ಚಳಿಗಾಲದಲ್ಲಿ ನಿತ್ಯ ಎಳ್ಳು ಸೇವನೆ ಮಾಡಿದರೆ ಏನಾಗುತ್ತದೆ?
ಚಳಿಗಾಲ ಆರಂಭವಾಗಿದೆ. ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿ ವಹಿಸಬೇಕು. ಆರೋಗ್ಯದ ದೃಷ್ಟಿಯಿಂದ ಈ ಸಮಯದಲ್ಲಿ ಎಳ್ಳು ಸೇವಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಈ ಸಣ್ಣ ಬೀಜಗಳು ಪ್ರೋಟೀನ್, ಆರೋಗ್ಯಕರ ಕೊಬ್ಬು, ಫೈಬರ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೇಸಿಯಂ ಮತ್ತು ಸತುವಿನಂತಹ ಪೋಷಕಾಂಶಗಳನ್ನು ಹೊಂದಿದ್ದು, ಇದನ್ನು ಸೇವನೆ ಮಾಡುವುದರಿಂದ ದೇಹದ ರೋಗನಿರೋಧಕ ಶಕ್ತಿ ಬಲವಾಗುವುದಲ್ಲದೆ, ಒಟ್ಟಾರೆ ಆರೋಗ್ಯ ಸುಧಾರಿಸುತ್ತದೆ.

ಚಳಿಗಾಲ (winter) ಆರಂಭವಾಗಿಬಿಟ್ಟಿದೆ. ಈ ಋತುವಿನಲ್ಲಿ ಕೊರೆಯುವ ಚಳಿಯ ಜೊತೆಗೆ ಶೀತ, ಕೆಮ್ಮು, ನೆಗಡಿಯಂತಹ ಆರೋಗ್ಯ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ತುಸು ಹೆಚ್ಚೇ ಕಾಳಜಿಯನ್ನು ವಹಿಸಬೇಕು. ಜೊತೆಗೆ ದೇಹವನ್ನೂ ಕೂಡ ಬೆಚ್ಚಗಾಗಿಡಬೇಕು. ಇದಕ್ಕಾಗಿ ಈ ಸಮಯದಲ್ಲಿ ಎಳ್ಳು ಸೇವನೆ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ. ಎಳ್ಳು ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಬಲಪಡಿಸುವುದರಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರ ವರೆಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ. ಅದಕ್ಕಾಗಿಯೇ ಚಳಿಗಾಲದಲ್ಲಿ ಎಳ್ಳನ್ನು ಸೇವನೆ ಮಾಡಬೇಕು ಎಂದು ಹೇಳೋದು.
ಚಳಿಗಾಲದಲ್ಲಿ ಎಳ್ಳು ಸೇವಿಸುವುದರಿಂದ ಲಭಿಸುವ ಪ್ರಯೋಜನಗಳು:
ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿ:
ಎಳ್ಳು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ, ಇದು ಮಲಬದ್ಧತೆಯನ್ನು ನಿವಾರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಅಲ್ಲದೆ ಎಳ್ಳಿನಲ್ಲಿರುವ ನಾರಿನ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ:
ಎಳ್ಳಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಚಳಿಗಾಲದಲ್ಲಿ ಶೀತ, ಕೆಮ್ಮು ಮತ್ತು ಇತರ ಕಾಲೋಚಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ದೇಹವನ್ನು ಬೆಚ್ಚಗಿಡುತ್ತದೆ:
ಚಳಿಗಾಲದಲ್ಲಿ ಎಳ್ಳು ತಿನ್ನುವುದರಿಂದ ದೇಹವು ಬೆಚ್ಚಗಿರಲು ಸಹಾಯ ಮಾಡುತ್ತದೆ. ಎಳ್ಳು ನಮ್ಮ ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತದೆ, ಶೀತ ಕಾಲದಲ್ಲಿ ನಡುಗುವ ಮತ್ತು ಶೀತ ಬರುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಒತ್ತಡವನ್ನು ನಿವಾರಿಸಲು ಸಹಕಾರಿ:
ಎಳ್ಳು ಸೆಸಮಿನ್ ಮತ್ತು ಸೆಸಮಾಲ್ ನಂತಹ ನೈಸರ್ಗಿಕ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವು ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ಉಂಟಾಗುವ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡವು ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಆದ್ದರಿಂದ, ನಿಮ್ಮ ಆಹಾರದಲ್ಲಿ ಎಳ್ಳು ಸೇರಿಸುವುದರಿಂದ ನಿಮ್ಮ ದೇಹಕ್ಕೆ ಉತ್ಕರ್ಷಣ ನಿರೋಧಕಗಳು ಲಭಿಸುತ್ತವೆ.
ಮೂಳೆಗಳನ್ನು ಬಲಪಡಿಸಲು ಸಹಕಾರಿ:
ಮೂಳೆಗಳ ಆರೋಗ್ಯಕ್ಕೆ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ನಂತಹ ಖನಿಜಗಳು ಅತ್ಯಗತ್ಯ. ಎಳ್ಳು ಈ ಎರಡೂ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಅಲ್ಲದೆ ಇದರಲ್ಲಿ ಸತು ಮತ್ತು ಮ್ಯಾಂಗನೀಸ್ ಕೂಡ ಇದೆ. ಇದರ ಸೇವನೆಯಿಂದ ಮೂಳೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಅಲ್ಲದೆ ಎಳ್ಳು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಮೂಳೆ ಮತ್ತು ಕೀಲು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?
ಎಳ್ಳು ತಿನ್ನುವ ವಿಧಾನಗಳು:
ತಜ್ಞರು ಪ್ರತಿದಿನ 1 ರಿಂದ 2 ಟೀ ಚಮಚ ಎಳ್ಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಚಳಿಗಾಲದಲ್ಲಿ ಎಳ್ಳನ್ನು ಲಡ್ಡುಗಳ ರೂಪದಲ್ಲಿ ತಿನ್ನಬಹುದು. ಎಳ್ಳು ಲಡ್ಡು ತಿನ್ನಬಹುದು. ಇದಲ್ಲದೆ ಪೋಹಾ, ಸಲಾಡ್ ಮತ್ತು ಸೂಪ್‌ಗಳಿಗೂ ಹುರಿದ ಎಳ್ಳನ್ನು ಸೇರಿಸಬಹುದು. ರುಚಿಕರ ಚಟ್ನಿ ಮಾಡಬಹುದು. ಇದು ನಿಮ್ಮ ಊಟದ ರುಚಿ ಮತ್ತು ಪೌಷ್ಟಿಕಾಂಶ ಎರಡನ್ನೂ ಹೆಚ್ಚಿಸುತ್ತದೆ. ಈ ರೀತಿ ಎಳ್ಳನ್ನು ಸೇವಿಸುವುದರಿಂದ ನಿಮ್ಮ ದೇಹವು ರೋಗಗಳಿಂದ ದೂರವಿಡಲು ಸಹಾಯ ಮಾಡುತ್ತದೆ. ನಿಮಗೆ ಎಳ್ಳು ಅಲರ್ಜಿ ಇದ್ದರೆ, ಅವುಗಳನ್ನು ಸೇವಿಸುವುದನ್ನು ತಪ್ಪಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




