Bageshwar Dham Sarkar:  ಸ್ವಯಂಘೋಷಿತ ದೇವಮಾನವ ಧಿರೇಂದ್ರ ಕೃಷ್ಣ ಶಾಸ್ತ್ರಿ ಯಾರು, ಯಾಕೆ ಅವರು ಟ್ರೆಂಟ್ ಅಗುತ್ತಿದ್ದಾರೆ ಅಂತ ಗೊತ್ತಾ?

|

Updated on: Jan 23, 2023 | 2:07 PM

ಮಧ್ಯಪ್ರದೇಶದ ಧಿರೇಂದ್ರ ಕೃಷ್ಣ ಶಾಸ್ತ್ರಿ 26-ವರ್ಷ-ವಯಸ್ಸಿನವರಾಗಿದ್ದು ಅಲ್ಲಿನ ಛತ್ರಾಪುರ್ ನಲ್ಲಿರುವ ಬಾಗೇಶ್ವರ್ ದೇವಸ್ಥಾನದೊಂದಿಗೆ ಸಂಪರ್ಕ ಹೊಂದಿದ್ದಾರೆ. ಧಿರೇಂದ್ರ ಕೃಷ್ಣ ಶಾಸ್ತ್ರಿ ಅಂಸಖ್ಯಾತ ಅನುಯಾಯಿಗಳನ್ನು ಹೊಂದಿದ್ದು ಅವರೆಲ್ಲ ಶಾಸ್ತ್ರಿಯವರ ಪವಾಡ ಶಕ್ತಿಯನ್ನು ನಂಬುತ್ತಾರೆ.

Bageshwar Dham Sarkar:  ಸ್ವಯಂಘೋಷಿತ ದೇವಮಾನವ ಧಿರೇಂದ್ರ ಕೃಷ್ಣ ಶಾಸ್ತ್ರಿ ಯಾರು, ಯಾಕೆ ಅವರು ಟ್ರೆಂಟ್ ಅಗುತ್ತಿದ್ದಾರೆ ಅಂತ ಗೊತ್ತಾ?
ಧೀರೇಂದ್ರ ಕೃಷ್ಣ ಶಾಸ್ತ್ರಿ
Follow us on

ನಮ್ಮ ದೇಶದಲ್ಲಿ ಆಗಾಗ ಸ್ವಯಂಘೋಷಿತ ದೇವಮಾನವರು (Self-Styled Godmen) ಆಗಾಗ ಉದ್ಭವಿಸುತ್ತಿರುತ್ತಾರೆ, ಕೆಲವರು ಅವರನ್ನು ನಂಬುತ್ತಾರೆ, ಕೆಲವರು ಇಲ್ಲ ಆದು ಬೇರೆ ವಿಷಯ. ಕೆಲ ಸ್ವಯಂಘೋಷಿತ ದೇವಮಾನವರು ತಮ್ಮ ಬಣ್ಣ ಬಯಲಾಗುತ್ತಿದ್ದಂತೆ ದೇಶದಿಂದ ಪಲಾಯನಗೈದಿದ್ದನ್ನು ನಾವು ನೋಡಿದ್ದೇವೆ. ಬಿಡದಿ ಆಶ್ರಮದಲ್ಲಿದ್ದ ನಿತ್ಯಾನಂದ ಸ್ವಾಮಿಯ ಕತೆ ನಮಗೆಲ್ಲ ಗೊತ್ತಿದೆ. ಬಿಡಿ, ಅವರೆಲ್ಲರ ವಿಷಯ ಬೇಡ. ಈಗ ಒಬ್ಬ ಯೌವನಪ್ರಾಯದ ಸ್ವಯಂಘೋಷಿತ ದೇವಮಾನವರೊಬ್ಬರು ಭಾರೀ ಸುದ್ದಿಯಲ್ಲಿದ್ದಾರೆ, ಚರ್ಚೆಯಾಗುತ್ತಿದ್ದಾರೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ದಿನೇದಿನೆ ಟ್ರೆಂಡ್ ಆಗುತ್ತಿದ್ದಾರೆ. ಬಾಗೇಶ್ವರ್ ಧಾಮ ಸರ್ಕಾರ್ (Bageshwar Dham Sarkar) ಅಂತ ಕರೆಸಿಕೊಳ್ಳುವ ಧಿರೇಂದ್ರ ಕೃಷ್ಣ ಶಾಸ್ತ್ರಿ (Dhirendra Krishna Shastri) ಅವರ ವಿಷಯ ನಿಮ್ಮ ಕಿವಿಗೂ ಬಿದ್ದಿರುತ್ತದೆ ಅಥವಾ ಸೋಶಿಯಲ್ ಮೀಡಿಯದಲ್ಲಿ ಅವರನ್ನು ನೋಡಿರುತ್ತೀರಿ. ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ಅವರ ಸಂದರ್ಶನಗಳು, ಚರ್ಚೆಗಳು ಎಡೆಬಿಡದೆ ನಡೆಯುತ್ತಿವೆ.

