
“ಅಕ್ಕ ಅಕ್ಷರ ಕಲಿ, ತಂಗಿ ತಂಬೂರಿ ಬಾರಿಸು…” ಎನ್ನುತ್ತಾ ಶಾಲಾ ಅಂಗಳದಲ್ಲಿ ಕೈಯಲ್ಲಿ ಕಪ್ಪು ಸ್ಲೇಟು (Slate), ಜೇಬಿನಲ್ಲಿ ಬಿಳಿ ಬಳಪದ (Slate Pencil) ತುಂಡುಗಳನ್ನು ಹಿಡಿದು ಶಾಲೆಗೆ ಓಡುತ್ತಿದ್ದ ಆ ದಿನಗಳು ಇಂದಿನ ತಲೆಮಾರಿಗೆ ಕೇವಲ ಕಥೆಯಾಗಿ ಉಳಿಯುತ್ತಿವೆ. ತಂತ್ರಜ್ಞಾನ ಹಾಗೂ ಡಿಜಿಟಲ್ ಶಿಕ್ಷಣದ ಬಿರುಗಾಳಿಗೆ ಸಿಲುಕಿ, ಶತಮಾನಗಳಿಂದ ಮಗುವಿನ ಅಕ್ಷರಾಭ್ಯಾಸದ ಮೊದಲ ಹೆಜ್ಜೆಯಾಗಿದ್ದ ‘ಸ್ಲೇಟ್ ಮತ್ತು ಬಳಪ’ ವ್ಯವಸ್ಥೆ ಇದೀಗ ಶಾಲಾ ಕೊಠಡಿಗಳಿಂದ ಸಂಪೂರ್ಣ ಮರೆಯಾಗುವ ಹಂತ ತಲುಪಿದೆ. ಮಕ್ಕಳ ಬರವಣಿಗೆಯ ಕೌಶಲ್ಯವನ್ನು ರೂಪಿಸುವಲ್ಲಿ, ಕೈಬರಹ ಸುಂದರಗೊಳಿಸುವಲ್ಲಿ ಮತ್ತು ಕಲಿಕೆಯ ಪ್ರಾಥಮಿಕ ಹಂತದಲ್ಲಿ ‘ಸ್ಲೇಟ್ ಹಾಗೂ ಬಳಪ’ ವಹಿಸುತ್ತಿದ್ದ ಪಾತ್ರ ಅನನ್ಯವಾದದ್ದು.
ಒಂದು ಕಾಲದಲ್ಲಿ ಶಾಲೆಗೆ ಸೇರುವ ಮಗುವಿಗೆ ನೀಡಲಾಗುತ್ತಿದ್ದ ಮೊದಲ ಶಿಕ್ಷಣ ಸಾಮಗ್ರಿಯೆಂದರೆ ಅದು ಸ್ಲೇಟ್ ಹಾಗೂ ಬಳಪ. ಗುರುಗಳು ಸ್ಲೇಟಿನ ಮೇಲೆ ದೊಡ್ಡದಾಗಿ ‘ಅ’ ಅಥವಾ ‘A’ ಎಂದು ಬರೆದುಕೊಟ್ಟರೆ, ಮಗು ಅದನ್ನು ನೂರಾರು ಬಾರಿ ಬಳಪದಿಂದ ತಿದ್ದಿ ತಿದ್ದಿ ಬರೆಯುತ್ತಿತ್ತು. ಬಳಪದಿಂದ ಸ್ಲೇಟಿನ ಮೇಲೆ ಬರೆಯುವಾಗ ಬರುವ ಆ ವಿಶಿಷ್ಟ ‘ಖಟ್-ಖಟ್’ ಶಬ್ದ, ಬಳಪಕ್ಕೆ ಲಾಲಾರಸ ಅಥವಾ ನೀರು ಹಚ್ಚಿ ಒರೆಸುತ್ತಿದ್ದ ಆ ಮುಗ್ಧತೆ, ಬಳಪದ ಆ ವಿಶಿಷ್ಟ ವಾಸನೆ ಇಂದಿಗೂ ಪ್ರತಿಯೊಬ್ಬರ ಬಾಲ್ಯದ ನೆನಪಿನ ಬಂಡವಾಳ.
ಸ್ಲೇಟಿನಲ್ಲಿದ್ದ ಅತಿ ದೊಡ್ಡ ಗುಣವೆಂದರೆ, ತಪ್ಪಾದರೆ ತಕ್ಷಣ ಒರೆಸಿ ಮತ್ತೆ ಬರೆಯುವ ಅವಕಾಶ. ಇದು ಮಗುವಿನಲ್ಲಿ ಸೋಲಿನ ಭಯವನ್ನು ಹೋಗಲಾಡಿಸಿ, ನಿರಂತರ ಪ್ರಯತ್ನದ ಗುಣವನ್ನು ಕಲಿಸುತ್ತಿತ್ತು. ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಸ್ಲೇಟ್‌ನ ಜಾಗವನ್ನು ಡಿಜಿಟಲ್ ಪ್ಯಾಡ್ , ಐಪ್ಯಾಡ್, ಸ್ಮಾರ್ಟ್ ಬೋರ್ಡ್ ಹಾಗೂ ನರ್ಸರಿ ವರ್ಕ್ ಬುಕ್‌ಗಳು ಆಕ್ರಮಿಸಿಕೊಂಡಿವೆ.
