
ಹೊಸ ಬೆಳಕು, ಭರವಸೆ, ಸಂತೋಷ ಮತ್ತು ಸಮೃದ್ಧಿಯ ಸಂಕೇತವಾಗಿರುವ ಬೆಳಕಿನ ಹಬ್ಬ ದೀಪಾವಳಿಗೆ (Deepavali) ದಿನಗಣನೆ ಶುರುವಾಗಿದ್ದು, ಹಬ್ಬಕ್ಕೆ ಜೋರು ತಯಾರಿ ನಡೆಯುತ್ತಿದೆ. ಹೆಚ್ಚಿನವರು ಮನೆ ಕ್ಲೀನಿಂಗ್ ಮಾಡುವುದರ ಜೊತೆಗೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಹಬ್ಬದ ಸಮಯದಲ್ಲಿ ಹೊಸ ಬಟ್ಟೆಗಳು, ಗೃಹಾಲಂಕಾರ ವಸ್ತುಗಳು, ಸಿಹಿತಿಂಡಿಗಳು, ಉಡುಗೊರೆಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್ ವಸ್ತುಗಳಂತ ಬಹುತೇಕ ಎಲ್ಲಾ ಸಣ್ಣ, ದೊಡ್ಡ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಈ ಸಮಯದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ಮಾರುಕಟ್ಟೆಗಳು ಕೊಡುಗೆಗಳು ಮತ್ತು ರಿಯಾಯಿತಿಗಳು ಸಹ ಹೇರಳವಾಗಿರುತ್ತವೆ. ಇಂತಹ ಸಂದರ್ಭದಲ್ಲಿ ಬಜೆಟ್‌ಗಿಂತ ಹೆಚ್ಚು ಖರ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಕೆಲವೊಂದು ಸ್ಮಾರ್ಟ್ ಸಲಹೆಗಳನ್ನು ಪಾಲಿಸುವ ಮೂಲಕ ಶಾಪಿಂಗ್ ಸಮಯದಲ್ಲಿ ವ್ಯರ್ಥ ಖರ್ಚುಗಳಾಗದಂತೆ ತಪ್ಪಿಸಿ.
ಹಬ್ಬಗಳ ಸಮಯದಲ್ಲಿ, ಸಣ್ಣ ಖರೀದಿಗಳು ದೊಡ್ಡ ಖರ್ಚನ್ನು ಸೇರಿಸಬಹುದು. ಆದ್ದರಿಂದ, ಬಜೆಟ್ ಇಲ್ಲದೆ ಶಾಪಿಂಗ್‌ಗೆ ಹೋಗಬೇಡಿ. ನಿಮ್ಮ ದೀಪಾವಳಿ ಶಾಪಿಂಗ್ ಪ್ರಾರಂಭಿಸುವ ಮೊದಲು, ನಿಮ್ಮ ಒಟ್ಟಾರೆ ಬಜೆಟ್ ಅನ್ನು ನಿಗದಿಪಡಿಸಿ. ಈ ವರ್ಷ ನೀವು ಬಟ್ಟೆ, ಮನೆ ಅಲಂಕಾರ, ಸಿಹಿತಿಂಡಿಗಳು, ಉಡುಗೊರೆಗಳು ಮತ್ತು ಇತರ ವಸ್ತುಗಳಿಗೆ ಎಷ್ಟು ಖರ್ಚು ಮಾಡಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಿ. ಖರ್ಚು ನಿಮ್ಮ ಬಜೆಟ್ ಅನ್ನು ಮೀರಬಾರದು ಎಂಬ ನಿಯಮವನ್ನು ಮುಂಚಿತವಾಗಿಯೇ ಮಾಡಿ. ಈ ರೀತಿ ಮಾಡುವುದರಿಂದ ಅತಿಯಾದ ಖರ್ಚನ್ನು ತಪ್ಪಿಸಬಹುದು.
ಕೆಲವೊಮ್ಮೆ ನಾವು ಮಾರುಕಟ್ಟೆಯಲ್ಲಿ ಕಂಡ ಎಲ್ಲಾ ವಸ್ತುಗಳನ್ನು ಖರೀದಿಸಿಬಿಡುತ್ತೇವೆ. ಹೌದು ಅಗತ್ಯವಿಲ್ಲದಿದ್ದರೂ ಚೆಂದ ಕಾಣಿಸುವ ಅನಗತ್ಯ ವಸ್ತುಗಳನ್ನು ಖರೀದಿಸುತ್ತೇವೆ. ಇದರಿಂದ ಖರ್ಚು ಹೆಚ್ಚಾಗುತ್ತದೆ. ಅದಕ್ಕಾಗಿ ಮೊದಲೇ ಏನೆಲ್ಲಾ ವಸ್ತುಗಳು ಬೇಕು ಎಂದು ಶಾಪಿಂಗ್ ಲಿಸ್ಟ್ ರೆಡಿ ಮಾಡಿಕೊಳ್ಳಿ, ಮತ್ತು ಆ ಲಿಸ್ಟ್‌ನಲ್ಲಿರುವ ಅಗತ್ಯ ವಸ್ತುಗಳನ್ನು ಮಾತ್ರವೇ ಖರೀದಿಸಿ, ಈ ಸಣ್ಣ ಟ್ರಿಕ್ಸ್ ದುಂದುವೆಚ್ಚವನ್ನು ತಪ್ಪಿಸಲು ಸಹಾಯ ಮಾಡುತ್ತದೆ.
