Baby Shower: ಸೀಮಂತ ಶಾಸ್ತ್ರ ಏಕೆ ಮಾಡಬೇಕು? ಯಾವ ತಿಂಗಳಿನಲ್ಲಿ ಇದನ್ನು ಮಾಡಬೇಕು? ಇದರ ಹಿಂದಿದೆ ವೈಜ್ಞಾನಿಕ ಕಾರಣ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 29, 2023 | 3:16 PM

ಭಾರತದಲ್ಲಿ ಹಲವು ಸಂಪ್ರದಾಯಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಸೀಮಂತಶಾಸ್ತ್ರವು ಒಂದು. ಇಂದಿನ ದಿನಗಳಲ್ಲಿ ಬಹಳ ಅದ್ದೂರಿಯಾಗಿ ಆಚರಿಸಲ್ಪಡುವ ಸೀಮಂತ ಶಾಸ್ತ್ರ ಆಚರಣೆಯ ಹಿಂದಿನ ಹಿನ್ನೆಲೆ ಏನು ಎಂಬುದರ ಮಾಹಿತಿ ಇಲ್ಲಿದೆ.

Baby Shower: ಸೀಮಂತ ಶಾಸ್ತ್ರ ಏಕೆ ಮಾಡಬೇಕು? ಯಾವ ತಿಂಗಳಿನಲ್ಲಿ ಇದನ್ನು ಮಾಡಬೇಕು? ಇದರ ಹಿಂದಿದೆ ವೈಜ್ಞಾನಿಕ ಕಾರಣ
ಸಾಂದರ್ಭಿಕ ಚಿತ್ರ
Follow us on

ಭಾರತವು ಸಂಸ್ಕೃತಿ ಸಂಪ್ರದಾಯಗಳ ತವರೂರು. ಇಲ್ಲಿ ಪ್ರತಿಯೊಂದು ಆಚರಣೆಗಳನ್ನು ಬಹಳ ಶ್ರದ್ಧೆಯಿಂದ ಆಚರಿಸಲಾಗುತ್ತದೆ. ಹಾಗೂ ಹಿಂದೂ ಸಂಪ್ರದಾಯದಲ್ಲಿ ಆಚರಿಸುವ ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದು ವೈಜ್ಞಾನಿಕ ಕಾರಣವಿದೆ. ನಮ್ಮ ಸಂಪ್ರದಾಯದಲ್ಲಿ ಹಲವು ಆಚರಣೆಗಳು ರೂಢಿಯಲ್ಲಿದೆ. ಅದರಲ್ಲಿ ಸೀಮಂತ ಶಾಸ್ತ್ರವೂ ಒಂದು. ಗರ್ಭಿಣಿ ಮಹಿಳೆಗೆ 5, 7 ಅಥವಾ 9ನೇ ತಿಂಗಳಿನಲ್ಲಿ ನಡೆಸುವ ಶಾಸ್ತ್ರ ಇದಾಗಿದೆ. ಸಂಸ್ಕೃತದಲ್ಲಿ ‘ಸೀಮಂತೋನ್ನಯನ’ ಎಂದು ಕರೆಯಲ್ಪಡುವ ಸೀಮಂತವು 16 ಹಿಂದೂ ಸಂಸ್ಕಾರಗಳಲ್ಲಿ ಒಂದಾಗಿದೆ. ವಿವಿಧ ಕಡೆಗಳಲ್ಲಿ ವಿವಿಧ ರೀತಿಯ ವಿಧಿವಿಧಾನದ ಮೂಲಕ ಸೀಮಂತ ಶಾಸ್ತ್ರವನ್ನು ಆಚರಿಸುತ್ತಾರೆ. ಸೀಮಂತಶಾಸ್ತ್ರವನ್ನು ಏಕೆ ಮಾಡುತ್ತಾರೆ. ಇದರ ಹಿಂದಿನ ವೈಜ್ಞಾನಿಕ ಹಿನ್ನೆಲೆ ಏನು ಎಂಬುದನ್ನು ನೊಡೋಣಾ:

ಸೀಮಂತ ಶಾಸ್ತ್ರವನ್ನು ಯಾವಾಗ ಮಾಡಲಾಗುತ್ತದೆ:

16 ಹಿಂದೂ ಸಂಸ್ಕಾರಗಳಲ್ಲಿ ಸೀಮಂತವೂ ಒಂದು. ಗರ್ಭಿಣಿ ಮಹಿಳೆಯ ಸುರಕ್ಷಿತ ಹೆರಿಗೆಗಾಗಿ ಹಿರಿಯರಿಂದ ಆಶಿರ್ವಾದ ಪಡೆಯಲು ಮತ್ತು ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಆಕೆಗೆ ಹೆಚ್ಚು ದೃಷ್ಟಿ ತಾಕಿರುತ್ತದೆ ಅದನ್ನು ಹೋಗಲಾಡಿಸುವ ಸಲುವಾಗಿ ಸೀಮಂತವನ್ನು ಮಾಡಲಾಗುತ್ತದೆ.

