ನಿಮ್ಮನೆಯಲ್ಲೂ ನೊಣಗಳ ಕಾಟ ಹೆಚ್ಚಿದ್ಯಾ? ಇವುಗಳನ್ನು ತೊಡೆದು ಹಾಕಲು ಇಲ್ಲಿದೆ ಸುಲಭ ಪರಿಹಾರ

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ವಿಪರೀತ ಇರುವಂತೆ, ಮನೆಯಿಡಿ ನೊಣಗಳು ಸಹ ಹಾರಾಡುತ್ತಿರುತ್ತವೆ. ತೇವಾಂಶವುಳ್ಳ ಪ್ರದೇಶಗಳಲ್ಲಿ ನೊಣಗಳು ಬೆಳೆಯುವ ಕಾರಣ ಮಳೆಗಾಲದಲ್ಲಿ ಇವುಗಳ ಹಾವಳಿ ತುಸು ಹೆಚ್ಚೇ ಇರುತ್ತೆ. ನಿಮ್ಮನೆಯಲ್ಲೂ ವಿಪರೀತ ನೊಣಗಳಿದ್ಯಾ? ಹಾಗಿದ್ರೆ ಈ ಕೆಲವೊಂದು ಪರಿಣಾಮಕಾರಿ ಮನೆಮದ್ದುಗಳ ಸಹಾಯದಿಂದ ಇವುಗಳ ಕಾಟದಿಂದ ಮುಕ್ತಿಯನ್ನು ಪಡೆಯಿರಿ.

ನಿಮ್ಮನೆಯಲ್ಲೂ ನೊಣಗಳ ಕಾಟ ಹೆಚ್ಚಿದ್ಯಾ? ಇವುಗಳನ್ನು ತೊಡೆದು ಹಾಕಲು ಇಲ್ಲಿದೆ ಸುಲಭ ಪರಿಹಾರ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Jun 14, 2026 | 5:19 PM

ಮಾನ್ಸೂಸ್‌ ಸೀಸನ್‌ನಲ್ಲಿ ಮಳೆಯೊಂದಿಗೆ ಹಾವು, ಸೊಳ್ಳೆಗಳ ಕಾಟವೂ ಹೆಚ್ಚಿರುತ್ತದೆ. ನೊಣಗಳು (houseflies) ಇದಕ್ಕೆ ಹೊರತಿಲ್ಲ. ಹೌದು ಮಳೆಗಾಲ ಆರಂಭವಾಗುತ್ತಿದ್ದಂತೆ ಮನೆಗಳಲ್ಲಿ ನೊಣಗಳ ಹಾವಳಿ ಕೂಡ ಹೆಚ್ಚಾಗುತ್ತದೆ. ತೇವಾಂಶವುಳ್ಳ ಪ್ರದೇಶಗಳಲ್ಲಿ ನೊಣಗಳು ಹೆಚ್ಚಾಗಿ ಬೆಳೆಯುತ್ತವೆ. ಮಳೆಗಾಲದಲ್ಲಿ ಅವುಗಳ ಸಂಖ್ಯೆ ಹೆಚ್ಚಾಗುತ್ತದೆ. ಇವು ಆಹಾರ ಮತ್ತು ಪಾನೀಯಗಳನ್ನು ಕಲುಷಿತಗೊಳಿಸಿ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದರೆ  ಅನೇಕರಿಗೆ ಮನೆಯಲ್ಲಿ ಹಾವಳಿಯಿಡುವ ಈ ನೊಣಗಳನ್ನು ತೊಡೆದುಹಾಕುವುದು ತುಂಬಾನೇ ಕಷ್ಟ. ಹೀಗಿರುವಾಗ ಕೆಲವೊಂದು ಮನೆಮದ್ದುಗಳ ಸಹಾಯದಿಂದ ನೊಣಗಳನ್ನು ಸಂಪೂರ್ಣವಾಗಿ ತೊಡೆದುಹಾಕಬಹುದು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನೊಣಗಳ ಕಾಟದಿಂದ ಮುಕ್ತಿ ಪಡೆಯಲು ಸಹಕಾರಿ ಈ ಮನೆಮದ್ದುಗಳು:

