ಬೆಂಗಳೂರು:ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಸಾರ್ವಜನಿಕರು ಹೆಚ್ಚಾಗಿ ಸೇರುವ ಸ್ಥಳಗಳ ಪ್ರವೇಶವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ಆದ್ರೆ ಜನರು ಜಿಲ್ಲಾಧಿಕಾರಿ ಆದೇಶವನ್ನು ಉಲ್ಲಂಘಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶನಿ ಮಹಾತ್ಮ ದೇವಾಲಯದಲ್ಲಿ ಶ್ರಾವಣ ಮಾಸ ಶನಿವಾರ ಹಾಗೂ ಭಾನುವಾರ ಮಧುರೆ ಶನಿ ಮಹಾತ್ಮ ದೇವಾಲಯದಲ್ಲಿ ಎಲ್ಲಾ ಸೇವೆಗಳನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಆದೇಶ ಹೊರಡಿಸಿದ್ದರು.
ಆದರೆ ಇಂದು ಜಿಲ್ಲಾಧಿಕಾರಿ ಆದೇಶಕ್ಕೆ ಕವಡೆ ಕಾಸಿನ ಬೆಲೆಯನ್ನು ನೀಡದ ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸಿ, ಸಾಮಾಜಿಕ ಅಂತರವೂ ಕಾಯ್ದುಕೊಳ್ಳದೆ ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಜೊತೆಗೆ ದೇವಸ್ಥಾನದ ಬಳಿಯೇ ದೊಡ್ಡಬೆಳವಂಗಲ ಠಾಣೆಯ ಪೊಲೀಸರು ಇದ್ದರೂ ಸಹ, ಜಿಲ್ಲಾಧಿಕಾರಿ ಆದೇಶಕ್ಕೆ ತಕ್ಕಂತೆ ಕಾರ್ಯನಿರ್ವಹಿಸದೆ, ದಿವ್ಯ ನಿರ್ಲಕ್ಷ ವಹಿಸಿದ್ದು ಸ್ಥಳೀಯ ಜನರು ಆಕ್ರೋಶಗೊಳ್ಳುವಂತೆ ಮಾಡಿದೆ.