
ಸ್ನೇಹಿತರು ಮತ್ತು ಆಪ್ತ ಜನರು ನಮ್ಮ ಜೀವನದಲ್ಲಿ (Life) ಮುಖ್ಯ ಪಾತ್ರವನ್ನು ನಿರ್ವಹಿಸುತ್ತಾರೆ. ನಾವು ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಸಂಗತಿಗಳನ್ನು ಕೂಡ ಅವರೊಂದಿಗೆ ಶೇರ್ ಮಾಡಿಕೊಳ್ಳುತ್ತೇವೆ. ಆದರೆ ಈ ರೀತಿ ಎಲ್ಲರನ್ನೂ ಕುರುಡಾಗಿ ನಂಬಿ, ಅವರೊಂದಿಗೆ ಎಲ್ಲವನ್ನು ಹಂಚಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಅವರ ಪ್ರಕಾರ, ಕೆಲವರು ನಮ್ಮವರಂತೆಯೇ ಇದ್ದು, ಕೊನೆಗೆ ನಮ್ಮ ಬೆನ್ನಿಗೆಯೇ ಚೂರಿ ಹಾಕಿ ಹೋಗ್ತಾರೆ, ತಮ್ಮ ಸ್ವಾರ್ಥಕ್ಕಾಗಿ ಏನನ್ನೂ ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅಂತಹ ಜನರ ಬಗ್ಗೆ ಜಾಗರೂಕರಾಗಿರಬೇಕು. ಅದರಲ್ಲೂ ಪುರುಷರು ಹೀಗೆ ಎಲ್ಲರನ್ನೂ ಕುರುಡಾಗಿ ನಂಬಿ ಸ್ನೇಹ ಬೆಳೆಸಿಕೊಳ್ಳಬಾರದು ಎಂದು ಚಾಣಕ್ಯರು ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಿದ್ದರೆ ಎಂತಹ ಜನರು ನಂಬಿಕೆಗೆ ಅರ್ಹರಲ್ಲ ಎಂಬುದನ್ನು ನೋಡೋಣ ಬನ್ನಿ.
ನಿಮ್ಮ ಮುಂದೆ ಚೆನ್ನಾಗಿದ್ದು, ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಕೆಲವೊಂದು ಜನರಿದ್ದಾರೆ. ಅಂತಹ ಜನರ ಬಗ್ಗೆ ಜಾಗರೂಕರಾಗಿರಬೇಕು. ಅವರೊಂದಿಗೆ ನಿಮ್ಮ ಯಾವುದೇ ವೈಯಕ್ತಿಕ ವಿಚಾರಗಳನ್ನು ಹಂಚಿಕೊಳ್ಳಬಾರದು. ಏಕೆಂದರೆ ಅವರು ನಿಮ್ಮ ಪರ್ಸನಲ್ ವಿಚಾರಗಳನ್ನು ಬೇರೆಯವರ ಬಳಿ ಹಂಚಿಕೊಂಡು ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ. ಚಾಣಕ್ಯರ ಪ್ರಕಾರ, ಅಂತಹ ಜನರ ಬಗ್ಗೆ ಯಾವಾಗಲೂ ಎಚ್ಚರದಿಂದಿರಬೇಕು, ಅಂತಹವರು ಬೇರೆಯವರ ಮುಂದೆ ನಿಮ್ಮನ್ನು ಕೆಟ್ಟವರನ್ನಾಗಿ ಮಾಡುತ್ತಾರೆ.
ನಾವು ನಮ್ಮ ಸ್ನೇಹಿತರು ಅಥವಾ ನಮಗೆ ಹತ್ತಿರವಾದರ ಜೊತೆ ನಮ್ಮ ತೀರಾ ಪರ್ನಸಲ್ ವಿಚಾರಗಳನ್ನು ಸಹ ಹಂಚಿಕೊಳ್ಳುತ್ತೇವೆ. ಕೆಲವು ಜನರು, ನಿಮ್ಮ ಮೇಲಿನ ಕೋಪ ಅಥವಾ ಅಸಮಾಧಾನದಿಂದ, ನಿಮ್ಮ ವೈಯಕ್ತಿಕ ವಿವರಗಳನ್ನು ಇತರರಿಗೆ ಬಹಿರಂಗಪಡಿಸಬಹುದು. ಆದ್ದರಿಂದ ಯಾರೊಂದಿಗೂ ನಿಮ್ಮ ಪರ್ಸನಲ್ ವಿಚಾರಗಳನ್ನು ಹೇಳಬೇಡಿ. ಅದರಲ್ಲೂ ಮುಖ್ಯವಾಗಿ ಚಾಡಿ ಹೇಳುವ ಗುಣವನ್ನು ಹೊಂದಿರುವ, ಕೋಪದಲ್ಲಿ ಒಬ್ಬರ ಬಗ್ಗೆ ವೈಯಕ್ತಿಕ ಜೀವನದ ಬಗ್ಗೆ ತೇಜೋವಧೆ ಮಾಡುವವರನ್ನು ನಂಬಲೇ ಬಾರದು ಎಂದಿದ್ದಾರೆ ಚಾಣಕ್ಯ.
