ಸೊಳ್ಳೆಯ ಕಾಟದಿಂದ ಪಾರಾಗಲು ಮನೆಯಲ್ಲಿ ಈ ಗಿಡಗಳನ್ನು ನೆಡುವುದು ಉತ್ತಮ
ಮಳೆಗಾಲದಲ್ಲಿ ಸೊಳ್ಳೆಗಳ ಕಾಟವೂ ತೀರಾ ಹೆಚ್ಚಾಗಿರುತ್ತವೆ. ಈ ಸೊಳ್ಳೆಗಳು ಮನೆಯನ್ನು ಪ್ರವೇಶಿಸುವುದನ್ನು ತಡೆಯಲು ಜನ ನಾನಾ ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಇವುಗಳ ಬದಲು ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಈ ಕೆಲವೊಂದಿಷ್ಟು ಗಿಡಗಳನ್ನು ಬಾಲ್ಕನಿ ಮತ್ತು ಮನೆ ಸುತ್ತಲೂ ನೆಡುವ ಮೂಲಕ ಸೊಳ್ಳೆಗಳು ಮನೆಯೊಳಗೆ ಬರುವುದನ್ನು ತಡೆಯಬಹುದು. ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಸಹಕಾರಿಯಾಗಿರುವ ಆ ಗಿಡಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

ಮುಂಗಾರು ಮಳೆ ಆರಂಭವಾಗಿದ್ದು, ಈ ಮಳೆಗಾಲದಲ್ಲಿ ಮಳೆಯೊಂದಿಗೆ ಸೊಳ್ಳೆಗಳ (mosquitoes) ಕಾಟವೂ ತೀರಾ ಹೆಚ್ಚಿರುತ್ತದೆ. ನಿಂತ ಮಳೆನೀರಿನಲ್ಲಿ ಸೊಳ್ಳೆಗಳು ಸಂತಾನೋತ್ಪತ್ತಿ ಮಾಡಲು ಪ್ರಾರಂಭಿಸುತ್ತವೆ. ಇದರಿಂದಾಗಿ ಮಳೆಗಾಲದಲ್ಲಿ ಸೊಳ್ಳೆಗಳು ಹೆಚ್ಚಾಗುವುದಲ್ಲದೆ ಇವು ಮಲೇರಿಯಾ, ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾದಂತಹ ಕಾಯಿಲೆಯ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹೀಗಾಗಿ ಈ ಸೊಳ್ಳೆಗಳ ಕಾಟದಿಂದ ಪಾರಾಗಲು ಜನ ನಾನಾ ಸರ್ಕಸ್‌ಗಳನ್ನು ಮಾಡುತ್ತಾರೆ. ಹೆಚ್ಚಾಗಿ ಕಾಯಿಲೆ, ಲಿಕ್ವಿಡ್‌ನಂತಹ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಆರೋಗ್ಯದ ದೃಷ್ಟಿಯಿಂದ ಇವುಗಳ ಬಳಕೆ ಅಷ್ಟೇನು ಒಳ್ಳೆಯದಲ್ಲ. ಇಂತಹ ಪರಿಸ್ಥಿತಿಯಲ್ಲಿ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡುವುದರೊಂದಿಗೆ ಈ ಕೆಲವೊಂದು ಗಿಡಗಳನ್ನು ಬಾಲ್ಕನಿ ಮತ್ತು ಮನೆ ಸುತ್ತಲೂ ನೆಡುವ ಮೂಲಕ ಸೊಳ್ಳೆಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಬಹುದು.
ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಮನೆಯಲ್ಲಿ ಈ ಗಿಡಗಳನ್ನು ನೆಡಿ:
ತುಳಸಿ ಗಿಡ: ಈ ಮಳೆಗಾಲದಲ್ಲಿ ಸೊಳ್ಳೆಗಳು ಮನೆ ಪ್ರವೇಶಿಸದಂತೆ ನೋಡಿಕೊಳ್ಳಲು ನೀವು ಮನೆ ಸುತ್ತಲೂ ಹಾಗೂ ಬಾಲ್ಕನಿಯಲ್ಲಿ ತುಳಸಿ ಗಿಡಗಳನ್ನು ನೆಡಬಹುದು. ತುಳಸಿಯು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಗೆ ಹೆಸರುವಾಸಿಯಾಗಿದ್ದು, ಈ ಸಸಿಯ ಬಲವಾದ ಸುವಾಸನೆಯು ಸೊಳ್ಳೆಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಪರಿಸರವನ್ನು ಸಹ ಶುದ್ಧೀಕರಿಸುತ್ತದೆ.
