ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನೋದ್ರಿಂದ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಗೊತ್ತೇ?
ಭಾರತೀಯ ಜನಪ್ರಿಯ ಮಸಾಲೆಗಳಲ್ಲಿ ಒಂದಾದ ಏಲಕ್ಕಿ ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲ, ಆರೋಗ್ಯಕ್ಕೂ ಸಖತ್ ಪ್ರಯೋಜನಕಾರಿ. ಹೌದು ಏಲಕ್ಕಿ ಅನೇಕ ಔಷಧೀಯ ಗುಣಗಳನ್ನು ಹೊಂದಿದ್ದು, ಇದು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅನೇಕ ಜನರು ಊಟದ ನಂತರ ಬಾಯಿಯ ದುರ್ವಾಸನೆಯನ್ನು ನಿವಾರಿಸಲು ಏಲಕ್ಕಿಯನ್ನು ಸೇವಿಸುತ್ತಾರೆ. ಬಾಯಿಯ ವಾಸನೆಯನ್ನು ನಿವಾರಿಸುವುದರ ಜೊತೆಗೆ ಈ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

“ಮಸಾಲೆಗಳ ರಾಣಿ” ಎಂದೇ ಕರೆಯಲ್ಪಡುವ ಏಲಕ್ಕಿ (cardamom) ಭಾರತೀಯ ಅಡುಗೆಗಳಲ್ಲಿ ಬಳಸಲ್ಪಡುವ ಪ್ರಮುಖ ಮಸಾಲೆ ಪದಾರ್ಥವಾಗಿದೆ. ಸಿಹಿ ಖಾದ್ಯ, ಚಹಾದಿಂದ ಹಿಡಿದು ಅನೇಕಾರು ಅಡುಗೆಗಳಲ್ಲಿ ಏಲಕ್ಕಿಯನ್ನು ಬಳಸಲಾಗುತ್ತದೆ. ಅಷ್ಟೇ ಅಲ್ಲದೆ ಅನೇಕರು ಬಾಯಿಯ ವಾಸನೆಯನ್ನು ನಿವಾರಿಸಲು ಊಟದ ಬಳಿಕ ಸ್ವಲ್ಪ ಏಲಕ್ಕಿಯನ್ನು ಅಗಿಯುತ್ತಾರೆ. ಇದು ಬಾಯಿಯ ವಾಸನೆಯನ್ನು ನಿವಾರಿಸುವುದು ಮಾತ್ರವಲ್ಲ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕೂಡ ಹೊಂದಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಫೈಬರ್ ಮತ್ತು ಖನಿಜಗಳು ಸಮೃದ್ಧವಾಗಿದ್ದು, ದೇಹಕ್ಕೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ಹಾಗಿದ್ದರೆ ಊಟದ ಬಳಿಕ ಒಂದೆರಡು ಏಲಕ್ಕಿ ತಿನ್ನುವುದರಿಂದ ಲಭಿಸುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ನೋಡೋಣ ಬನ್ನಿ.
ಏಲಕ್ಕಿ ಬಾಯಿಯ ದುರ್ವಾಸನೆಯನ್ನು ನಿವಾರಿಸಲು ಸಹಕಾರಿ:
ಏಲಕ್ಕಿಯನ್ನು ನೈಸರ್ಗಿಕ ಮೌತ್ ಫ್ರೆಶ್ನರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರ ಆರೊಮ್ಯಾಟಿಕ್ ಎಣ್ಣೆಗಳು ಬಾಯಿಯ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತವೆ ಮತ್ತು ಉಸಿರಾಟವನ್ನು ತಾಜಾಗೊಳಿಸುತ್ತವೆ. ಊಟದ ನಂತರ ಏಲಕ್ಕಿಯನ್ನು ಅಗಿಯುವುದರಿಂದ ಬಾಯಿಯ ವಾಸನೆಯನ್ನು ನಿವಾರಿಸಬಹುದು ಮತ್ತು ಮೌಖಿಕ ನೈರ್ಮಲ್ಯವನ್ನು ಸುಧಾರಿಸಬಹುದು.