ಕೆಲವು ಜನರು ತಮ್ಮ ಸ್ವಂತ ಲಾಭಕ್ಕಾಗಿ ಮಾತ್ರ ಸ್ನೇಹ, ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ತಮ್ಮ ಕಾರ್ಯ ಸಾಧಿಸಿದ ಬಳಿಕ ಅವರ ನಡವಳಿಕೆ ಬದಲಾಗುತ್ತದೆ. ಚಾಣಕ್ಯ ನೀತಿಯ ಪ್ರಕಾರ, ಅಂತಹ ಸ್ವಾರ್ಥಿ ಜನರ ಬಗ್ಗೆ ಯಾವಾಗಲೂ ಎಚ್ಚರದಿಂದಿರಬೇಕು. ಏಕೆಂದರೆ ಅಂತಹ ಜನಗಳಿಂದ ನೋವು ಮಾತ್ರ ಲಭಿಸುತ್ತದೆ. ಅಂತಹ ಜನಗಳನ್ನು ಅತಿಯಾಗಿ ನಂಬುವುದು ಒಳ್ಳೆಯದಲ್ಲ ಜೊತೆಗೆ ಅವರ ಸ್ನೇಹವೂ ಒಳ್ಳೆಯದಲ್ಲ.
ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣ ತಪ್ಪಿಯೂ ಈ ವಿಷಯಗಳನ್ನು ನೋಡ್ಬೇಡಿ
ಒಬ್ಬ ವ್ಯಕ್ತಿಯ ಸುತ್ತಲಿನ ಜನರು ಆತನ ಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತಾರೆ. ಹೀಗಿರುವಾಗ ಒಬ್ಬ ವ್ಯಕ್ತಿಯು ತಪ್ಪುಗಳನ್ನು ಸಮರ್ಥಿಸುವ, ತಪ್ಪುಗಳನ್ನು ಮಾಡಲು ಪ್ರೋತ್ಸಾಹಿಸುವ ಜನರನ್ನು ಯಾವತ್ತಿಗೂ ನಂಬಬಾರದು. ಏಕೆಂದರೆ ಅಂತಹ ಜನರು ನಿಮ್ಮ ತಪ್ಪುಗಳನ್ನು ಪ್ರೋತ್ಸಾಹಿಸುವ ಮೂಲಕ ನಿಮ್ಮ ಜೀವನವನ್ನು ಹಾಳು ಮಾಡಲು ನೋಡುತ್ತಾರೆ, ಅಲ್ಲದೆ ಕೆಟ್ಟ ಗುಣಗಳನ್ನು ಹೊಂದಿರುವ ಜನರೊಂದಿಗಿದ್ದರೆ ಅವರ ಸಹವಾಸವು ನಿಮ್ಮ ಆಲೋಚನೆ ಮತ್ತು ಅಭ್ಯಾಸಗಳ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ, ಯಾರಿಗಾದರೂ ಹತ್ತಿರವಾಗುವ ಮೊದಲು, ಅವರ ಸಹವಾಸ ಮತ್ತು ಅಭ್ಯಾಸಗಳನ್ನು ಪರಿಗಣಿಸುವುದು ಮುಖ್ಯ.
ಪ್ರತಿಯೊಬ್ಬರ ಜೀವನದಲ್ಲೂ ಕೆಲವು ಸೀಕ್ರೆಟ್ ವಿಷಯಗಳು ಮತ್ತು ದೌರ್ಬಲ್ಯಗಳು ಇರುತ್ತವೆ, ಅದನ್ನು ನಾವು ನಮ್ಮ ನಂಬಿಕಸ್ತ ವ್ಯಕ್ತಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಚಾಣಕ್ಯ ನೀತಿಯ ಪ್ರಕಾರ, ನಿಮ್ಮ ದೌರ್ಬಲ್ಯಗಳ ಬಗ್ಗೆ ತಿಳಿದುಕೊಂಡ ನಂತರ, ನಿಮ್ಮನ್ನು ನಿಗ್ರಹಿಸಲು, ಬೆದರಿಸಲು ಅಥವಾ ನಿಮ್ಮನ್ನು ಕಂಟ್ರೋಲ್ ಮಾಡಲು ನೋಡುವ ವ್ಯಕ್ತಿಯಿಂದ ನೀವು ಆದಷ್ಟು ದೂರವಿರಬೇಕು. ಅಂತಹ ಜನರ ಬಗ್ಗೆ ಯಾವಾಗಲೂ ಎಚ್ಚರಿಕೆಯಿಂದಿರಬೇಕು. ಅಂತಹ ವ್ಯಕ್ತಿಗಳು ನಿಮ್ಮ ಜೀವನವನ್ನು ಯಾವ ಕ್ಷಣದಲ್ಲೂ ಬೇಕಾದರೂ ಹಾಳು ಮಾಡುವ ಸಾಧ್ಯತೆ ಇರುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