
ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ದೃಷ್ಟಿಯಿಂದ ನಾವೆಲ್ಲರೂ ಹಳೆಯದಾದ, ಮುರಿದ ವಸ್ತುಗಳನ್ನೆಲ್ಲಾ ಮನೆಯಿಂದ ಎಸೆದು ಬಿಡುತ್ತೇವೆ. ಆದರೆ ಏನು ಗೊತ್ತಾ, ಇದರಿಂದ ಉಪಯೋಗವೇ ಇಲ್ಲ ಎಂದು ಬಿಸಾಡುವ ವಸ್ತುಗಳನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳಬಹುದು. ಅಂತಹ ವಸ್ತುಗಳಲ್ಲಿ ಟೂತ್‌ಬ್ರಷ್ (toothbrush) ಕೂಡ ಒಂದು. ಸಾಮಾನ್ಯವಾಗಿ ಹಳೆಯ ಟೂತ್‌ಬ್ರಷ್ ಅನ್ನು ಎಸೆದು ಬಿಡುತ್ತೇವೆ. ಇದನ್ನು ಎಸೆಯುವ ಬದಲು ಅನೇಕ ಮನೆ ಕೆಲಸಗಳಿಗೆ ಉಪಯೋಗಿಸಬಹುದು, ಇದರ ಸಹಾಯದಿಂದ ಅನೇಕ ಕೆಲಸಗಳನ್ನು ಸುಲಭವಾಗಿ ಮಾಡಬಹುದು. ಹಾಗಿದ್ದರೆ ಹಳೆಯ ಟೂತ್‌ಬ್ರಷ್ ಸಹಾಯದಿಂದ ಯಾವೆಲ್ಲಾ ಮನೆ ಕೆಲಸಗಳನ್ನು ಮಾಡಬಹುದು ಎಂಬುದನ್ನು ನೋಡೋಣ ಬನ್ನಿ.
ಗ್ಯಾಸ್ ಬರ್ನರ್ ಸ್ವಚ್ಛಗೊಳಿಸಬಹುದು: ನಿಮ್ಮ ಗ್ಯಾಸ್ ಬರ್ನರ್‌ಗಳನ್ನು ಸ್ವಚ್ಛಗೊಳಿಸಲು ಹಳೆಯ ಟೂತ್ ಬ್ರಷ್ ಅನ್ನು ಬಳಸಬಹುದು. ಗ್ಯಾಸ್ ಬರ್ನರ್‌ನ ಸಣ್ಣ ರಂಧ್ರಗಳಲ್ಲಿ ಕೊಳಕು ಹೆಚ್ಚಾಗಿ ಸಂಗ್ರಹವಾಗುತ್ತದೆ, ಇದನ್ನು ಬ್ರಷ್‌ನಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು.
ಆಭರಣಗಳ ಶುಚಿಗೊಳಿಸುವಿಕೆ: ಹಳೆಯ ಹಲ್ಲುಜ್ಜುವ ಬ್ರಷ್ ಎಸೆಯುವ ಬದಲು ಆಭರಣಗಳನ್ನು ಸ್ವಚ್ಛಗೊಳಿಸಲು ಅವುಗಳನ್ನು ಬಳಸಬಹುದು. ಬೆಳ್ಳಿಯ ಕಾಲ್ಗೆಜ್ಜೆಗಳು ಮತ್ತು ಚಿನ್ನದ ಕಿವಿಯೋಲೆಗಳನ್ನು ಟೂತ್‌ಬ್ರಷ್ ಸಹಾಯದಿಂದ ಸುಲಭವಾಗಿ ಸ್ವಚ್ಛಗೊಳಿಸಬಹುದು. ಸ್ವಲ್ಪ ಸೋಪ್ ಅಥವಾ ಸೌಮ್ಯವಾದ ಕ್ಲೀನರ್ ಬಳಸಿ, ಬ್ರಷ್‌ನಿಂದ ನಿಧಾನವಾಗಿ ಉಜ್ಜುವುದರಿಂದ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕಬಹುದು, ಮಾಸಿ ಹೋದ ಆಭರಣದ ಹೊಳಪನ್ನು ಹೆಚ್ಚಿಸಬಹುದು.
ಶೂಗಳನ್ನು ಸ್ವಚ್ಛಗೊಳಿಸಬಹುದು: ಕೆಲವೊಮ್ಮೆ ಬೂಟುಗಳಲ್ಲಿ ಕಲೆಯಾಗುತ್ತವೆ. ಅದರಲ್ಲೂ ಬಿಳಿ ಶೂಗಳ ಬದಿಗಳಲ್ಲಿ ಕೊಳಕು ಹೆಚ್ಚಾಗಿ ಗೋಚರಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ನೀವು ಅವುಗಳನ್ನು ಸ್ವಚ್ಛಗೊಳಿಸಲು ಹಲ್ಲುಜ್ಜುವ ಬ್ರಷ್ ಅನ್ನು ಬಳಸಬಹುದು. ಸ್ವಲ್ಪ ಸೋಪ್ ಅಥವಾ ಲಿಕ್ವಿಡ್ ಹಾಕಿ ಬ್ರಷ್‌ನಿಂದ ಸ್ಕ್ರಬ್ ಮಾಡಿದರೆ ಶೂಗಳಲ್ಲಿ ಅಂಟಿರುವ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.
