ಪೂನಂ ಪಾಂಡೆ (Poonam Pandey) ಸಾವಿನ ವಿಚಾರ ಕಳೆದ ವಾರ ಭರ್ಜರಿ ಸುದ್ದಿ ಆಯಿತು. ಗರ್ಭಕಂಠ ಕ್ಯಾನ್ಸರ್ನಿಂದ ಮೃತಪಟ್ಟ ಬಗ್ಗೆ ಪೂನಂ ತಂಡದವರು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದರು. ನಂತರ ಇದು ಸುಳ್ಳು ಎಂದು ಸ್ವತಃ ಅವರೇ ಪೋಸ್ಟ್ ಮಾಡಿದರು. ಈ ಬಗ್ಗೆ ಪರ ವಿರೋಧ ಚರ್ಚೆ ಆಗುತ್ತಿದೆ. ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ನಟಿ ಈ ರೀತಿ ಮಾಡಿದ್ದರು. ಅಸಲಿಗೆ ಇದು ಪೂನಂ ಪಾಂಡೆ ಅವರ ಆಲೋಚನೆ ಆಗಿರಲಿಲ್ಲ. ಇದರ ಹಿಂದೆ ಇರುವವರೇ ಬೇರೆ. ಆ ಬಗ್ಗೆ ಈಗ ಮಾಹಿತಿ ಹೊರ ಬಿದ್ದಿದೆ.
ಪೂನಂ ಪಾಂಡೆ ಅವರ ದಿನಚರಿಗಳನ್ನು ಮ್ಯಾನೇಜ್ ಮಾಡುವ ಏಜೆನ್ಸಿ ಈ ರೀತಿಯ ಪ್ಲ್ಯಾನ್ ರೂಪಿಸಿತ್ತು. ಈ ಏಜೆನ್ಸಿಯವರು ಕ್ಷಮೆ ಕೋರಿದ್ದಾರೆ. ಈ ಸಂಬಂಧ ಪ್ರಕಟಣೆ ಹೊರಡಿಸಲಾಗಿದೆ. ‘ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ನಾವೇ ಈ ಕೆಲಸವನ್ನು ಮಾಡಿದ್ದು. ನಾವು ಈ ಬಗ್ಗೆ ಕ್ಷಮೆ ಕೇಳುತ್ತೇವೆ’ ಎಂದು ಏಜೆನ್ಸಿ ಅವರು ಬರೆದುಕೊಂಡಿದ್ದಾರೆ.
‘ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸೋದು ಮಾತ್ರ ನಮ್ಮ ಉದ್ದೇಶ ಆಗಿತ್ತು. 2022ರಲ್ಲಿ ಭಾರತದಲ್ಲಿ 1,23,907 ಗರ್ಭಕಂಠ ಕ್ಯಾನ್ಸರ್ ಪ್ರಕರಣ ಬೆಳಕಿಗೆ ಬಂದಿದ್ದು, ಈ ಪೈಕಿ 77,348 ಸಾವುಗಳು ಉಂಟಾಗಿವೆ. ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಧ್ಯವಯಸ್ಕ ಮಹಿಳೆಯರನ್ನು ಬಾಧಿಸುವ ಎರಡನೇ ಅತಿ ಹೆಚ್ಚು ಮಾರಣಾಂತಿಕ ಕಾಯಿಲೆ ಆಗಿದೆ. ಮೊದಲ ಸ್ಥಾನದಲ್ಲಿ ಸ್ತನ ಕ್ಯಾನ್ಸರ್ ಇದೆ. ಪೂನಂ ಅವರ ತಾಯಿಯು ಕ್ಯಾನ್ಸರ್ ವಿರುದ್ಧ ಧೈರ್ಯದಿಂದ ಹೋರಾಡಿದ್ದರು’ ಎಂದು ಬರೆದುಕೊಳ್ಳಲಾಗಿದೆ.
ಇದನ್ನೂ ಓದಿ: ಸುಳ್ಳು ಸುದ್ದಿಯಲ್ಲೂ ದಾಖಲೆ ಬರೆದ ಪೂನಂ ಪಾಂಡೆ; ಇಲ್ಲಿದೆ ವಿವರ..
ಪೂನಂ ಪಾಂಡೆ ತಂಡದವರು ಶುಕ್ರವಾರ (ಫೆಬ್ರವರಿ 2) ಇನ್ಸ್ಟಾಗ್ರಾಮ್ನಲ್ಲಿ ಅವರ ಸಾವಿನ ವಿಚಾರದ ಬಗ್ಗೆ ಪೋಸ್ಟ್ ಮಾಡಿದ್ದರು. ಪೂನಂ ಈ ಮೊದಲು ಎಲ್ಲಿಯೂ ತಮಗೆ ಕ್ಯಾನ್ಸರ್ ಇದೆ ಎಂದು ಹೇಳಿಕೊಂಡಿರಲಿಲ್ಲ. ಅಷ್ಟೇ ಅಲ್ಲ, ಎರಡು ದಿನಗಳ ಹಿಂದೆ ಪಾರ್ಟಿ ಮಾಡಿದ್ದರು. ಅವರು ಏಕಾಏಕಿ ಹೇಗೆ ನಿಧನ ಹೊಂದಲು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಅನೇಕರು ಈ ಸುದ್ದಿಯನ್ನು ನಂಬಿ ಶ್ರದ್ಧಾಂಜಲಿ ಅರ್ಪಿಸಿದರು. ಆ ಬಳಿಕ ವಿಡಿಯೋ ಒಂದನ್ನು ಪೋಸ್ಟ್ ಮಾಡಿ ತಾವು ಬದುಕಿರುವ ವಿಚಾರವನ್ನು ಪೂನಂ ಖಚಿತಪಡಿಸಿದರು. ಕೆಲವರು ಪೂನಂ ಪಾಂಡೆಗೆ ಬೆಂಬಲ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