ಪತ್ನಿಯ ಕಿರುಕುಳದಿಂದ ಬೇಸತ್ತು ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುಭಾಷ್ ಮೇಲೆ ಪತ್ನಿಯೂ 9 ಪ್ರಕರಣಗಳನ್ನು ದಾಖಲಿಸಿದ್ದಳು. ಇದರಿಂದ ಬೇಸತ್ತು ಹೋಗಿದ್ದ ಅತುಲ್ ಪ್ರಾಣ ಕಳೆದುಕೊಂಡಿದ್ದು, ಈ ಘಟನೆಯೂ ಸದ್ಯಕ್ಕೆ ಭಾರಿ ಸಂಚಲನ ಮೂಡಿಸಿದೆ. ಇದರಲ್ಲಿ ವಿಚ್ಛೇದನದ ಪ್ರಕರಣವೂ ಕೂಡ ಸೇರಿದ್ದು, ದಂಪತಿಗಳು ವಿಚ್ಛೇದನದಂತಹ ನಿರ್ಧಾರವನ್ನು ಕೈಗೊಳ್ಳಲು ಕಾರಣಗಳೇನು? ಯಾವ ರಾಜ್ಯದಿಂದ ಗರಿಷ್ಠ ಸಂಖ್ಯೆಯ ವಿಚ್ಛೇದನ ಪ್ರಕರಣಗಳು ವರದಿಯಾಗಿವೆ ಎನ್ನುವ ಬಗ್ಗೆ ವಿಶ್ವ ಸಂಸ್ಥೆಯೂ ವರದಿಯಲ್ಲಿ ಬಹಿರಂಗಪಡಿಸಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಅತಿ ಹೆಚ್ಚು ವಿಚ್ಛೇದನ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ವಿಚ್ಛೇದನದ ಪ್ರಮಾಣವು ಶೇ.18.7ರಷ್ಟಿದ್ದು, ದೇಶದಲ್ಲೇ ನಂಬರ್ ಒನ್ ಸ್ಥಾನವನ್ನು ಗಳಿಸಿದೆ. ಕರ್ನಾಟಕವು ಎರಡನೇ ಸ್ಥಾನದಲ್ಲಿದ್ದು, ಇಲ್ಲಿ ವಿಚ್ಛೇದನ ಪ್ರಮಾಣವು ಶೇಕಡಾ 11.7 ರಷ್ಟಿದೆ. ಮೂರನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳವಿದ್ದು ಶೇಕಡಾ 8.2 ರಷ್ಟು ಜನರು ವಿಚ್ಛೇದನ ಪಡೆದಿದ್ದಾರೆ. ಇನ್ನು ಉಳಿದಂತೆ ಪ್ರಮುಖ ನಗರಗಳಾದ ದೆಹಲಿಯಲ್ಲಿ ವಿಚ್ಛೇದನ ಪ್ರಮಾಣ ಶೇ.7.7, ತಮಿಳುನಾಡಿನಲ್ಲಿ ಶೇ.7.1, ತೆಲಂಗಾಣದಲ್ಲಿ ಶೇ.6.7 ಹಾಗೂ ಕೇರಳದಲ್ಲಿ ವಿಚ್ಛೇದನ ಪ್ರಮಾಣ ಶೇ.6.3ರಷ್ಟಿದೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ವಿಚ್ಛೇದನ ಪ್ರಮಾಣವು ಶೇಕಡಾ 30 ಕ್ಕಿಂತ ಹೆಚ್ಚು ಇವೆ ಎಂದು ವಿಶ್ವಸಂಸ್ಥೆ ವರದಿಯೂ ತಿಳಿಸಿದೆ. ಅದಲ್ಲದೇ ಈ ಹಿಂದೆ ಭಾರತದಲ್ಲಿ ವಿಚ್ಛೇದನ ಪ್ರಮಾಣವು 2005 ರಲ್ಲಿ ಶೇಕಡಾ 0.6 ರಷ್ಟಿತ್ತು, ಇದು 2019 ರಲ್ಲಿ ಶೇಕಡಾ 1.1 ಕ್ಕೆ ಏರಿತು. ಇತ್ತೀಚಿನ ವರ್ಷಗಳಲ್ಲಿ, ಈ ನಗರಗಳಲ್ಲಿ ವಿಚ್ಛೇದನ ಅರ್ಜಿಗಳಲ್ಲಿ ಮೂರು ಪಟ್ಟು ಹೆಚ್ಚಳವಾಗಿದೆ.
