ಧರ್ಮದ ಎಲ್ಲೆ ಮೀರಿ.. ಬಡ ಮುಸ್ಲಿಂ ವಿದ್ಯಾರ್ಥಿನಿಯ MBBS ಕನಸು ಅರಳಿಸಿದ ತಾಳಿಕೋಟೆ ಮಂದಿ
ಧರ್ಮದ ಹೆಸರಲ್ಲಿ ಆಗುತ್ತಿರುವ ಗಲಾಟೆಗಳ ಸುದ್ದಿಗಳೇ ಹೆಚ್ಚುತ್ತಿರುವ ಈ ಹೊತ್ತಲ್ಲಿ ಬಡ ಮುಸ್ಲಿಂ ಯುವತಿಯೋರ್ವಳ ವೈದ್ಯೆಯಾಗುವ ಕನಸನ್ನು ಇತರೆ ಸಮುದಾಯಗಳು ನನಸು ಮಾಡಹೊರಟ ಅಂತಃಕರಣದ ಸುದ್ದಿಯೊಂದು ಹೊರಬಿದ್ದಿದೆ. ಸಾಮರಸ್ಯ ಮತ್ತು ಮಾನವೀಯತೆಯೇ ಧರ್ಮಗಳ ನೈಜ ಗುರಿಯೆಂದು ಇವರೆಲ್ಲ ಒಕ್ಕೊರಲಲ್ಲಿ ಸಾರುತ್ತಿದ್ದಾರೆ.
ವಿಜಯಪುರ: ಧರ್ಮದ ಹೆಸರಲ್ಲಿ ಆಗುತ್ತಿರುವ ಗಲಾಟೆಗಳ ಸುದ್ದಿಗಳೇ ಹೆಚ್ಚುತ್ತಿರುವ ಈ ಹೊತ್ತಲ್ಲಿ ಬಡ ಮುಸ್ಲಿಂ ಯುವತಿಯೋರ್ವಳ ವೈದ್ಯೆಯಾಗುವ ಕನಸನ್ನು ಇತರೆ ಸಮುದಾಯಗಳು ನನಸು ಮಾಡಹೊರಟ ಅಂತಃಕರಣದ ಸುದ್ದಿಯೊಂದು ಹೊರಬಿದ್ದಿದೆ. ಸಾಮರಸ್ಯ ಮತ್ತು ಮಾನವೀಯತೆಯೇ ಧರ್ಮಗಳ ನೈಜ ಗುರಿಯೆಂದು ಇವರೆಲ್ಲ ಒಕ್ಕೊರಲಲ್ಲಿ ಸಾರುತ್ತಿದ್ದಾರೆ.
ಜಿಲ್ಲೆಯ ತಾಳಿಕೋಟೆಯ ನಿವಾಸಿ ಶಾಗುಫ್ತಾ ಮಹಮ್ಮದ್ ರಫೀಕ ಶಾಪೂರಕರ ಕಡು ಬಡತನದಲ್ಲಿ ಬೆಳೆದವರು. ಆದರೆ ಓದುವ ಹುಕಿಗೆ, ಪಡೆಯುವ ಅಂಕಗಳಿಗೆ ಒಂದಿನಿತೂ ಕಡಿಮೆಯಿರಲಿಲ್ಲ. ಓದಿನಲ್ಲಿ ಸಾಧನೆ ಮಾಡುವ ಕನಸು ಕಂಡಿದ್ದ ಶಾಗುಫ್ತಾಗೆ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿದ್ದವು. ಜೊತೆಗೆ, ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 514 ಅಂಕಗಳನ್ನು ಪಡೆದಳು. ಇದರ ಬೆನ್ನಲ್ಲೇ, MBBS ಸೀಟ್ ಆಕೆಯನ್ನು ಹುಡುಕಿ ಬಂದಿತ್ತು.ಇನ್ನೇನು ಡಾಕ್ಟರ್ ಆಗಲು ನಾಲ್ಕೇ ಮೆಟ್ಟಿಲು ಎಂದು ಖುಷಿಯಲ್ಲಿದ್ದ ಶಾಗುಫ್ತಾ ಕನಸನ್ನು ಬಡತನ ಕಮರಿಸಿಬಿಟ್ಟಿತ್ತು. ನಿಗದಿತ ಸರ್ಕಾರಿ ಶುಲ್ಕ, ಹಾಸ್ಟೆಲ್ ಶುಲ್ಕ ಭರಿಸಲು ಹಣಕ್ಕೆ ಪರದಾಡಬೇಕಿತ್ತು. ಹೀಗಾಗಿ, ಕನಸಿಗೆ ತಿಲಾಂಜಲಿ ಹಾಡುವ ಹಂತದಲ್ಲಿದ್ದಳು ಶಾಗುಫ್ತಾ.
