ಬೆಂಗಳೂರು: ಹೊಸ ವರ್ಷದ ಮೊದಲ ದಿನವೇ ಶಾಲೆಗಳು ಪ್ರಾರಂಭವಾಗಿರುವುದನ್ನು ಬಹುತೇಕ ವಿದ್ಯಾರ್ಥಿ-ಪೋಷಕರು ಸ್ವಾಗತಿಸಿದ್ದಾರೆ. ಬೇರೆ ಸಮಯವಾಗಿದ್ದರೆ ಶಾಲೆ ಪ್ರಾರಂಭದ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಕೊರೊನಾ ಸಂಕಟ ದೇಶದೆಲ್ಲೆಡೆ ಹಬ್ಬಿರುವುದರಿಂದ ಇದೊಂದು ದೊಡ್ಡ ಸುದ್ದಿ ಎನಿಸುತ್ತಿದೆ.
ಶಾಲೆ ಆರಂಭಿಸುವ ಸರ್ಕಾರದ ನಿರ್ಧಾರ ಎಷ್ಟರಮಟ್ಟಿಗೆ ಸರಿ ಅಥವಾ ಪರಿಣಾಮಕಾರಿ, ಮಕ್ಕಳು ಶಾಲೆಗಳಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ಇರಬೇಕು ಎಂಬ ಬಗ್ಗೆ ಶುಕ್ರವಾರ ಟಿವಿ9 ಫೆಸ್ಬುಕ್ ಲೈವ್ ಸಂವಾದದಲ್ಲಿ ಚರ್ಚೆ ನಡೆಯಿತು. ಟಿವಿ9 ವರದಿಗಾರ ಕಿರಣ್ ಸೂರ್ಯ, ಶಿಕ್ಷಣ ತಜ್ಞ ಸುಪ್ರೀತ್, ಶ್ವಾಸಕೋಶ ತಜ್ಞ ಡಾ.ಪವನ್ ಹಾಗೂ ವಿದ್ಯಾರ್ಥಿನಿ ಸೃಷ್ಟಿ ಭಾಗವಹಿಸಿದ್ದರು. ಆ್ಯಂಕರ್ ಸೌಮ್ಯಾ ಹೆಗಡೆ ಸಂವಾದ ನಡೆಸಿಕೊಟ್ಟರು.
ಸವಾಲು ಎದುರಿಸಲು ಸರ್ಕಾರದ ಸಹಕಾರ ಬೇಕು: ಸಂವಾದದಲ್ಲಿ ಮಾತನಾಡಿದ ಟಿವಿ9 ವರದಿಗಾರ ಕಿರಣ್ ಸೂರ್ಯ, ‘ಕೊರೊನಾ ಓಡಿಸೋಣ, ವಿದ್ಯಾರ್ಥಿಗಳನ್ನು ಓದಿಸೋಣ’ ಎನ್ನುವುದು ರಾಜ್ಯ ಸರ್ಕಾರದ ನಿಲುವಾಗಿತ್ತು. ಆದರೆ ಇನ್ನೇನು ಕೊರೊನಾ ಸೋಂಕು ಸ್ವಲ್ಪಮಟ್ಟಿಗೆ ಕಡಿಮೆಯಾಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಬ್ರಿಟನ್ನಿಂದ ಬಂದ ರೂಪಾಂತರಿ ಕೊರೊನಾದ ಕರಿನೆರಳು ಭಾರತದ ಮೇಲೆ ಬಿದ್ದಿದೆ. ಈ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸಿರುವುದು ಎಷ್ಟರಮಟ್ಟಿಗೆ ಸರಿ ಎನ್ನುವುದನ್ನು ಗಮನಿಸುವುದು ಸೂಕ್ತ. ಶಿಕ್ಷಣ ಪಡೆಯುವ ಹಕ್ಕನ್ನು ಆಧಾರವಾಗಿಟ್ಟುಕೊಂಡು ಮಕ್ಕಳಿಗೆ ಕೊರೊನಾ ನಡುವೆಯೂ ಶಿಕ್ಷಣ ನೀಡುವುದು ಶಿಕ್ಷಕರ ಮತ್ತು ಶಿಕ್ಷಣ ತಜ್ಞರ ಮುಂದಿರುವ ದೊಡ್ಡ ಸವಾಲು ಈ ಸವಾಲನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರದ ಸಹಕಾರ ಬಹಳ ಮುಖ್ಯ ಎನಿಸಿಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಪ್ರತಿವರ್ಷ ಜೂನ್ ತಿಂಗಳಲ್ಲಿ ಶಾಲೆಗಳು ಆರಂಭವಾಗುವುದು ವಾಡಿಕೆ. ಗೊಂದಲ ಮತ್ತು ಆತಂಕದ ನಡುವೆ 10 ತಿಂಗಳ ನಂತರ ಎಸ್ಎಸ್ಎಲ್ಸಿ, ಪಿಯುಸಿ ಮತ್ತು ವಿದ್ಯಾಗಮ ಆರಂಭವಾಗಿದೆ. ಎಲ್ಲಾ ಶಾಲೆಗಳಲ್ಲೂ ಕೊರೊನಾ ಸಂಬಂಧಿತ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು. ಇಂದು ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಆಗಮಿಸಿದ್ದು ಆಶ್ಚರ್ಯದ ಸಂಗತಿ. ಹಲವು ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಭೇಟಿ ನೀಡಿದ್ದೆವು. ಬಹುತೇಕ ಮಕ್ಕಳು ಆನ್ಲೈನ್ ಕ್ಲಾಸ್ ಬೇಡ, ಆಫ್ಲೈನ್ ಕ್ಲಾಸ್ ಹೆಚ್ಚು ಸುಲಭ ಎಂದು ಪ್ರತಿಕ್ರಿಯಿಸಿದರು. ಶಿಕ್ಷಕರೂ ಸಹ ಮಕ್ಕಳಿಗೆ 3 ಪಾಳಿಗಳಲ್ಲಿ ತರಗತಿಗಳನ್ನು ನಡೆಸಲು ಸಿದ್ಧರಾಗಿದ್ದಾರೆ ಎಂದು ಕಿರಣ್ ಸೂರ್ಯ ಮಾಹಿತಿ ಹಂಚಿಕೊಂಡರು.