ಲಾಲಾರಸವನ್ನು ಹೆಚ್ಚಿಸಲು ಸಹಕಾರಿ:
ಊಟದ ನಂತರ ಏಲಕ್ಕಿಯನ್ನು ಅಗಿಯುವುದರಿಂದ ಲಾಲಾರಸದ ಉತ್ಪಾದನೆಯು ಉತ್ತೇಜಿಸುತ್ತದೆ, ಇದು ಜೀರ್ಣಕ್ರಿಯೆಗೆ ಅಗತ್ಯವಾದ ಕಿಣ್ವಗಳ ಬಿಡುಗಡೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಆಹಾರವನ್ನು ಒಡೆಯಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹ ಸಹಾಯ ಮಾಡುತ್ತದೆ:
ಏಲಕ್ಕಿಯಲ್ಲಿ ಕಂಡುಬರುವ ಸಿನಿಯೋಲ್ ಮತ್ತು ಇತರ ಎಣ್ಣೆಗಳು ಜೀರ್ಣಕಾರಿ ಕಿಣ್ವಗಳನ್ನು ಸಕ್ರಿಯಗೊಳಿಸುತ್ತವೆ. ಊಟದ ನಂತರ ಅದನ್ನು ಅಗಿಯುವುದರಿಂದ ಗ್ಯಾಸ್, ಹೊಟ್ಟೆಯುಬ್ಬರ ಮತ್ತು ಆಮ್ಲೀಯತೆಯಿಂದ ಪರಿಹಾರ ಸಿಗುತ್ತದೆ. ಇದು ಹೊಟ್ಟೆಯ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ, ಭಾರೀ ಊಟದ ನಂತರ ಉಂಟಾಗುವ ಹೊಟ್ಟೆಯಲ್ಲಿನ ಸುಡುವ ಸಂವೇದನೆ ಅಥವಾ ಭಾರವನ್ನು ಸಹ ಕಡಿಮೆ ಮಾಡುತ್ತದೆ.
ಏಲಕ್ಕಿ ದೇಹವನ್ನು ನಿರ್ವಿಷಗೊಳಿಸುತ್ತದೆ:
ಏಲಕ್ಕಿ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಅಗಿಯುವುದರಿಂದ ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯ ಸುಧಾರಿಸುತ್ತದೆ ಮತ್ತು ದೇಹದ ಚಯಾಪಚಯ ಕ್ರಿಯೆ ಸಮತೋಲನಗೊಳ್ಳುತ್ತದೆ. ಏಲಕ್ಕಿ ಸಣ್ಣ ಮಸಾಲೆಯಾಗಿದ್ದರೂ, ಇದು ದೇಹವನ್ನು ಶುದ್ಧೀಕರಿಸಲು ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮನೆಯನ್ನು ಸುಂದರಗೊಳಿಸುವುದರ ಜೊತೆಗೆ ಗಾಳಿಯನ್ನು ಶುದ್ಧೀಕರಿಸುತ್ತವೆ ಈ ಸಸ್ಯಗಳು
ಸಿಹಿ ತಿನ್ನುವ ಹಂಬಲವನ್ನು ಕಡಿಮೆ ಮಾಡುತ್ತದೆ:
ಏಲಕ್ಕಿ ಸ್ವಲ್ಪ ಸಿಹಿ ಮತ್ತು ಆರೊಮ್ಯಾಟಿಕ್ ಪರಿಮಳವನ್ನು ಹೊಂದಿರುತ್ತದೆ, ಇದು ಸಿಹಿ ತಿನ್ನುವ ಹಂಬಲವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಊಟದ ನಂತರ ಏಲಕ್ಕಿ ತಿನ್ನುವುದು ತುಂಬಾನೇ ಒಳ್ಳೆಯದು. ಅಲ್ಲದೆ ಇದರ ಸುವಾಸನೆಯು ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಒತ್ತಡ ಅಥವಾ ಬೇಸರಗೊಂಡಾಗ ಆಗುವ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
ಊಟದ ನಂತರ ಎಷ್ಟು ಏಲಕ್ಕಿ ತಿನ್ನಬೇಕು?
ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಧಾರಿಸಲು, ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಮತ್ತು ಬಾಯಿಯ ದುರ್ವಾಸನೆಯಿಂದ ಪರಿಹಾರ ಪಡೆಯಲು ಊಟದ ಬಳಿಕ ಒಂದು ಅಥವಾ ಎರಡು ಏಲಕ್ಕಿಗಳನ್ನು ಅಗಿಯುವುದು ಪ್ರಯೋಜನಕಾರಿಯಾಗಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