ರೋಸ್ಮರಿ: ರೋಸ್ಮರಿಯನ್ನು ಹೆಚ್ಚಾಗಿ ಕೂದಲಿನ ಆರೈಕೆಯಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಇವುಗಳು ಸೊಳ್ಳೆಗಳನ್ನು ಓಡಿಸಲು ಸಹ ಪರಿಣಾಮಕಾರಿ. ಇವುಗಳ ಬಲವಾದ ವಾಸನೆಯನ್ನು ಸೊಳ್ಳೆಗಳು ಇಷ್ಟಪಡುವುದಿಲ್ಲ. ಹೀಗಿರುವಾಗ ಬಾಲ್ಕನಿ, ಕಿಟಕಿ ಪಕ್ಕ ರೋಸ್ಮೆರಿ ಗಿಡಗಳನ್ನು ಇಡುವ ಮೂಲಕ ಸೊಳ್ಳೆಗಳು ಮನೆಯನ್ನು ಪ್ರವೇಶಿಸದಂತೆ ನೋಡಿಕೊಳ್ಳಬಹುದು.
ಲ್ಯಾವೆಂಡರ್: ಲ್ಯಾವೆಂಡರ್ ಸಸ್ಯ ಉಲ್ಲಾಸದಾಯಕ ಪರಿಮಳವನ್ನು ಹೊಂದಿದ್ದು, ಈ ಪರಿಮಳ ನಮ್ಮೆಲ್ಲರಿಗೂ ಇಷ್ಟವಾಗುತ್ತದೆ. ಆದರೆ ಸೊಳ್ಳೆಗಳು ಲ್ಯಾವೆಂಡರ್‌ನ ಪರಿಮಳವನ್ನು ಇಷ್ಟಪಡುವುದಿಲ್ಲ. ಹೀಗಿರುವಾಗ ಮನೆ ಸುತ್ತಲೂ ಲ್ಯಾವೆಂಡರ್ ಗಿಡ ನೆಡುವ ಮೂಲಕ ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಬಹುದು. ಅಲ್ಲದೆ ಈ ಗಿಡದ ಪರಿಮಳವು ನಮಗೆ ಚೆನ್ನಾಗಿ ನಿದ್ರೆ ಮಾಡಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಸೊಳ್ಳೆಗಳನ್ನು ನಿಯಂತ್ರಿಸೋದು ಹೇಗೆ? ಇಲ್ಲಿವೆ ಸುಲಭ ಮಾರ್ಗಗಳು
ಚೆಂಡುಹೂವಿನ ಗಿಡ: ಚೆಂಡು ಹೂವಿನ ಗಿಡವನ್ನು ಸುಲಭವಾಗಿ ಬೆಳೆಸಬಹುದು. ಇದರ ಕೇಸರಿ ಮತ್ತು ಹಳದಿ ಬಣ್ಣದ ಹೂವುಗಳು ಮನೆಯ ವಾತಾವರಣವನ್ನು ಸುಂದರಗೊಳಿಸುವುದಲ್ಲದೆ, ಇವುಗಳು ಸೊಳ್ಳೆಗಳು ಮನೆಯನ್ನು ಪ್ರವೇಶಿಸದಂತೆ ನೋಡಿಕೊಳ್ಳುತ್ತವೆ. ಚೆಂಡು ಹೂವುಗಳ ವಾಸನೆಯು ಸೊಳ್ಳೆಗಳಿಗೆ ಅಹಿತಕರವಾಗಿರುತ್ತದೆ ಮತ್ತು ಅವು ದೂರವಿರಲು ಬಯಸುತ್ತವೆ. ಆದ್ದರಿಂದ, ನಿಮ್ಮ ಮನೆಯ ಬಳಿ ಈ ಸಸ್ಯಗಳನ್ನು ನೆಡುವುದರಿಂದ ಸೊಳ್ಳೆಗಳ ಕಾಟದಿಂದ ಸುಲಭವಾಗಿ ಮುಕ್ತಿ ಪಡೆಯಬಹುದು.
ಪುದೀನ: ನಾವೆಲ್ಲರೂ ಪುದೀನದ ತಾಜಾ ಪರಿಮಳವನ್ನು ಇಷ್ಟಪಡುತ್ತೇವೆ, ಆದರೆ ಸೊಳ್ಳೆಗಳು ಮತ್ತು ನೊಣಗಳಿಗೆ ಈ ಬಲವಾದ ವಾಸನೆ ಇಷ್ಟವಾಗುವುದಿಲ್ಲ. ಹೀಗಿರುವಾಗ ಪುದೀನಾ ಗಿಡವನ್ನು ಕಿಟಕಿ ಬಳಿ ಮತ್ತು ಬಾಲ್ಕನಿಯಲ್ಲಿ ಇಡುವ ಮೂಲಕ ಸೊಳ್ಳೆಗಳು ಮನೆಯನ್ನು ಪ್ರವೇಶಿಸದಂತೆ ನೋಡಿಕೊಳ್ಳಬಹುದು.
ಬೇವು: ಔಷಧೀಯ ಗುಣಗಳಿಗೆ ಹೆಸರುವಾಸಿಯಾಗಿರುವ ಬೇವು ಸೊಳ್ಳೆಗಳನ್ನು ಓಡಿಸುವಲ್ಲೂ ಪರಿಣಾಮಕಾರಿ. ಅದರ ಎಲೆಗಳು ಮತ್ತು ಸುವಾಸನೆಯು ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




