ವಿಜಯಪುರ: ವರನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮದುವೆ ರದ್ದಾಗಿರುವ ಘಟನೆ ಇಂಡಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಇದೇ ಗ್ರಾಮದ ನಿವಾಸಿಯಾಗಿರುವ ವರ ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೊರೊನಾ ವಾರಿಯರ್ ಆಗಿ ಸೇವೆಯಲ್ಲಿದ್ದ ಕಾನ್ಸ್ ಟೇಬಲ್ಗೆ ಕೊರೊನಾ ದೃಢವಾದ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ಮದುವೆ ರದ್ದಾಗಿದೆ.
ಮದುವೆಗಾಗಿ ರಜೆ ಪಡೆದು ಬೆಂಗಳೂರಿನಿಂದ ತನ್ನ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ಕಾನ್ಸ್ ಟೇಬಲ್ಗೆ ಕೊರೊನಾ ಲಕ್ಷಣ ಕಂಡು ಬಂದಿತ್ತು. ಕೂಡಲೆ ಆರೋಗ್ಯ ಇಲಾಖೆ ಸಿಬ್ಬಂದಿ ಗಂಟಲು ದ್ರವ ಕಲೆಕ್ಟ್ ಮಾಡಿ ಟೆಸ್ಟ್ಗೆ ಕಳುಹಿಸಿದ್ದರು. ಮದುವೆಗೂ ಎರಡು ದಿನ ಮೊದಲೇ ಬಂದ ವರದಿಯಲ್ಲಿ ಪಾಸಿಟಿವ್ ಬಂದಿದೆ.
P12140 ಎಂಬ 26 ವರ್ಷದ ಪೊಲೀಸ್ ಕಾನ್ಸ್ ಟೇಬಲ್ ಎಂದು ಈತನನ್ನು ಗುರುತಿಸಲಾಗಿದೆ. ಜಿಲ್ಲಾಡಳಿತ ಮದುವೆ ನಡೆಸದಂತೆ ಸೂಚಿಸಿತ್ತು. ಹೀಗಾಗಿ ಕುಟುಂಬಸ್ಥರು ಮದುವೆಯನ್ನು ಮುಂದೂಡಿದ್ದಾರೆ. ಮದುವೆ ಗಂಡು ಈಗ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆತನ ಸಂಪರ್ಕಕ್ಕೆ ಬಂದವರು ಹಾಗೂ ಸಂಬಂಧಿಕರನ್ನು ಕ್ವಾರಂಟೈನ್ಗೆ ಶಿಫ್ಟ್ ಮಾಡಲಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಸೋಂಕಿತನ ಸಂಪರ್ಕಕ್ಕೆ ಬಂದ 30 ಜನರ ಗಂಟಲು ದ್ರವ ಕಲೆಕ್ಟ್ ಮಾಡಿ ಪರೀಕ್ಷೆಗೆ ಕಳುಹಿಸಿದೆ.
Published On - 10:05 am, Tue, 30 June 20