ಸರ್ಕಾರದ ನಿರ್ಧಾರ ಸರಿಯಿದೆ: ಶಿಕ್ಷಣ ತಜ್ಞ ಸುಪ್ರೀತ್ ಮಾತನಾಡಿ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯವೇ ಶಾಲೆ ಆರಂಭವಾಗಿದೆ. ಶಿಕ್ಷಕರಿಗೂ ಆನ್ಲೈನ್ ಕ್ಲಾಸ್ ತೆಗೆದುಕೊಳ್ಳುವುದು ಬೇಸರ ತಂದಿತ್ತು. ಪ್ರಾಯೋಗಿಕ ತರಗತಿಯ ಅಗತ್ಯ ಮಕ್ಕಳಿಗಿದ್ದು, ಈಗ ರಾಜ್ಯ ಸರ್ಕಾರ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ. ಶೇ.70 ರಷ್ಟು ಮಕ್ಕಳು ಶಾಲೆಗೆ ಆಗಮಿಸಿದ್ದು, ಅದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ಖುಷಿಯ ಸಂಗತಿ. ನಿರಂತರ ಕಲಿಕೆ ಮಕ್ಕಳ ಹಕ್ಕು. ಇದನ್ನು ಪೋಷಕರು ತಡೆಯುಂತಿವಲ್ಲ ಎಂದು ಶಿಕ್ಷಣ ತಜ್ಞ ಸುಪ್ರೀತ್ ಹೇಳಿದರು.
ಭಯ, ತಪ್ಪು ಕಲ್ಪನೆ ಅನಗತ್ಯ: ಶಾಲೆಗಳನ್ನು ಬಹಳ ಹಿಂದೆಯೇ ಆರಂಭಿಸಬೇಕಿತ್ತು. ಮಕ್ಕಳ ಭವಿಷ್ಯ ಮತ್ತು ಆರೋಗ್ಯ ಬಹಳ ಮುಖ್ಯ. ಕೊರೊನಾದಿಂದ ಸಂಭವಿಸಿರುವ ಒಟ್ಟು ಸಾವಿನ ಪ್ರಮಾಣದಲ್ಲಿ ಮಕ್ಕಳ ಸಂಖ್ಯೆ ಶೇ 1 ಅಥವಾ 2 ಮಾತ್ರ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳಿಸಲು ಆತಂಕ ಪಡುವುದು ಬೇಡ. ಈಗಿನ ಬ್ರಿಟನ್ ವೈರಸ್ ಎನ್ನುವುದು ಕೊರೊನಾ ವೈರಾಣುವಿನ ರೂಪಾಂತರ ಮಾತ್ರ. ಇದರ ಬಗ್ಗೆಯೂ ಭಯ, ತಪ್ಪುಕಲ್ಪನೆ ಬೇಡ. ಅಲರ್ಜಿ, ಶ್ವಾಸಕೋಶದಂಥ ಸಮಸ್ಯೆ ಇರುವ ಮಕ್ಕಳ ಬಗ್ಗೆ ಸ್ವಲ್ಪ ಎಚ್ಚರಿಕೆ ಇರಲಿ ಎಂದು ಶ್ವಾಸಕೋಶ ತಜ್ಞ ಡಾ.ಪವನ್ ಧೈರ್ಯ ತುಂಬಿದರು.
ನೇರ ಪಾಠವೇ ಒಳ್ಳೇದು: ಕಾಲೇಜು ಆರಂಭವಾಗಿರುವುದು ಖುಷಿ ತಂದಿದೆ. ಮನೆಯಲ್ಲೂ ಪೋಷಕರು ವಿದ್ಯಾಭ್ಯಾಸಕ್ಕೆ ಬೆಂಬಲ ನೀಡಿದ್ದಾರೆ. ಶಿಕ್ಷಕರಿಂದ ನೇರವಾಗಿ ಪಾಠ ಕೇಳುವ ಅವಕಾಶ ಸಿಕ್ಕಿದೆ. ಇದರಿಂದ ನಮಗೂ ಮತ್ತು ಶಿಕ್ಷಕರಿಗೂ ಸಂತೋಷವಾಗಿದೆ. ಸಿಲಬಸ್ ಕಡಿಮೆ ಮಾಡಿರುವುದು ಸ್ವಲ್ಪಮಟ್ಟಿಗೆ ಸಹಕಾರಿಯಾಗಿದೆ. ಆನ್ಲೈನ್ ಕ್ಲಾಸ್ಗಿಂತ ಇದೇ ಒಳ್ಳೇದು ಎಂದು ವಿದ್ಯಾರ್ಥಿನಿ ಸೃಷ್ಟಿ ಹೇಳಿದರು.
ನಮ್ಮದೇನೂ ವೈಯಕ್ತಿಕ ಪ್ರತಿಷ್ಠೆ ಅಲ್ಲ.. ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆ ಆರಂಭ ಮಾಡ್ತಿದ್ದೇವೆ -ಸುರೇಶ್ ಕುಮಾರ್