ಕೋಲಾರ: ಸುನಾಮಿಯಂತೆ ನುಗ್ಗಿ ಕಂಪನಿಯಲ್ಲಿದ್ದ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದ್ರು. ಕಣ್ಣಿಗೆ ಕಾಣಿಸಿದ ಕಾರು, ಲ್ಯಾಪ್‌ಟ್ಯಾಪ್ ಸೇರಿದಂತೆ ಇನ್ನಿತರೆ ವಸ್ತುಗಳನ್ನೆಲ್ಲಾ ಪುಡಿಗಟ್ಟಿದ್ರು. ಕಳೆದ 4 ತಿಂಗಳಿನಿಂದ ವೇತನ ಕೊಡ್ತಿಲ್ಲ. ಮನವಿ ಮಾಡಿದ್ರು ರೆಸ್ಪಾನ್ಸ್ ಮಾಡ್ತಿಲ್ಲ ಅಂತಾ ಕಳೆದ ವಾರ ಕೋಲಾರ ತಾಲೂಕಿನ ನರಸಾಪುರದ ಬಳಿಯಿರುವ ವಿಸ್ಟ್ರಾನ್ ಕಂಪನಿಗೆ ಸಾವಿರಾರು ಕಾರ್ಮಿಕರು ನುಗ್ಗಿದ್ರು.
ನೋಡ ನೋಡ್ತಿದ್ದಂತೆ ಇಡೀ ಕಂಪನಿಯಲ್ಲಿ ಸಿಕ್ಕಸಿಕ್ಕಿದ್ದನ್ನೆಲ್ಲಾ ಧ್ವಂಸ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ಹುಡುಕಿ ಹುಡುಕಿ ಕೆಲ ಕಾರ್ಮಿಕರನ್ನ ಬಂಧಿಸಿದ್ರು. ಬಳಿಕ ಅದೆಷ್ಟೋ ಮಂದಿ ಕೆಲಸವಿಲ್ಲದೇ ಚಿಂತೆಗೊಳಗಾಗಿದ್ರು.
ಇಷ್ಟೆಲ್ಲಾ ಬೆಳವಣಿಗೆ ನಂತರ ಇದೀಗ ಕಂಪನಿ ಶೀಘ್ರದಲ್ಲೇ ಕಾರ್ಯಾರಂಭ ಮಾಡುವುದಾಗಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ, ಜೊತೆಗೆ ದಾಂದಲೆ ವೇಳೆ ಸರ್ಕಾರ ನೀಡಿದ ನೆರವಿಗೆ ಅಭಿನಂಧನೆ ಸಲ್ಲಿಸಿರುವ ಕಂಪನಿ, ಪೊಲೀಸರ ತನಿಖೆಗೆ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಈ ಮಧ್ಯೆ ತೈವಾನ್ನಿಂದ ತಂಡವೊಂದು ಕಂಪನಿಗೆ ಭೇಟಿ ನೀಡಿ ನಷ್ಟವಾಗಿರುವ ಕುರಿತು ಮಾಹಿತಿ ಪಡೆದಿದೆ. ಇನ್ನು ಕೆಲಸ ಕಳೆದುಕೊಂಡಿದ್ದ ಕೆಲವು ಕಾರ್ಮಿಕರು ಗೇಟ್ಬಳಿ ನಿಂತು ಕೆಲಸಕ್ಕಾಗಿ ಎದುರು ನೋಡುತ್ತಿದ್ದಾರೆ.
161 ಜನರ ಬಂಧನ:
ಗಲಾಟೆ ಕೇಸ್‌ಗೆ ಸಂಬಂಧಿಸಿದಂತೆ ಈಗಾಗಲೇ 161 ಜನರನ್ನು ಬಂಧಿಸಿರುವ ಪೊಲೀಸರು ತನಿಖೆ ಶುರುಮಾಡಿದ್ದಾರೆ. ಬಂಧಿತರು ದಾಂದಲೆ ವೇಳೆ ಕಳುವು ಮಾಡಿದ ಮೊಬೈಲ್ ಫೋನ್, ಲ್ಯಾಪ್ ಟ್ಯಾಪ್‌ಗಳಿಗಾಗಿ ಕಂಪನಿ ಬಳಿಯ ನೀಲಗಿರಿ ತೋಪಿನಲ್ಲಿ ಆರೋಪಿಗಳೊಂದಿಗೆ ಹುಡುಕಾಟ ನಡೆಸಿದ್ರು. ಕೆಲ ಮೊಬೈಲ್ ಫೋನ್ ಹಾಗೂ ಲ್ಯಾಪ್ಟ್ಯಾಪ್ಗಳು ಸಿಕ್ಕಿವೆ ಎನ್ನಲಾಗಿದೆ. ಇನ್ನು ಪ್ರತಿಭಟನೆಗೆ ಕರೆ ನೀಡಿದ್ದ ಎಸ್ಎಫ್ಐ ಸಂಘಟನೆ ತಾಲೂಕು ಅಧ್ಯಕ್ಷ ಶ್ರೀಕಾಂತ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದೇ ವೇಳೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ ವರ್ತೂರ್ ಪ್ರಕಾಶ್ ಕಂಪನಿಯಲ್ಲಿ ದಾಂದಲೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಅಮಾಯಕರು ಬಲಿಯಾಗಬಾರದು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಒಟ್ನಲ್ಲಿ ವಿಸ್ಟ್ರಾನ್ ಕಂಪನಿ ಶೀಘ್ರದಲ್ಲೇ ಕೆಲಸ ಆರಂಭಿಸುವುದಾಗಿ ಹೇಳುವ ಮೂಲಕ ಕಾರ್ಮಿಕರಲ್ಲಿ ಆಶಾಭಾವನೆ ಮೂಡಿಸಿದೆ. ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದ ಸಾವಿರಾರ ಕಾರ್ಮಿಕರ ಆತಂಕ ದೂರವಾಗಿದೆ.
Published On - 6:56 am, Thu, 17 December 20