ಪ್ರಸಿದ್ಧಿಗೆ ಬಂದಿದ್ದು ಇತ್ತೀಚಿಗೆ

ಕುತೂಹಲಕಾರಿ ಸಂಗತಿಯೆಂದರೆ, ಧಿರೇಂದ್ರ ಕೃಷ್ಣ ಶಾಸ್ತ್ರಿ ಇತ್ತೀಚಿನ ಕೆಲ ದಿನಗಳಿಂದ ಮಾತ್ರ ಸುದ್ದಿಯಲ್ಲಿದ್ದಾರೆ. ತನ್ನಲ್ಲಿ ದೈವಿಕ ಮತ್ತು ಪವಾಡಗಳನ್ನು ನಡೆಸುವ ಶಕ್ತಿಯಿದೆ ಅಂತ ಅವರು ಹೇಳಿಕೊಂಡ ಬಳಿಕ ಮಹರಾಷ್ಟ್ರದ ಅಂಧವಿಶ್ವಾಸ ಮತ್ತು ಮೂಢನಂಬಿಕೆ ನಿರ್ಮೂಲನಾ ಸಂಘವೊಂದು ತಾನು ಆಯೋಜಿಸುವ ಸತ್ಸಂಗ್ ನಲ್ಲಿ ಪಾಲ್ಗೊಂಡು ಪವಾಡ ನಡೆಸುವಂತೆ ಬಹಿರಂಗ ಸವಾಲೆಸೆದಾಗ ಧಿರೇಂದ್ರ ಶಾಸ್ತ್ರಿ ಸವಾಲು ಸ್ವೀಕರಿಸಲಿಲ್ಲ. ಅಲ್ಲಿಂದಲೇ ಅವರ ಹೆಸರು ಖ್ಯಾತಿಗೆ ಬಂದಿದೆ ಮತ್ತು ಅವರ ವಿಡಿಯೋಗಳು ಟ್ವಿಟರ್ ನಲ್ಲಿ ಟ್ರೆಂಡ್ ಆಗುತ್ತಿವೆ.

ಇದನ್ನೂ ಓದಿ: Xiaomi 13: ಭಾರತಕ್ಕೆ ಬರುತ್ತಿದೆ ವಿದೇಶದಲ್ಲಿ ಧೂಳೆಬ್ಬಿಸಿದ ಶವೋಮಿ 13 ಸರಣಿ: ಇದರ ಫೀಚರ್ಸ್ ಕೇಳಿದ್ರೆ ದಂಗಾಗ್ತೀರ

ಮಧ್ಯಪ್ರದೇಶದ ಧಿರೇಂದ್ರ ಕೃಷ್ಣ ಶಾಸ್ತ್ರಿ 26-ವರ್ಷ-ವಯಸ್ಸಿನವರಾಗಿದ್ದು ಅಲ್ಲಿನ ಛತ್ರಾಪುರ್ ನಲ್ಲಿರುವ ಬಾಗೇಶ್ವರ್ ದೇವಸ್ಥಾನದೊಂದಿಗೆ ಸಂಪರ್ಕ ಹೊಂದಿದ್ದಾರೆ. ಧಿರೇಂದ್ರ ಕೃಷ್ಣ ಶಾಸ್ತ್ರಿ ಅಂಸಖ್ಯಾತ ಅನುಯಾಯಿಗಳನ್ನು ಹೊಂದಿದ್ದು ಅವರೆಲ್ಲ ಶಾಸ್ತ್ರಿಯವರ ಪವಾಡ ಶಕ್ತಿಯನ್ನು ನಂಬುತ್ತಾರೆ.

ಧಿರೇಂದ್ರ ಕೃಷ್ಣ ಶಾಸ್ತ್ರಿ ಸವಾಲು ಸ್ವೀಕರಿಸಲಿಲ್ಲ!

ಅವರು ಜನರ ಮನಸ್ಸುಗಳನ್ನು ಓದಬಲ್ಲರು, ಜನ ಏನು ಯೋಚಿಸುತ್ತಿದ್ದಾರೆ ಅಂತ ಹೇಳಬಲ್ಲರು ಎಂದು ಅವರ ಅನುಯಾಯಿಗಳು ಹೇಳಿದ ಬಳಿಕ 1996 ರಲ್ಲಿ ಹುಟ್ಟಿರುವ ಧಿರೇಂದ್ರ ಕೃಷ್ಣ ಶಾಸ್ತ್ರಿ ಪ್ರಸಿದ್ಧರಾಗತೊಡಗಿದರು.
ಆದರೆ ಮಹರಾಷ್ಟ್ರದ ಅಂಧವಿಶ್ವಾಸ ಮತ್ತು ಮೂಢನಂಬಿಕೆ ನಿರ್ಮೂಲನಾ ಸಂಘವೊಂದು ಧಿರೇಂದ್ರ ಕೃಷ್ಣ ಶಾಸ್ತ್ರಿ ಒಬ್ಬ ವಂಚಕ ಅಂತ ಹೇಳಿದ್ದಲ್ಲದೆ ಅವರನ್ನು ತಾನು ನಡೆಸುವ ಸತ್ಸಂಗ್ ಒಂದಕ್ಕೆ ಆಹ್ವಾನಿಸಿತು. ತಮ್ಮ ಎದುರು ಪವಾಡ ನಡೆಸಿ ತೋರಿಸಿದರೆ ರೂ. 30 ಲಕ್ಷ ನಗದು ಬಹುಮಾನ ನೀಡುವುದಾಗಿ ಸಂಘ ಘೋಷಿಸಿತ್ತು.

ಆದರೆ ಮಹಾರಾಷ್ಟ್ರದ ನಾಗ್ಪುರ ನಗರದಲ್ಲಿ ರಾಮಕಥಾ ಕಾರ್ಯಕ್ರಮ ನಡೆಸುತ್ತಿದ್ದ ಧಿರೇಂದ್ರ ಕೃಷ್ಣ ಶಾಸ್ತ್ರಿ ಸಂಘ ಸವಾಲು ಸ್ವೀಕರಿಸದೆ ಅಲ್ಲಿಂದ ಪರಾರಿಯಾದರು. ಅವರು ಓಡಿಹೋದ ಕಾರಣ ಎಫ್ ಐ ಆರ್ ದಾಖಲಿಸಬೇಕೆಂದು ಪೊಲೀಸರನ್ನು ಆಗ್ರಹಿಸಲಾಗುತ್ತಿದೆ.

‘ನಾನು ನಾಗ್ಪುರ್ ದಿಂದ ಓಡಿಹೋಗಿಲ್ಲ’

ಆದರೆ, ಕಳೆದ ಗುರುವಾರದಂದು ಬಾಗೇಶ್ವರ್ ಧಾಮ ಸರ್ಕಾರ್ ಬಿಡುಗಡೆ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ ಅವರು, ‘ನಾನು ನಾಗ್ಪುರ್ ದಿಂದ ಓಡಿಹೋಗಿಲ್ಲ, ನಾನು ನಡೆಸುವ ಪವಾಡಗಳನ್ನು ನೋಡುವ ಇಚ್ಛೆಯಿದ್ದರೆ ಅವರೆಲ್ಲ ರಾಯ್ಪುರ್ ಗೆ ಬರಲಿ,’ ಅಂತ ಹೇಳಿದ್ದಾರೆ.

ಇದನ್ನೂ ಓದಿ:  ಸುಪ್ರೀಂಕೋರ್ಟ್ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡಬೇಕೆಂದ ಸಿಜೆಐ ಚಂದ್ರಚೂಡ್​​ ಮಾತು ಶ್ಲಾಘಿಸಿದ ಮೋದಿ

ಮತ್ತೊಂದು ವಿಡಿಯೋದಲ್ಲಿ ಧಿರೇಂದ್ರ ಕೃಷ್ಣ ಶಾಸ್ತ್ರಿ, ತನ್ನಲ್ಲಿ ಪವಾಡಗಳನ್ನು ನಡೆಸುವ ಶಕ್ತಿ ಯಾವುದೂ ಇಲ್ಲ ಮತ್ತು ತಾನು ಏನನ್ನೂ ಸಾಬೀತು ಮಾಡಬೇಕಿಲ್ಲ ಅಂತ ಹೇಳಿದ್ದಾರೆ. ‘ ಬಾಗೇಶ್ವರ್ ಬಲಾಜಿಯವರ ಪಾದಸೇವೆ ಮಾಡಿಕೊಂಡಿರುವ ಒಬ್ಬ ಸೇವಕ ನಾನು, ಅವರು ನನಗೆ ಪ್ರೇರಣೆ ನೀಡಿದ ಹಾಗೆ ನಾನು ಮಾಡುತ್ತೇನೆ,’ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ. ಹಿಂದೂ ಧರ್ಮ ತ್ಯಜಿಸಿ ಬೇರೆ ಬೇರೆ ಧರ್ಮಗಳಿಗೆ ಮತಾಂತರಗೊಂಡಿದ್ದ ಅನೇಕರನ್ನು ಅವರು ‘ಘರ್ ವಾಪ್ಸಿ’ ಮಾಡಿಸಿದ್ದಾರಂತೆ.

ರಾಜಕೀಯ ನಾಯಕರ ಬೆಂಬಲ

ಭಾರತೀಯ ಜನತಾ ಪಕ್ಷದ ಕಪಿಲ್ ಮಿಶ್ರಾ ಅವರು ಬಾಗೇಶ್ವರ್ ಧಾಮ್ ಮುಖ್ಯಸ್ಥನ ಬೆಂಬಲಕ್ಕೆ ನಿಂತಿದ್ದು, ಶಾಸ್ತ್ರಿಗಳು ಧಾರ್ಮಿಕ ಮತಾಂತರಗಳನ್ನು ನಿಲ್ಲಿಸಿರುವುದರಿಂದ ಅವರನ್ನು ಟಾರ್ಗೆಟ್ ಮಾಡಲಾಗಿದೆ ಎಂದಿದ್ದಾರೆ. ‘ರಾಷ್ಟ್ರ-ವಿರೋಧಿ ಮತ್ತು ಹಿಂದೂ-ವಿರೋಧಿ ಗುಂಪುಗಳಿಗೆ ಹೊಟ್ಟೆಯುರಿ ಉಂಟಾಗಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ,’ ಎಂದು ಕಪಿಲ್ ಮಿಶ್ರಾ ಟ್ವೀಟ್ ಮಾಡಿದ್ದಾರೆ.

ಧಿರೇಂದ್ರ ಕೃಷ್ಣ ಶಾಸ್ತ್ರಿ ಈಗ ಚರ್ಚೆ ಮತ್ತು ವಿವಾದದ ಕೇಂದ್ರಬಿಂದುವಾಗಿರುವುದರಿಂದ ಸ್ವಯಂಘೋಷಿತ ದೇವಮಾನವ ಹಲವಾರು ರಾಜಕೀಯ ನೇತಾರರ ಜೊತೆಗಿರುವ ಫೋಟೋಗಳು ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗುತ್ತಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