ಚಿಹ್ನೆಗಳಿಗೆ ಅಂಟಿದ ಮೂಢನಂಬಿಕೆ ಭೂತ; ಕೆಲ ಸಿಂಬಲ್ ಕಂಡು ಭಯ ಬೀಳ್ತಿದ್ದಾರೆ ಗ್ರಾ.ಪಂ. ಅಭ್ಯರ್ಥಿಗಳು
ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿನ ಚಿಹ್ನೆಗಳಿಗೂ ಮೂಢನಂಬಿಕೆ ಸುತ್ತಿಕೊಂಡಿದೆ. ಅಭ್ಯರ್ಥಿಗಳು ಚಿಹ್ನೆ ಬಗ್ಗೆ ಇಟ್ಟುಕೊಂಡ ನಂಬಿಕೆ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿಯಾಗೋದು ಗ್ಯಾರಂಟಿ. ಏಕೆಂದರೆ, ಗ್ರಾಮಫೋನ್, ಡೋರ್ ಲಾಕ್, ಮೆಣಸಿನಕಾಯಿ ಹೀಗೆ ಹಲವಾರು ಚಿಹ್ನೆಗಳು ಅಪಶಕುನವಂತೆ!

ಗದಗ: ಗ್ರಾಮೀಣ ಪ್ರದೇಶಗಳಲ್ಲಿ ಮೂಢನಂಬಿಕೆಗೆ ಇನ್ನೂ ಬ್ರೇಕ್ ಬಿದ್ದಿಲ್ಲ. ಈಗ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿನ ಚಿಹ್ನೆಗಳಿಗೂ ಮೂಢನಂಬಿಕೆ ಸುತ್ತಿಕೊಂಡಿದೆ. ಅಭ್ಯರ್ಥಿಗಳು ಚಿಹ್ನೆ ಬಗ್ಗೆ ಇಟ್ಟುಕೊಂಡ ನಂಬಿಕೆ ಬಗ್ಗೆ ಕೇಳಿದರೆ ನಿಮಗೆ ಅಚ್ಚರಿಯಾಗೋದು ಗ್ಯಾರಂಟಿ. ಏಕೆಂದರೆ, ಗ್ರಾಮಫೋನ್, ಡೋರ್ ಲಾಕ್, ಮೆಣಸಿನಕಾಯಿ ಹೀಗೆ ಹಲವಾರು ಚಿಹ್ನೆಗಳು ಅಪಶಕುನವಂತೆ!
ಆಡು ಭಾಷೆಯಲ್ಲಿ ಗ್ರಾಮಫೋನ್ ಎಂದರೆ, ಖಾಲಿ ಭರವಸೆಗಳನ್ನು ನೀಡುವವನು ಎಂದರ್ಥವಿದೆ. ಇನ್ನು ಡೋರ್ ಲಾಕ್ ಎಂದರೆ ಅಭಿವೃದ್ಧಿ ಕಾಮಗಾರಿಗಳಿಗೆ ಬಾಗಿಲು ಮುಚ್ಚಿರುವುದು ಎಂದು ಅರ್ಥವಿದೆ. ಟೋಪಿ ಚಿಹ್ನೆ ಎಂದರೆ ಮೋಸ ಮಾಡುವುದು, ಬಾಸ್ಕೆಟ್ ಎಂದರೆ ಅತಿ ಆಸೆಯುಳ್ಳವನು, ಮೆಣಸಿನಕಾಯಿ ಎಂದರೆ ಅತ್ಯಂತ ಒರಟು ಎಂಬೆಲ್ಲಾ ಅರ್ಥಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ನೀಡಲಾಗಿರುವ ಚಿಹ್ನೆಗಳ ಬಗ್ಗೆ ಅಭ್ಯರ್ಥಿಗಳು ಆತಂಕಕ್ಕೊಳಗಾಗಿದ್ದಾರೆ ಎನ್ನಲಾಗಿದೆ.
ಕೆಲವೊಂದು ಚಿಹ್ನೆಗಳು ಪ್ರಚಾರ, ಚುನಾವಣಾ ತಂತ್ರಗಾರಿಕೆಗೆ ಮುಳುವಾಗಬಹುದು ಅಂತ ಅಭ್ಯರ್ಥಿಗಳು ನಂಬಿರುವುದಾಗಿ ಹೇಳಿದ್ದಾರೆ ಗದಗ ಜಿಲ್ಲಾ ಚುನಾವಣಾ ಉಪ ಆಯುಕ್ತ ಸುಂದರೇಶ್ ಬಾಬು ಎನ್.
ಕರ್ನಾಟಕ ಪಂಚಾಯತ್ ರಾಜ್ (ಚುನಾವಣಾ ನೀತಿ ಸಂಹಿತೆ) 1993 ರ ರೂಲ್ 21 ರ ಪ್ರಕಾರ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನೀಡಲಾಗಿದೆ. ಇದನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಆದರೆ, ಈಗ ಅಭ್ಯರ್ಥಿಗಳು ಪ್ರಚಾರಕ್ಕಿಂತ ಚಿಹ್ನೆಯ ಬಗ್ಗೆಯೇ ಅಭ್ಯರ್ಥಿಗಳು ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ ಎನ್ನುತ್ತಾರೆ ಉಪ ಆಯುಕ್ತರು.
ಇದನ್ನೂ ಓದಿ: ಗ್ರಾ.ಪಂ. ಮೊದಲ ಹಂತದ ಚುನಾವಣೆ: 4,377 ಮಂದಿ ಅವಿರೋಧವಾಗಿ ಆಯ್ಕೆ- ಚುನಾವಣಾ ಆಯೋಗ

