾದರೂ ಸತ್ಯ. ಈ ವೆಂಟಿಲೇಟರ್ನ ಬೆಲೆ ಕೇವಲ 7 ಸಾವಿರ ರೂಪಾಯಿ. ಇಷ್ಟು ದಿನ ಲಕ್ಷ ಲಕ್ಷ ವೆಚ್ಚ ಮಾಡಿ ಕೊಳ್ಳಬೇಕಿದ್ದ ವೆಂಟಿಲೇಟರ್ಗಳನ್ನ ಮರೆಯುವ ಕಾಲ ಬಂದಿದೆ. ಸ್ಥಳೀಯವಾಗಿ ಸಿಗುವ ವಸ್ತುಗಳನ್ನ ಬಳಿಸಿ ಕಡಿಮೆ ವೆಚ್ಚದಲ್ಲಿ ವೆಂಟಿಲೇಟರ್ ತಯಾರಿಸಲಾಗಿದೆ.
ಧಾರವಾಡದ ‘SDM’ ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಇದನ್ನ ಆವಿಷ್ಕಾರ ಮಾಡಿದ್ದಾರೆ. ಅಂದಹಾಗೆ ಈ ವೆಂಟಿಲೇಟರ್ ಅನ್ನು ವಿದ್ಯುತ್ ಮಾತ್ರವಲ್ಲದೆ ಕೈಯಿಂದ್ಲೂ ಆಪರೇಟ್ ಮಾಡಲು ಸಾಧ್ಯ. ಹಳ್ಳಿಗಳಲ್ಲಿ ವಿದ್ಯುತ್ ಕೈಕೊಟ್ಟರೂ ವೆಂಟಿಲೇಟರ್ ಕಾರ್ಯನಿರ್ವಹಣೆ ಸ್ಥಗಿತವಾಗಲ್ಲ. ಕೈಯಿಂದಲೇ ಇದನ್ನ ಆಪರೇಟ್ ಮಾಡಿ, ರೋಗಿಯ ಜೀವ ಉಳಿಸಬಹುದು.
ಅಂದಹಾಗೆ ಭಾರತದಲ್ಲಿ ಸೋಂಕು 3ನೇ ಹಂತಕ್ಕೆ ಪ್ರವೇಶಿಸಿರುವ ಗುಮಾನಿ ಇದ್ದು, ಮುಂದಿನ ದಿನಗಳಲ್ಲಿ ಈ ಮಹಾಮಾರಿ ಹಳ್ಳಿಗಳಿಗೆ ಹಬ್ಬದಂತೆ ತಡೆಯಬೇಕಿದೆ. ಅಕಸ್ಮಾತ್ ಕೊರೊನಾ ಹಳ್ಳಿಗಳಿಗೆ ಹಬ್ಬಿದರೆ ಸೋಂಕಿಗೆ ಬ್ರೇಕ್ ಹಾಕಲು ವೆಂಟಿಲೇಟರ್ ಅಗತ್ಯವಾಗಿವೆ. ಹೀಗಾಗಿ ಸರ್ಕಾರ ಇಂತಹ ಸಂಶೋಧಕರ ಬೆನ್ನಿಗೆ ನಿಲ್ಲಬೇಕಿದೆ.
ಒಟ್ನಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು SDM ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕರ ಈ ಸಂಶೋಧನೆಯನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ಕಡಿಮೆ ವೆಚ್ಚದ ವೆಂಟಿಲೇಟರ್ ತಯಾರಿಕೆ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆಯಬೇಕಿದೆ. ಈ ಮೂಲಕ ಸೋಂಕಿತರನ್ನು ರಕ್ಷಿಸಲು ಸಾಧ್ಯ.