ಸಹಾಯ ಹಸ್ತ ಚಾಚಿದ ಇತರೆ ಸಮುದಾಯದವರು ಶಾಗುಫ್ತಾ ಕನಸಿಗೆ ಅವಳ ಮನೆಯ ಬಡತನ ಅಡ್ಡಿಯಾಗುವುದು ತಾಳಿಕೋಟೆಯ ಸಾರ್ವಜನಿಕರ ಗಮನಕ್ಕೆ ಬಂತು. ಶಾಗುಫ್ತಾಳನ್ನು ವೈದ್ಯೆಯನ್ನಾಗಿ ಮಾಡೇ ಮಾಡುತ್ತೇವೆಂದು ಸಂಕಲ್ಪ ಮಾಡಿದರು. ಬಾಗಲಕೋಟೆಯ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ MBBS ಸೀಟ್ ಪಡೆದಿದ್ದ ಶಾಗುಫ್ತಾಗೆ, ಪಟ್ಟಣದ ಕುಚಿಕು ಗೆಳೆಯರ ಬಳಗ, ಫ್ರೆಂಡ್ಸ್ ಫಾರೆವರ್, ಇಸ್ರೋ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಓರ್ವ ವಿಜ್ಞಾನಿ ಹಾಗೂ ತಾಳಿಕೋಟಿ ಪಟ್ಟಣದ ಇತರರು ಸೇರಿ 3 ಲಕ್ಷ ರೂಪಾಯಿಯನ್ನು ಸಂಗ್ರಹಿಸಿ ನೀಡಿದ್ದಾರೆ.ಈ ಹಣದಿಂದ ಶಾಗುಫ್ತಾ MBBSಗೆ ಅಡ್ಮಿಶನ್ ಮಾಡಿಸಿದ್ದಾಳೆ.
ಕೋಮು ಸೌಹಾರ್ದತೆ ಸಾರಿದ ತಾಳಿಕೋಟೆಯ ಜನರು ತಾಳಿಕೋಟೆಯ ಖಾಸ್ಗತೇಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ಸಿದ್ದಲಿಂಗ ದೇವರ ಸಮ್ಮುಖದಲ್ಲಿ ಸಂಗ್ರಹವಾದ ಹಣವನ್ನು ಶಾಗುಫ್ತಾಳಿಗೆ ನೀಡಲಾಯಿತು. ಪ್ರತಿಭೆ ಮತ್ತು ಪರಿಶ್ರಮಕ್ಕೆ ಬಡತನ ಅಡ್ಡಿಯಾಗಬಾರದೆಂಬ ತಾಳಿಕೋಟೆ ಜನರ ಸಂಕಲ್ಪ ನೆರವೇರಿದೆ. ಧರ್ಮ ಧರ್ಮಗಳ ನಡುವಿನ ಕಂದರವನ್ನು ಮೆಟ್ಟಿ ನಿಂತಿದ್ದಾರೆ. ಓರ್ವ ಉತ್ತಮ ವೈದ್ಯೆಯಾಗಿ ಸಮಾಜ ಸೇವೆ ಮಾಡುವಂತೆ ಶಾಗುಫ್ತಾಗೆ ಹಾರೈಸಿದ್ದಾರೆ. ಈ ಮೂಲಕ ಧರ್ಮ- ಜಾತಿಗಳ ನಡುವಿನ ಎಲ್ಲೆಗಳನ್ನು ಮೀರಿ ಬಾಳಬೇಕೆಂದು ತಾಳಿಕೋಟೆಯ ಜನತೆ ಇಡೀ ದೇಶಕ್ಕೆ ಸಾಮರಸ್ಯದ ಸಂದೇಶ ನೀಡಿದ್ದಾರೆ.
Published On - 1:47 pm, Thu, 17 December 20