ನರ್ಸರಿ ಹಾಗೂ ಎಲ್.ಕೆ.ಜಿ ಹಂತದಲ್ಲೇ ಮಕ್ಕಳಿಗೆ ಮುದ್ರಿತ ಬಣ್ಣದ ವರ್ಕ್ ಬುಕ್ ಹಾಗೂ ಪೆನ್ಸಿಲ್ ನೀಡಲಾಗುತ್ತಿದೆ. ಇಂದಿನ ಮಕ್ಕಳು ಸ್ಲೇಟ್ ಬಳಪ ಹಿಡಿಯುವ ವಯಸ್ಸಿನಲ್ಲೇ ಮೊಬೈಲ್ ಹಾಗೂ ಟ್ಯಾಬ್ಲೆಟ್‌ಗಳ ಸ್ಕ್ರೀನ್ ಟಚ್ ಮಾಡಲು ಕಲಿಯುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಗಳು ಹಾಗೂ ಪೋಷಕರು ಕೂಡ ಹಳೆಯ ಪದ್ಧತಿಗಿಂತ ಆಕರ್ಷಕ ಪೆನ್ಸಿಲ್, ಕಲರ್ ಪೆನ್ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಪ್ರವಾಸೋದ್ಯಮ ಇತಿಹಾಸದಲ್ಲೇ ಮೊದಲು: ರಾಜ್ಯಮಟ್ಟದ ‘ಕರ್ನಾಟಕ ಟೂರಿಸಂ ಅವಾರ್ಡ್ಸ್ 2026’ ಘೋಷಣೆ
ಒಂದು ಕಾಲದಲ್ಲಿ ಗ್ರಾಮೀಣ ಹಾಗೂ ನಗರ ಪ್ರದೇಶದ ಸಣ್ಣ ಸಣ್ಣ ಅಂಗಡಿಗಳಲ್ಲಿಯೂ ಕೆಂಪು ಎಳೆಯಿರುವ ಬೋರ್ಡರ್‌ನ ಸ್ಲೇಟ್‌ಗಳು ಹಾಗೂ ಬೆಂಕಿಕಡ್ಡಿ ಪೆಟ್ಟಿಗೆ ಮಾದರಿಯ ಬಳಪದ ಬಾಕ್ಸ್‌ಗಳು ರಾರಾಜಿಸುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ.ಸ್ಲೇಟ್ ತಯಾರಿಕಾ ಸಣ್ಣ ಪ್ರಮಾಣದ ಕೈಗಾರಿಕೆಗಳು ಹಾಗೂ ಬಳಪ ತಯಾರಿಕಾ ಯುನಿಟ್‌ಗಳು ಬೇಡಿಕೆಯಿಲ್ಲದೆ ಮುಚ್ಚಿಹೋಗಿವೆ. ಇಂದು ಗ್ರಂಥಾಲಯ ಅಥವಾ ಸ್ಟೇಷನರಿ ಅಂಗಡಿಗಳಿಗೆ ಹೋದರೆ ಸ್ಲೇಟ್-ಬಳಪ ಸಿಗುವುದು ಅಪರೂಪದಲ್ಲೇ ಅಪರೂಪವಾಗಿದೆ.
“ಸ್ಲೇಟಿನ ಮೇಲೆ ಬಳಪದಿಂದ ತಿದ್ದಿ ಬರೆಯುವಾಗ ಬೆರಳುಗಳ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಸಿಗುತ್ತಿತ್ತು. ಇದರಿಂದ ಕೈಬರಹ ಅತ್ಯಂತ ಸುಂದರವಾಗುತ್ತಿತ್ತು. ಆದರೆ ಇಂದಿನ ಪೆನ್ಸಿಲ್-ಕಾಗದದ ನೇರ ಬಳಕೆಯಿಂದ ಮಕ್ಕಳ ಕೈಬರಹ ಹಾಳಾಗುತ್ತಿದೆ ಮತ್ತು ಮರುಬಳಕೆಯ ಅಭ್ಯಾಸ ತಪ್ಪಿ ಕಾಗದದ ಪೋಲು ಹೆಚ್ಚಾಗುತ್ತಿದೆ.” ಎಂದು ಪೋಷಕರು ಮತ್ತು ಹಿರಿಯ ಶಿಕ್ಷಣ ತಜ್ಞರ ಹೇಳುತ್ತಿದ್ದಾರೆ. ಕಾಲ ಬದಲಾದಂತೆ ಶಿಕ್ಷಣ ಶೈಲಿ ಬದಲಾಗುವುದು ಸಹಜವೇ ಆದರೂ, ಪ್ರತಿಯೊಬ್ಬರ ಬಾಲ್ಯದ ಸುಂದರ ನೆನಪಾಗಿದ್ದ ಸ್ಲೇಟ್ ಮತ್ತು ಬಳಪ ಇಂದು ಮ್ಯೂಸಿಯಂ ಸೇರುವ ಹಂತ ತಲುಪಿರುವುದು ಹಿರಿಯ ತಲೆಮಾರಿಗೆ ಒಂದು ಸಣ್ಣ ನಿಟ್ಟುಸಿರು ಮತ್ತು ನೆನಪಿನ ಬಾರವನ್ನು ತಂದಿಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