ವಿಜಯಪುರ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಆ್ಯಂಬುಲೆನ್ಸ್‌ನಲ್ಲೇ ಹೆರಿಗೆಯಾಗಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ರಾಜನಾಳ ಗ್ರಾಮದ ಬಳಿ ನಡೆದಿದೆ. ರೇಷ್ಮಾ ಚಪ್ಪರಬಂದ್ ಎಂಬುವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದ ವೇಳೆ 108 ಆ್ಯಂಬುಲೆನ್ಸ್ಗೆ ರೇಷ್ಮಾ ಕುಟುಂಬಸ್ಥರು ಕರೆ ಮಾಡಿದ್ದರು. ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ಹೆರಿಗೆ ನೋವು ಹೆಚ್ಚಾಗಿದೆ. ಆ್ಯಂಬುಲೆನ್ಸ್ನ EMT ವಿಜಯಕುಮಾರ್ ಲಿಂಗದಳ್ಳಿ, ಪೈಲಟ್ ಬಸಪ್ಪ ಮುನ್ನೆಚ್ಚರಿಕೆಯಿಂದ ವಾಹನದಲ್ಲೇ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ.
ತಾಯಿ-ಮಗು ಆರೋಗ್ಯವಾಗಿದ್ದು, ಹೆರಿಗೆ ಬಳಿಕ ಬಸವನ ಬಾಗೇವಾಡಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರಕ್ಷಿತವಾಗಿ ಹೆರಿಗೆ ಮಾಡಿಸಿದ 108 ಸಿಬ್ಬಂದಿಗೆ ರೇಷ್ಮಾ ಕುಟುಂಬಸ್ಥರು ಅಭಿನಂದನೆ ತಿಳಿಸಿದ್ದಾರೆ.