ಗರ್ಭಿಣಿ ಮಹಿಳೆಗೆ 7ನೇ ತಿಂಗಳು ತುಂಬುವ ಹೊತ್ತಿಗೆ ಸೀಮಂತಶಾಸ್ತ್ರವನ್ನು ಮಾಡಲಾಗುತ್ತದೆ. (ಕೆಲವರು 5 ಅಥವಾ 9 ತಿಂಗಳಿನಲ್ಲಿಯೂ ಮಾಡುತ್ತಾರೆ) ಏಕೆಂದರೆ ಗರ್ಭಿಣಿ ಮಹಿಳೆ 7ನೇ ತಿಂಗಳಿನಲ್ಲಿರುವಾಗ ಆಕೆಯ ದೇಹದ ಹಾರ್ಮೋನು ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆ ಕಂಡುಬರುತ್ತದೆ. ಹಾರ್ಮೋನಗಳ ಬದಲಾವಣೆಯಿಂದ ಆಕೆಯ ಮನಸ್ಸಿಗೆ ಏನೋ ತಳಮಳ ಭಾವನೆ ಉಂಟಾಗುತ್ತದೆ. ಇವೆಲ್ಲವನ್ನು ಹೋಗಲಾಡಿಸಿ ಆಕೆಗೆ ಧೈರ್ಯ ತುಂಬಲು ಸೀಮಂತ ಶಾಸ್ತ್ರವನ್ನು ಆಚರಿಸಲಾಗುತ್ತದೆ.

ಸೀಮಂತ ಶಾಸ್ತ್ರದ ಉದ್ದೇಶ:

ಗರ್ಭಿಣಿಯಾಗಿದ್ದಾಗ ಪ್ರತಿಯೊಬ್ಬ ಮಹಿಳೆಯ ದೇಹದಲ್ಲೂ ಹಾರ್ಮೋನು ಬದಲಾವಣೆಯಾಗುತ್ತದೆ. ಇದರಿಂದ ಆಕೆಯ ಸುತ್ತಾ ನಕರಾತ್ಮಕತೆ ಸುಳಿದಾಡುತ್ತಿರುತ್ತದೆ. ಇದರಿಂದ ಕೆಲವೊಮ್ಮೆ ಗರ್ಭಿಣಿ ಮಹಿಳೆ ಖಿನ್ನತೆಗೆ ಜಾರುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಆಕೆಯನ್ನು ಖುಷಿಪಡಿಸುವ ಸಲುವಾಗಿ ಸೀಮಂತವನ್ನು ಮಾಡಲಾಗುತ್ತದೆ. ಮತ್ತು ಈ ಶಾಸ್ತ್ರದಲ್ಲಿ ಗರ್ಭಿಣಿ ಮಹಿಳೆಗೆ ಆರತಿ ಬೆಳಗುತ್ತಾರೆ, ಬಳೆ ತೊಡಿಸುವ ಶಾಸ್ತ್ರ ಮಾಡುತ್ತಾರೆ. ಮತ್ತು ಕೆಲವು ಸಂಪ್ರದಾಯದಲ್ಲಿ ಮಂತ್ರಗಳ ಪಠಣೆ ಮಾಡಲಾಗುತ್ತದೆ. ಇವೆಲ್ಲವೂ ಗರ್ಭಿಣಿ ಮಹಿಳೆ ಮತ್ತು ಆಕೆಯ ಹೊಟ್ಟೆಯೊಳಗಿನ ಮಗುವಿಗೆ ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ಹಾಗೂ ಬಳೆಯ ಸದ್ದು, ಆಕೆಯ ಖಿನ್ನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿಯೇ ಸೀಮಂತದಲ್ಲಿ ಗರ್ಭಿಣಿ ಮಹಿಳೆಗೆ ಹಸಿರು ಗಾಜಿನ ಬಳೆಗಳನ್ನು ತೊಡಿಸಲಾಗುತ್ತದೆ. ಅಲ್ಲದೆ ಸೀಮಂತದಲ್ಲಿ ತೊಡುವ ಹಸಿರು ಸೀರೆ, ಬಳೆ ಸಮೃದ್ಧಿ ಮತ್ತು ಸಂತೋಷದ ಸಂಕೇತವಾಗಿದೆ.