ಗದಗ ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆಗೆ ವಿತರಿಸಿರುವ ಚಿಹ್ನೆಗಳು
ರೋಣ ತಾಲೂಕಿನ ಶಿರೋಳ ಗ್ರಾಮದ ಅಭ್ಯರ್ಥಿ ವೀರೇಶ ಆತಂಕದ ಬಗ್ಗೆ ಮಾತನಾಡಿದ್ದು, ನಗರ ಪ್ರದೇಶದಲ್ಲಿ ಜನರು ಚಿಹ್ನೆಗಳಿಗೆ ಹೆಚ್ಚು ಮಹತ್ವ ನೀಡುವುದಿಲ್ಲ. ಆದರೆ ಗ್ರಾಮೀಣ ಭಾಗದಲ್ಲಿ ಚಿಹ್ನೆಯನ್ನು ನೀಡುವುದನ್ನೇ ಜನರು ಕಾಯುತ್ತಿರುತ್ತಾರೆ. ಅಪಶಕುನದ ಚಿಹ್ನೆ ಪಡೆಯುವ ದುರದೃಷ್ಟವಂತರು ಎಂದು ಗೇಲಿ ಮಾಡಲು ಪ್ರಾರಂಭಿಸುತ್ತಾರೆ ಎನ್ನುತ್ತಾರೆ.
ಅಭ್ಯರ್ಥಿ ಸೋತರೆ, ಸೋಲಿನ ಹೊಣೆಯಲ್ಲಾ ಚಿಹ್ನೆಯದ್ದೇ!
ಒಂದು ವೇಳೆ ಓರ್ವ ಅಭ್ಯರ್ಥಿಗೆ ಹೆಲ್ಮೆಟ್ ಚಿಹ್ನೆಯಾಗಿ ದೊರೆತು ಆತ ಸೋತರೆ, ‘ಹೆಲ್ಮೆಟ್ ಅಭ್ಯರ್ಥಿಯ ತಲೆ ಉಳಿಸಲು ವಿಫಲವಾಯಿತು‘ ಎನ್ನುವ ಮಾತುಗಳು ಕೇಳಿ ಬರಲಿವೆ. ದ್ರಾಕ್ಷಿಯ ಚಿಹ್ನೆ ಪಡೆದಿರುವ ವ್ಯಕ್ತಿ ಸೋತರೆ ಅದನ್ನು ಹುಳಿ ದ್ರಾಕ್ಷಿ ಎನ್ನಲು ಪ್ರಾರಂಭಿಸುತ್ತಾರೆ. ಆದ್ದರಿಂದ ಇವೆಲ್ಲಾ ಮಾತುಗಳು ಬರಲೇಬಾರದು ಅಂತಹ ಚಿಹ್ನೆಯನ್ನು ಅಭ್ಯರ್ಥಿಗಳು ಹುಡುಕಲು ಯತ್ನಿಸುತ್ತಾರೆ” ಎನ್ನುತ್ತಾರೆ ಪತ್ತಾರ್.
ಹಾಗಂತ ಎಲ್ಲಾ ಚಿಹ್ನೆಗಳನ್ನೂ ಜನ ನಕಾರಾತ್ಮಕವಾಗಿಯೇ ನೋಡುವುದಿಲ್ಲ. ಸೈಕಲ್ ಚಿಹ್ನೆ ದೊರೆತರೆ ಯಶಸ್ಸಿನ ಪೆಡಲ್ ಎಂದು ಭಾವಿಸುತ್ತಾರೆ. ಟಾರ್ಚ್ ದೊರೆತರೆ ಕತ್ತಲೆ ದೂರ ಮಾಡುವುದು ಎನ್ನುತ್ತಾರೆ. ವಿಚಿತ್ರವೆಂದರೆ ಹೆಡ್ ಫೋನ್ಗಳಿಗೆ ಅತ್ಯುತ್ತಮ ಸಕಾರಾತ್ಮಕ ಅಭಿಪ್ರಾಯವಿದ್ದು, ಹೆಡ್ ಫೋನ್ನ್ನು ಸಮಸ್ಯೆಗಳನ್ನು ಆಲಿಸುವವ ಎಂದು ಭಾವಿಸುತ್ತಾರೆ. ಆದರೆ ಅಭ್ಯರ್ಥಿಗಳ ಇಷ್ಟದಂತೆ ಚುನಾವಣಾ ಆಯೋಗ ಚಿಹ್ನೆಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
-ಸಂಜೀವ ಪಾಂಡ್ರೆ

ಗದಗ ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆಗೆ ವಿತರಿಸಿರುವ ಚಿಹ್ನೆಗಳು