ಉಪ್ಪು ನೀರು:
ಒಂದು ಲೋಟಕ್ಕೆ ಎರಡು ಟೀ ಚಮಚ ಉಪ್ಪು ತುಂಬಿಸಿ ನೀರು ಸೇರಿಸಿ. ಈಗ, ಈ ನೀರನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮನೆಯ ವಿವಿಧ ಪ್ರದೇಶಗಳಲ್ಲಿ ಸಿಂಪಡಿಸಿ. ಈ ನೀರನ್ನು ಸಿಂಪಡಿಸಿದ ಪ್ರದೇಶಗಳಲ್ಲಿ ನೊಣಗಳು ಸುಳಿದಾಡುವುದಿಲ್ಲ.

ನಿಂಬೆ ಮತ್ತು ಲವಂಗ: ನಿಂಬೆಹಣ್ಣನ್ನು ಅರ್ಧದಷ್ಟು ಕತ್ತರಿಸಿ ಅದರ ತಿರುಳಿನಲ್ಲಿ ಲವಂಗವನ್ನು ಅಂಟಿಸಿ. ಈ ನಿಂಬೆ ಹೋಳುಗಳನ್ನು ಒಂದು ತಟ್ಟೆಯಲ್ಲಿ ಇರಿಸಿ ಮತ್ತು ನೊಣಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ ಇರಿಸಿ. ನಿಂಬೆ ಮತ್ತು ಲವಂಗದ ವಾಸನೆಯು ನೊಣಗಳನ್ನು ನಿಮ್ಮ ಮನೆಯಿಂದ ದೂರವಿಡುತ್ತದೆ.

ಕರ್ಪೂರ ಪುಡಿ: ಬಹುತೇಕ ಎಲ್ಲರ ಮನೆಯಲ್ಲೂ ಕರ್ಪೂರ ಇದ್ದೇ ಇರುತ್ತವೆ. 4 ರಿಂದ 8 ಕರ್ಪೂರ ತೆಗೆದುಕೊಂಡು ನುಣ್ಣಗೆ ಪುಡಿಮಾಡಿ. ನಂತರ ಈ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ನೊಣಗಳು ಹೆಚ್ಚಾಗಿ ಬರುವ ಕಡೆ ಸಿಂಪಡಿಸಿ. ನೀವು ಹೀಗೆ ಮಾಡಿದರೆ, ಒಂದೇ ಒಂದು ನೊಣ ಮನೆಯೊಳಗೆ ಕಾಣಿಸುವುದಿಲ್ಲ.

ತುಳಸಿ ಎಲೆ ಪೇಸ್ಟ್: ಕೆಲವು ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ನುಣ್ಣಗೆ ಪೇಸ್ಟ್ ಮಾಡಿ. ಈ ಪೇಸ್ಟ್ ಅನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ನಿಮ್ಮ ಮನೆಯಲ್ಲಿ ನೊಣಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ದಿನಕ್ಕೆ ಎರಡು ಬಾರಿ ಸಿಂಪಡಿಸಿ. ನೀವು ಹೀಗೆ ಮಾಡಿದರೆ, ಮನೆಯೊಳಗೆ ನೊಣಗಳು ಕಾಣಿಸಿಕೊಳ್ಳುವುದಿಲ್ಲ.

ದಾಲ್ಚಿನ್ನಿ ಪುಡಿ: ನೊಣಗಳನ್ನು ತೊಡೆದುಹಾಕಲು ದಾಲ್ಚಿನ್ನಿ ಕೂಡ ತುಂಬಾ ಉಪಯುಕ್ತವಾಗಿದೆ. ಮೊದಲು, ಕೆಲವು ದಾಲ್ಚಿನ್ನಿ ತುಂಡುಗಳನ್ನು ತೆಗೆದುಕೊಂಡು ಅವುಗಳನ್ನು ಮಿಕ್ಸಿಯಲ್ಲಿ ಪುಡಿಮಾಡಿ. ನಿಮ್ಮ ಮನೆಯಲ್ಲಿ ನೊಣಗಳು ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ಈ ಪುಡಿಯನ್ನು ಸ್ವಲ್ಪ ಪ್ರಮಾಣದಲ್ಲಿ ಸಿಂಪಡಿಸಿ. ದಾಲ್ಚಿನ್ನಿಯ ವಾಸನೆಯು ನೊಣಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: ಸೊಳ್ಳೆಯ ಕಾಟದಿಂದ ಪಾರಾಗಲು ಮನೆಯಲ್ಲಿ ಗಿಡಗಳನ್ನು ನೆಡುವುದು ಉತ್ತಮ

ಬೆಳ್ಳುಳ್ಳಿ ಮತ್ತು ಪುದೀನ ರಸ: ಕೆಲವು ಬೆಳ್ಳುಳ್ಳಿ ಎಸಳುಗಳನ್ನು ಕುದಿಸಿ, ನೀರನ್ನು ಸೋಸಿ, ಪುದೀನಾ ಎಣ್ಣೆಯೊಂದಿಗೆ ಬೆರೆಸಿ ಸ್ಪ್ರೇ ಮಾಡಿ. ಈ ಮಿಶ್ರಣವನ್ನು ಮನೆಯ ಮೂಲೆಗಳು, ಕಿಟಕಿಗಳು ಮತ್ತು ಬಾಗಿಲುಗಳ ಮೇಲೆ ಸಿಂಪಡಿಸಿ. ಬೆಳ್ಳುಳ್ಳಿ ಮತ್ತು ಪುದೀನದ ಬಲವಾದ ವಾಸನೆಯು ನೊಣಗಳು ಮತ್ತು ಸೊಳ್ಳೆಗಳನ್ನು ತೊಡೆದು ಹಾಕಲು ತುಂಬಾನೇ ಸಹಕಾರಿಯಾಗಿದೆ.

ಮನೆಯನ್ನು ಸ್ವಚ್ಛವಾಗಿಡಿ: ನೊಣಗಳು ಕಸ, ಆಹಾರದ ಅವಶೇಷಗಳು ಮತ್ತು ಸ್ವಚ್ಛವಲ್ಲದ ಪ್ರದೇಶಗಳತ್ತ ಹೆಚ್ಚು ಆಕರ್ಷಿತವಾಗುತ್ತವೆ. ಆದ್ದರಿಂದ, ನಿಮ್ಮ ಮನೆಯನ್ನು, ವಿಶೇಷವಾಗಿ ನಿಮ್ಮ ಅಡುಗೆಮನೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಮತ್ತು ಕಸಗಳನ್ನು ಆಗಾಗ್ಗೆ ವಿಲೇವಾರಿ ಮಾಡುತ್ತಿರಿ.

ಈ ಸಸ್ಯಗಳು ಪ್ರಯೋಜನಕಾರಿ: ತುಳಸಿ, ಪುದೀನ ಮತ್ತು ಲ್ಯಾವೆಂಡರ್‌ನಂತಹ ಕೆಲವು ಸಸ್ಯಗಳು ನೈಸರ್ಗಿಕ ಕೀಟ-ನಿವಾರಕ ಗುಣಗಳನ್ನು ಹೊಂದಿವೆ. ನೊಣಗಳು ನಿಮ್ಮ ಮನೆಗೆ ಪ್ರವೇಶಿಸುವುದನ್ನು ತಡೆಯಲು, ಕಿಟಕಿಗಳು ಅಥವಾ ಪ್ರವೇಶದ್ವಾರಗಳ ಬಳಿ ಪಾಟ್‌ಗಳಲ್ಲಿ ಈ ಸಸ್ಯಗಳನ್ನಿಡಿ. ಇದು ನೊಣಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us