ವಿಶ್ವಸಂಸ್ಥೆಯ ಈ ವರದಿಯಲ್ಲಿ ವಿಚ್ಛೇದನಕ್ಕೆ ಕಾರಣಗಳನ್ನು ತಿಳಿಸಲಾಗಿದ್ದು, ವಿಶ್ವದಾದ್ಯಂತ ಹಾಗೂ ಭಾರತದಲ್ಲಿ ವಿಚ್ಛೇದನಕ್ಕೆ ದೊಡ್ಡ ಕಾರಣವೆಂದರೆ ಕೌಟುಂಬಿಕ ಹಿಂಸೆ ಹಾಗೂ ವಂಚನೆ ಎನ್ನಲಾಗಿದೆ. 50 ನೇ ವಯಸ್ಸಿನಲ್ಲಿ ವಿಚ್ಛೇದನ ಪಡೆಯುವವರು ಪರಸ್ಪರ ಸ್ವಾತಂತ್ರ್ಯವನ್ನು ಪಡೆಯಲು, ಪರಿಹರಿಸಲಾಗದ ಸಮಸ್ಯೆಗಳಿಂದಾಗಿ ವಿಚ್ಛೇದನದಂತಹ ಬಹುದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಾರೆ. ವೈವಾಹಿಕ ಜೀವನದಲ್ಲಿ ಎದುರಿಸುತ್ತಿರುವ ಅವಮಾನ, ವಿವಾಹೇತರ ಸಂಬಂಧ, ಹಣಕಾಸಿನ ಸಮಸ್ಯೆ, ಭಾವನಾತ್ಮಕ ಬೆಂಬಲದ ಕೊರತೆ, ಮನಸ್ಸಿನಲ್ಲಿ ಕೀಳರಿಮೆ ಭಾವ ಪ್ರಮುಖ ಕಾರಣಗಳು ಎನ್ನಲಾಗಿದೆ. ಬಹುತೇಕ ಪ್ರಕರಣಗಳಲ್ಲಿ ಅಂತಿಮವಾಗಿ ವಿಚ್ಛೇದನಕ್ಕೆ ಮುಂದಾಗುವುದು ಮಹಿಳೆಯರೇ ಎನ್ನುವುದು ಗಮನಿಸಬೇಕಾದ ಅಂಶವಾಗಿದೆ.
ಇತ್ತೀಚೆಗಿನ ಕೆಲವು ವರ್ಷಗಳಿಂದ ಸಂಗಾತಿಯೊಂದಿಗೆ ಬದುಕಲು ಸಾಧ್ಯವಿಲ್ಲ ಎಂದಾಗ ಮಹಿಳೆಯರು ವಿಚ್ಛೇದನದಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಮಹಿಳೆಯರು ಆರ್ಥಿಕ ಭದ್ರತೆ ಮತ್ತು ಮಕ್ಕಳನ್ನು ಬೆಳೆಸುವುದು ಹೇಗೆ ಎನ್ನುವ ಆತಂಕವಿತ್ತು. ಆದರೆ ಈಗಿನ ಮಹಿಳೆಯರು ಉದ್ಯೋಗಸ್ಥರಾಗಿರುವ ಕಾರಣ ಎಲ್ಲವನ್ನು ಸಮರ್ಥವಾಗಿ ನಿಭಾಯಿಸುವುದು ತಿಳಿದಿದೆ. ಈ ಕಾರಣಕ್ಕೆ ಸಾಂಸಾರಿಕ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚು ಎನ್ನಲಾಗಿದೆ.
ಇದನ್ನೂ ಓದಿ: ರಾಷ್ಟ್ರ ಧ್ವಜದ ಬಣ್ಣದ ಬಗ್ಗೆ ಮಾತ್ರ ವಿವರ ಅಲ್ಲ. ಮನಃಶಾಸ್ತ್ರಜ್ಞರು ವಿವಿಧ ಬಣ್ಣದ ಬಗ್ಗೆ ಏನು ಹೇಳುತ್ತಾರೆ ಗೊತ್ತಾ?
2021 ಮತ್ತು 2022 ರ ನಡುವೆ ನಡೆಸಿದ ಅಧ್ಯಯನದಲ್ಲಿ, 25 ರಿಂದ 34 ವರ್ಷ ವಯಸ್ಸಿನ ಜನರು ಗರಿಷ್ಠ ಸಂಖ್ಯೆಯಲ್ಲಿ ವಿಚ್ಛೇದನ ಪಡೆಯುತ್ತಿದ್ದಾರೆ. 18 ರಿಂದ 24 ವರ್ಷ ವಯಸ್ಸಿನ ಜನರು ವಿಚ್ಛೇದನ ಪಡೆಯುವುದರಲ್ಲಿ ಮುಂದೆ ಇದ್ದಾರೆ.ಅದಲ್ಲದೇ 35 ರಿಂದ 44 ಹಾಗೂ 45 ರಿಂದ 54 ವರ್ಷ ವಯಸ್ಸಿನವರು ಕೂಡ ವೈವಾಹಿಕ ಜೀವನದಿಂದ ಹೊರ ಬರುವ ನಿರ್ಧಾರಕ್ಕೆ ಕೈ ಹಾಕುತ್ತಿದ್ದಾರೆ. ಅದಲ್ಲದೇ, 55 ರಿಂದ 64 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರನ್ನು ಕೂಡ ಈ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