ಅಡುಗೆಮನೆಯನ್ನು ಸ್ವಚ್ಛಗೊಳಿಸಬಹುದು: ಅಡುಗೆಮನೆಯನ್ನು ಸ್ವಚ್ಛಗೊಳಿಸಲು ಹಳೆಯ ಟೂತ್ ಬ್ರಷ್ ಕೂಡ ತುಂಬಾ ಉಪಯುಕ್ತವಾಗಿದೆ. ಸಿಂಕ್, ನಲ್ಲಿ, ನಲ್ಲಿಯ ಅಂಚುಗಳು ಅಥವಾ ಕೆಳಭಾಗವನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಅಲ್ಲದೆ ನೀರಿನ ಬಾಟಲ್, ಎಣ್ಣೆ ಬಾಟಲ್, ಡಬ್ಬಗಳನ್ನು, ಬ್ಲೆಂಡರ್‌ಗಳು, ಕಾಫಿ ಮೇಕರ್‌ಗಳನ್ನು ಸ್ವಚ್ಛಗೊಳಿಸಲು ಕೂಡ ಟೂತ್ ಬ್ರಷ್ ಉಪಯೋಗಕ್ಕೆ ಬರುತ್ತದೆ.
ಇದನ್ನೂ ಓದಿ: ಸೊಳ್ಳೆಯ ಕಾಟದಿಂದ ಪಾರಾಗಲು ಮನೆಯಲ್ಲಿ ಈ ಗಿಡಗಳನ್ನು ನೆಡುವುದು ಉತ್ತಮ
ಅಲಂಕಾರಿಕ ವಸ್ತುಗಳನ್ನು ಸ್ವಚ್ಛಗೊಳಿಸಬಹುದು: ಸಣ್ಣ ಮರದ ಅಲಂಕಾರಿಕ ವಸ್ತುಗಳನ್ನು ಸ್ವಚ್ಛಗೊಳಿಸಲು ಹಳೆಯ ಟೂತ್ ಬ್ರಷ್ ಸಹ ತುಂಬಾ ಉಪಯುಕ್ತವಾಗಿದೆ. ಈ ವಸ್ತುಗಳು ಸಾಮಾನ್ಯವಾಗಿ ಸಂಕೀರ್ಣವಾದ ಕೆತ್ತನೆಗಳು ಮತ್ತು ಸಣ್ಣ ಚಡಿಗಳನ್ನು ಹೊಂದಿರುತ್ತವೆ, ಇಂತಹ ಪ್ರದೇಶದಲ್ಲಿ ಸಂಗ್ರಹವಾಗುವ ಧೂಳು, ಕೊಳೆಯನ್ನು ತೆಗೆಯುವುದು ಕಠಿಣ ಕೆಲಸ. ಹೀಗಿರುವಾಗ ಟೂತ್‌ಬ್ರಷ್ ಸಹಾಯದಿಂದ ಇವುಗಳನ್ನು ಸುಲಭವಾಗಿ ಕ್ಲೀನ್ ಮಾಡಬಹುದು.
ಟೈಲ್ಸ್ ಸ್ವಚ್ಛಗೊಳಿಸಲು ಸಹಕಾರಿ: ಟೈಲ್ಸ್ ನಡುವೆ ಅಂಟಿಕೊಂಡಿರುವ ಕಲೆಗಳು, ಪೈಪ್‌ಗಳ ಸುತ್ತಲಿನ ಕೊಳೆಯನ್ನು ತೆಗೆದುಹಾಕಲು ಅಥವಾ ಕೀಬೋರ್ಡ್‌ಗಳಿಂದ ಧೂಳನ್ನು ತೆಗೆದುಹಾಕಲು ಟೂತ್‌ಬ್ರಷ್ ತುಂಬಾ ಉಪಯುಕ್ತವಾಗಿವೆ. ಸ್ವಲ್ಪ ಸೋಪ್ ಅಥವಾ ಕ್ಲೀನರ್‌ನೊಂದಿಗೆ ಇದನ್ನು ಬಳಸುವುದರಿಂದ ಮೊಂಡುತನದ ಕೊಳೆಯನ್ನು ಸಹ ಸುಲಭವಾಗಿ ತೆಗೆದುಹಾಕಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