“ಒಂದನ್ನು ಖರೀದಿಸಿ, ಒಂದನ್ನು ಫ್ರೀಯಾಗಿ ಪಡೆಯಿರಿ” ಎಂಬಿತ್ಯಾದಿ ಆಫರ್, ಕೊಡುಗೆಗಳಿಗೆ ಆಕರ್ಷಿತರಾಗಿ ಅನಗತ್ಯ ವಸ್ತುಗಳನ್ನು ಖರೀದಿ ಮಾಡಬೇಡಿ. ಕಡಿಮೆ ಬೆಲೆಯನ್ನು ನೋಡಿದಾಗ ನಾವು ಅನಗತ್ಯ ವಸ್ತುಗಳನ್ನು ಕೂಡ ಖರೀದಿ ಮಾಡುತ್ತೇವೆ. ಇದರಿಂದ ದುಡ್ಡು ವ್ಯರ್ಥವಾಗುತ್ತದೆ. ಹಾಗಾಗಿ ಆಫರ್‌ಗಳಿಗೆ ಆಕರ್ಷಿತರಾಗದೆ ಯಾವುದು ಅಗತ್ಯವಿದೆಯೋ ಆ ಉಪಯುಕ್ತ ವಸ್ತುಗಳನ್ನು ಮಾತ್ರವೇ ಖರೀದಿ ಮಾಡಿ.
ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಸುಲಭ, ಆದರೆ ಆ ಅನುಕೂಲವು ಹೆಚ್ಚಾಗಿ ಅತಿಯಾದ ಖರ್ಚಿಗೆ ಕಾರಣವಾಗಬಹುದು. ನೀವು ಅಪ್ಲಿಕೇಶನ್ ತೆರೆದ ತಕ್ಷಣ ಹೊಸ ಉತ್ಪನ್ನಗಳು ಮತ್ತು ಆಫರ್‌ಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಅನಗತ್ಯ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಮುಂಚಿತವಾಗಿ ಶಾಪಿಂಗ್ ಪಟ್ಟಿಯನ್ನು ಮಾಡಿ ಮತ್ತು ಕಾರ್ಟ್‌ಗೆ ಪದೇ ಪದೇ ಬೇರೆ ವಸ್ತುಗಳನ್ನು ಸೇರಿಸುವುದನ್ನು ತಪ್ಪಿಸಿ. ಈ ಮೂಲಕ ವ್ಯರ್ಥ ಖರ್ಚುಗಳನ್ನು ತಪ್ಪಿಸಬಹುದು.
ಇದನ್ನೂ ಓದಿ: ದೀಪಾವಳಿಯಂದು ತಪ್ಪಿಯೂ ಈ ವಸ್ತುವನ್ನು ಮನೆಗೆ ತರಬೇಡಿ
ಹಬ್ಬಗಳ ಸಮಯದಲ್ಲಿ ಮಾರುಕಟ್ಟೆಗಳು ಜನದಟ್ಟಣೆಯಿಂದ ಕೂಡಿರುತ್ತವೆ. ಹೀಗಿರುವಾಗ ಒಮ್ಮೆ ಶಾಪಿಂಗ್ ಮುಗಿಸಿ ಮನೆಗೆ ಬಂದ್ರೆ ಸಾಕಪ್ಪಾ ಎನ್ನುತ್ತಾ ಅನೇಕರು ಬೆಲೆಗಳನ್ನು ಪರಿಶೀಲಿಸದೆ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಎಲೆಕ್ಟ್ರಾನಿಕ್ ಗ್ಯಾಜೆಟ್, ಚಿನ್ನ ಇತ್ಯಾದಿ ದುಬಾರಿ ವಸ್ತುಗಳನ್ನು ಖರೀದಿಸುವಾಗ ಈ ರೀತಿ ಆತುರಪಟ್ಟರೆ ಸಾಕಷ್ಟು ನಷ್ಟವನ್ನು ಅನುಭವಿಸಬೇಕಅಗುತ್ತದೆ. ಹಾಗಾಗಿ ದುಬಾರಿ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಿದ್ದರೆ, ಖರೀದಿಸುವ ಮೊದಲು ಬೇರೆಡೆ ಬೆಲೆಗಳನ್ನು ಪರಿಶೀಲಿಸಿಲಿ. ಎಲ್ಲಿ ಕಡಿಮೆ ಬೆಲೆ ಇದೆಯೋ ಅಲ್ಲಿಂದಲೇ ಆ ವಸ್ತುಗಳನ್ನು ಖರೀದಿ ಮಾಡಿ. ಜೊತೆಗೆ ನೀವು ಖರೀದಿಸುವ ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸುವುದು ಕೂಡ ತುಂಬಾನೇ ಮುಖ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