ಸೀಮಂತವನ್ನು ಮಾಡುವ ಇನ್ನೊಂದು ಉದ್ದೇಶವೆಂದರೆ, ಗರ್ಭಿಣಿಯಾಗಿದ್ದಾಗ, ಮಹಿಳೆಗೆ ಹಲವಾರು ಬಯಕೆಗಳು ಇರುತ್ತದೆ, ಅದರಲ್ಲೂ ಈ ಸಂದರ್ಭದಲ್ಲಿ ಆಕೆಗೆ ತನ್ನ ತವರು ಮನೆಯ ನೆನಪು ವಿಪರೀತವಾಗಿ ಕಾಡುತ್ತಿರುತ್ತದೆ, ಹಾಗೂ ತನ್ನ ನೆಚ್ಚಿನ ತಿನಿಸುಗಳನ್ನು ತಿನ್ನಬೇಕು ಎಂಬ ಹಂಬಲವಿರುತ್ತದೆ. ಈ ಎಲ್ಲಾ ಬಯಕೆಗಳನ್ನು ಈಡೇರಿಸಲು ಸೀಮಂತಶಾಸ್ತ್ರವನ್ನು ನೆರವೇರಿಸುತ್ತಾರೆ, ಈ ಶುಭ ಕಾರ್ಯದ ಸಂದರ್ಭದಲ್ಲಿ ಆಕೆ ತನ್ನ ತವರುಮನೆಯವರ ಹಾಗೂ ಹಿರಿಯರ ಆಶೀರ್ವಾದ ಪಡೆಯುತ್ತಾಳೆ ಮತ್ತು ಈ ಶಾಸ್ತ್ರದಲ್ಲಿ ಮುಖ್ಯವಾಗಿ ಗರ್ಭಿಣಿ ಮಹಿಳೆಗೆ ಆಕೆಯ ಬಯಕೆಯನ್ನು ಈಡೇರಿಸಲು ಹಲವು ಬಗೆಯ ಹಣ್ಣು ಹಂಪಲು ಹಾಗೂ ತಿಂಡಿ ತಿನಿಸುಗಳನ್ನು ಉಣಬಡಿಸಲಾಗುತ್ತದೆ. ನಂತರ ಮಡಿಲಕ್ಕಿ ತುಂಬಿ ಆಕೆಯನ್ನು ತವರು ಮನೆಗೆ ಕಳುಹಿಸಿಕೊಟ್ಟು ಆಕೆಯ ಬಯಕೆಯನ್ನು ಈಡೇರಿಸಲಾಗುತ್ತದೆ.

ಇದನ್ನೂ ಓದಿ:ಚರ್ಮದ ಆರೈಕೆಯಲ್ಲಿ ಗರ್ಭಿಣಿಯರು ತಿಳಿದುಕೊಳ್ಳಬೇಕಾದ ಅಂಶಗಳು 

ಇನ್ನೊಂದು ಮುಖ್ಯ ಉದ್ದೇಶವೆಂದರೆ ಪ್ರತಿಯೊಬ್ಬ ಮಹಿಳೆಗೂ ತನ್ನ ಚೊಚ್ಚಳ ಹೆರಿಗೆಯ ಸಂದರ್ಭದಲ್ಲಿ ಒಂದು ರೀತಿಯ ಭಯ, ತಳಮಳ ಎನ್ನುವಂತಹದ್ದು ಇದ್ದೇ ಇರುತ್ತದೆ. ಇದರಿಂದ ಆಕೆ ಖಿನ್ನತೆಗೆ ಜಾರುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಆಕೆಯನ್ನು ಸಂತೋಷಪಡಿಸಬೇಕು ಆಕೆಗೆ ಧೈರ್ಯ ತುಂಬಬೇಕು ಎನ್ನುವ ಉದ್ದೇಶದಿಂದ ಕುಟುಂಬದ ಸದಸ್ಯರು ಸೀಮಂತ ಶಾಸ್ತ್ರವನ್ನು ಮಾಡುತ್ತಾರೆ. ಇದರಿಂದ ಹುಟ್ಟುವ ಮಗು ಕೂಡಾ ಆರೋಗ್ಯವಾಗಿ ಹುಟ್ಟುತ್ತದೆ ಎನ್ನುವ ನಂಬಿಕೆಯಿದೆ.

ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ, ಗರ್ಭಿಣಿ ಮಹಿಳೆಯು ತನ್ನ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಈ ಸಂದರ್ಭದಲ್ಲಿ ಆಕೆ ಖಿನ್ನತೆಗೆ ಜಾರುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಿರುವಾಗ ಸಕಾರಾತ್ಮಕ ಆಲೋಚನೆಗಳೊಂದಿಗೆ ಆಕೆಯ ಉತ್ತಮ ಮನಸ್ಥಿತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಹಾಗಾಗಿ ಆಕೆಯನ್ನು ಸಂತೋಷಪಡಿಸಲು ರುಚಿಕರ ಭೋಜನ ಮತ್ತು ಸೀಮಂತದ ಶಾಸ್ತ್ರವನ್ನು ಆಚರಿಸಲಾಗುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: