ಮಳೆಗಾಲ ಯಾರಿಗೆ ಇಷ್ಟವಿಲ್ಲ ಹೇಳಿ. ಈ ಋತುವಿನಲ್ಲಿನ ತಂಪಾದ ವಾತಾವರಣ, ಜಿಟಿಜಿಟಿ ಮಳೆ ಇವೆಲ್ಲವನ್ನೂ ಎಲ್ಲರೂ ಇಷ್ಟಪಡುತ್ತಾರೆ. ಆದರೆ ಇಂತಹ ತಂಪಿನ ವಾತವಾರಣದಲ್ಲಿ ಬಟ್ಟೆಗಳನ್ನು ಒಣಗಿಸುವುದು ಒಂದು ದೊಡ್ಡ ಸವಾಲಾಗಿದೆ. ಮಳೆಗಾಲದಲ್ಲಿ ಒಗೆದ ಬಟ್ಟೆಗಳನ್ನು ಒಣಗಿಸುವುದು ಹೇಗೆ ಎಂಬ ಚಿಂತೆ ಒಂದೆಡೆಯಾದರೆ, ಆ ಬಟ್ಟೆಗಳು ದುರ್ವಾಸನೆ ಬಾರದಂತೆ ನೋಡಿಕೊಳ್ಳುವುದು ಹೇಗೆ ಎಂಬುದು ಇನ್ನೊಂದು ದೊಡ್ಡ ಸಮಸ್ಯೆಯಾಗಿದೆ. ವಾಸ್ತವವಾಗಿ ಮಳೆಯ ಸಮಯದಲ್ಲಿ ಕೊಳಕು ಶಿಲೀಂದ್ರಗಳು ಮತ್ತು ಬ್ಯಾಕೀರಿಯಾಗಳು ನಮ್ಮ ಬಟ್ಟೆಗಳ ಮೇಲೆ ಹೆಚ್ಚು ಸಂಗ್ರಹವಾಗುತ್ತದೆ. ಮತ್ತು ಇದರಿಂದ ನಾವು ಅನಾರೋಗ್ಯಕ್ಕೂ ಒಳಗಾಗಬಹುದು. ಇದರೊಂದಿಗೆ ಬಟ್ಟೆಗಳನ್ನು ಸರಿಯಾಗಿ ಒಣಗಿಸದಿದ್ದರೆ ದುರ್ವಾಸನೆ ಬರಲಾರಂಭಿಸುತ್ತದೆ. ಹಾಗಾಗಿ ಈ ಮಾನ್ಸೂನ್ ಋತುವಿನಲ್ಲಿ ಅಗತ್ಯವಾಗಿ ಬಟ್ಟೆಗಳ ಸುಚಿತ್ವವನ್ನು ಕಾಪಾಡಿಕೊಳ್ಳಬೇಕು.
ಮಳೆಗಾಲದಲ್ಲಿ ನೀವು ಹೊರಗಡೆ ಒದ್ದೆಯಾಗಿ ಬಂದರೆ, ಆ ಬಟ್ಟೆಗಳನ್ನು ತಕ್ಷಣ ಒಗೆಯಿರಿ. ಅಲ್ಲದೆ ಒದ್ದೆಯಾದ ಮತ್ತು ಕೊಳಕು ಬಟ್ಟೆಗಳನ್ನು ನಾಳೆ ಅಥವಾ ಮುಂದಿನ ಬಾರಿ ಒಗೆಯುವ ಸಲುವಾಗಿ ಲಾಂಡ್ರಿ ಬ್ಯಾಗ್ ಅಥವಾ ಬಕೆಟ್ಗಳಲ್ಲಿ ಹಾಕಿಡುವುದು ಕೆಟ್ಟ ಅಭ್ಯಾಸವಾಗಿದೆ. ವಾಸ್ತವವಾಗಿ ಹೀಗೆ ಮಾಡುವುದರಿಂದ, ಸೂಕ್ಷ್ಮಾಣು ಜೀವಿಗಳು ಮತ್ತು ಕೆಟ್ಟ ವಾಸನೆಯು ಬಟ್ಟೆಯ ಮೇಲೆ ಹಾಗೆಯೇ ಉಳಿದುಕೊಳ್ಳುತ್ತದೆ. ಅಲ್ಲದೆ ಇದರಿಂದ ಬಟ್ಟೆಯ ಗುಣಮಟ್ಟವೂ ಹಾಳಾಗಿಬಿಡುತ್ತದೆ. ಆದ್ದರಿಂದ ಒದ್ದೆ ಬಟ್ಟೆಗಳನ್ನು ತಕ್ಷಣ ಒಗೆಯುವ ಮೂಲಕ ಅವುಗಳ ಸ್ವಚ್ಛತೆಯನ್ನು ಕಾಪಾಡಿ.
ಮಳೆಗಾಲದಲ್ಲಿ ಬಟ್ಟೆಯ ವಾಸನೆಯನ್ನು ಹೋಗಲಾಡಿಸಲು, ಬಟ್ಟೆ ಒಗೆದ ನಂತರ ಫ್ಯಾಬ್ರಿಕ್ ಕಂಡಿಷನರ್ ಬಳಸಿ. ಹೀಗೆ ಮಾಡುವುದರಿಂದ ಮಳೆಗಾಲದಲ್ಲಿ ಬಟ್ಟೆಗಳಿಂದ ಬರುವ ದುರ್ವಾಸನೆಯನ್ನು ತಡೆಯಬಹುದು. ಕಂಫರ್ಟ್, ಸಾಫ್ಟ್ ಟಚ್ ಇತ್ಯಾದಿ ಫ್ಯಾಬ್ರಿಕ್ ಕಂಡಿಷನರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಳೆಗಾಲದಲ್ಲಿ ಮಾತ್ರವಲ್ಲದೆ ಇತರ ಋತುವಿನಲ್ಲೂ ಬಟ್ಟೆಗಳಿಂದ ಸೂಸುವ ವಾಸನೆಯನ್ನು ತಡೆಗಟ್ಟಲು ಪರಿಮಳಯುಕ್ತ ಮಾರ್ಜಕಗಳನ್ನು ಬಳಸುವುದು ಸೂಕ್ತವಾಗಿದೆ.
ಇದನ್ನೂ ಓದಿ:Healthy soups for the Monsoon: ಮಳೆಗಾಲದಲ್ಲಿ ಈ ಸೂಪ್ಗಳನ್ನು ಸೇವಿಸಿ, ರೋಗನಿರೋಧಕ ಶಕ್ತಿ ಹೆಚ್ಚಿಸಿ
ಬಟ್ಟೆ ಒಗೆದ ಬಳಿಕ ಅವುಗಳನ್ನು ಕೈಗಳಿಂದ ಹಿಂಡುವ ಬದಲು ವಾಷಿಂಗ್ ಮೆಷಿನ್ ನಲ್ಲಿರುವ ಡ್ರೆಯರ್ ನಲ್ಲಿ ಹಾಕಿಬಿಡಿ. ಹೀಗೆ ಮಾಡುವುದರಿಂದ ಬಟ್ಟೆಗಳು ಬೇಗನೆ ಒಣಗುತ್ತವೆ. ಅಲ್ಲದೆ ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಧರಿಸುವುದನ್ನು ತಪ್ಪಿಸಿ. ತೊಳೆದ ಬಟ್ಟೆಗಳು ಸಂಪೂರ್ಣವಾಗಿ ಒಣಗಿದ ಬಳಿಕ ಅವುಗಳಿಗೆ ಇಸ್ತ್ರಿ ಮಾಡಿ ನಂತರವೇ ಅವುಗಳನ್ನು ಕಪಾಟುಗಳಲ್ಲ್ಲಿ ಜೋಡಿಸಿರಿ.
ಮಳೆಗಾಲದಲ್ಲಿ ಬಟ್ಟೆ, ಬೂಟುಗಳು ಸ್ವಲ್ಪ ಒದ್ದೆಯಾದರೂ ಅವುಗಳಿಂದ ದುರ್ವಾಸನೆ ಹೊರಸೂಸುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ಸುಲಭವಾದ ಮಾರ್ಗವೆಂದರೆ ಕೆಲವು ಕರ್ಪೂರದ ತುಂಡುಗಳನ್ನು ಕಪಾಟುಗಳು, ಶೂ ಕ್ಯಾಬಿನೆಟ್ ಗಳಲ್ಲಿ ಇಡಿ. ಹೀಗೆ ಮಾಡುವುದರಿಂದ ದುರ್ವಾಸೆಯನ್ನು ಹೋಗಲಾಡಿಸಬಹುದು.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