ಬೆಂಗಳೂರು: ಮಣಿಯದ ಸರ್ಕಾರ, ನಿಲ್ಲದ ಸಾರಿಗೆ ನೌಕರರ ಮುಷ್ಕರ. ಉಗ್ರ ಸ್ವರೂಪ ಪಡೆದ ಸಾರಿಗೆ ನೌಕರರ ಪ್ರೊಟೆಸ್ಟ್. ಇಂದಿನಿಂದ ಉಪವಾಸ ಸತ್ಯಾಗ್ರಹ ಆರಂಭ ಮಾಡಲಿದ್ದಾರೆ. ಇವತ್ತೂ ಸಹ ಬಸ್ ಸಂಚಾರ ಕಂಪ್ಲೀಟ್ ಬಂದ್ ಆಗಲಿದೆ. ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್ಗಳು ರಸ್ತೆಗೆ ಇಳಿಯುವುದಿಲ್ಲ.
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ. ಇಂದೂ ಕೂಡ KSRTC, BMTC ಬಸ್ ಸಂಚಾರ ಅನುಮಾನವಾಗಿದೆ. ನಿನ್ನೆ ಪೊಲೀಸ್ ಭದ್ರತೆಯಲ್ಲಿ ಬೆರಳೆಣಿಕೆಯಷ್ಟು ಬಸ್ ಸಂಚರಿಸಿದ್ದವು. ಆದರೆ ಇಂದು ಅದೂ ಇಲ್ಲ. ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ಇಂದು ರಾಜ್ಯದಲ್ಲಿ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ.
2 ದಿನ ಬಸ್ ಸಂಚಾರ ನಿಲ್ಲಿಸಿ ರಾಜ್ಯಾದ್ಯಂತ ನೌಕರರು ಮುಷ್ಕರ ಮಾಡಿದ್ದರು. ಆದರೆ ಸರ್ಕಾರ ತಮ್ಮ ಬೇಡಿಕೆ ಈಡೇರಿಸಲು ಒಪ್ಪದ ಹಿನ್ನೆಲೆಯಲ್ಲಿ ಇಂದು ಪ್ರೊಟೆಸ್ಟ್ ಉಗ್ರ ಸ್ವರೂಪ ಪಡೆಯಲಿದೆ. ಇಂದು ಬೆಳಗ್ಗೆ 10 ಗಂಟೆಗೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಫ್ರೀಡಂಪಾರ್ಕ್ನಲ್ಲಿ ಉಪವಾಸ ಸತ್ಯಾಗ್ರಹ ಆರಂಭವಾಗಲಿದೆ. ಆಯಾ ಜಿಲ್ಲೆಗಳ ಡಿಪೋ ಬಳಿ ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ. ಇವತ್ತೂ ಬಸ್ ಸಂಚಾರ ಕಂಪ್ಲೀಟ್ ಬಂದ್ ಆಗಲಿದ್ದು ಇಂದು ಕೂಡ ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಲಿದೆ. ಪ್ರಯಾಣಿಕರು ದುಪ್ಪಟ್ಟು ಹಣ ನೀಡಿ ಆಟೋ, ಕ್ಯಾಬ್, ಖಾಸಗಿ ಬಸ್ಗಳ ಮೊರೆ ಹೋಗಬೇಕಿದೆ.
ಇಂದಿನಿಂದ ಸಾರಿಗೆ ಸಿಬ್ಬಂದಿಯ ಉಪವಾಸ ಸತ್ಯಾಗ್ರಹ.. ಇಬ್ಬರ ಹಗ್ಗಜಗ್ಗಾಟದಲ್ಲಿ ಪ್ರಯಾಣಿಕರು ಹೈರಾಣ