Vitamin D in Monsoon: ಮಳೆಗಾಲದಲ್ಲಿ ವಿಟಮಿನ್ ಡಿ ಪೋಷಕಾಂಶ ಪಡೆಯುವುದು ಹೇಗೆ? ಇಲ್ಲಿವೆ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 21, 2023 | 4:25 PM

ಮಳೆಗಾಲದಲ್ಲಿ ಆಕಾಶದಲ್ಲಿ ದಟ್ಟವಾಗಿ ಮೋಡಗಳು ಆವರಿಸುವ ಕಾರಣ ಸೂರ್ಯನ ಬೆಳಕು ಭೂಮಿಯ ಮೇಲೆ ಬೀಳುವುದು ತೀರಾ ವಿರಳ. ಅಂತಹ ಪರಿಸ್ಥಿತಿಯಲ್ಲಿ ನಮ್ಮ ದೇಹವು ಸೂರ್ಯನ ಬೆಳಕಿನಿಂದ ಪಡೆಯುವ ನೈಸರ್ಗಿಕ ವಿಟಮಿನ್ ಡಿ ಪೋಷಕಾಂಶದ ಪ್ರಮಾಣವು ಕಡಿಮೆಯಾಗುತ್ತದೆ. ಹೀಗಿರುವಾಗ ಮಳೆಗಾಲದಲ್ಲಿ ವಿಟಮಿನ್ ಡಿ ಪೋಷಕಾಂಶವನ್ನು ಹೇಗೆ ಪಡೆಯುವುದು ಎಂದು ಚಿಂತೆಗಿಡಾಗಿದ್ದೀರಾ? ಯೋಚಿಸಬೇಡಿ ಇಲ್ಲಿವೆ ಕೆಲವು ಪರಿಹಾರಗಳು.

Vitamin D in Monsoon: ಮಳೆಗಾಲದಲ್ಲಿ ವಿಟಮಿನ್ ಡಿ ಪೋಷಕಾಂಶ ಪಡೆಯುವುದು ಹೇಗೆ? ಇಲ್ಲಿವೆ ಸಲಹೆ
ಸಾಂದರ್ಭಿಕ ಚಿತ್ರ
Follow us on

ವಿಟಮಿನ್ ಡಿ ನಮ್ಮ ದೇಹಕ್ಕೆ ಬೇಕಾಗಿರುವ ಅಗತ್ಯ ಪೋಷಕಾಂಶಗಳಲ್ಲಿ ಒಂದಾಗಿದೆ. ಇದು ಕ್ಯಾಲ್ಸಿಯಂ ನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ ಸ್ನಾಯುಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಸಹಕಾರಿಯಾಗಿದೆ. ಅಷ್ಟೇ ಅಲ್ಲ, ಮೆದುಳಿನಿಂದ ನರಗಳ ಮೂಲಕ ದೇಹಕ್ಕೆ ಸಂದೇಶವನ್ನು ರವಾನಿಸಲು ವಿಟಮಿನ್ ಡಿ ಸಹಾಯ ಮಾಡುತ್ತದೆ. ಹಾಗೂ ಬಲವಾದ ರೋಗನಿರೋಧಕ ಶಕ್ತಿಗಾಗಿ ವಿಟಮಿನ್ ಡಿ ಪೋಷಕಾಂಶವು ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿದೆ. ಬೆಳಗ್ಗಿನ ಸಮಯದಲ್ಲಿ ಸೂರ್ಯನ ಬೆಳಕಿಗೆ ದೇಹವನ್ನು ಒಡ್ಡಿಕೊಳ್ಳುವ ಮೂಲಕ ವಿಟಮಿನ್ ಡಿ ಪೋಷಕಾಂಶನ್ನು ನೈಸರ್ಗಿಕವಾಗಿ ಪಡೆಯಬಹುದು. ಆದರೆ ಮಳೆಗಾಲದಲ್ಲಿ ನಿರಂತರವಾಗಿ ಮೋಡಕವಿದ ವಾತಾವರಣ ಇರುವ ಕಾರಣ ಸೂರ್ಯನ ಕಿರಣಗಳು ಭೂಮಿಗೆ ಅಷ್ಟೊಂದು ಬೀಳುವುದಿಲ್ಲ. ಅಂತಹ ಸಮಯದಲ್ಲಿ ನಾವು ನೈಸರ್ಗಿಕವಾಗಿ ವಿಟಮಿನ್ ಡಿ ಪೋಷಕಾಂಶವನ್ನು ಪಡೆಯಲು ಕಷ್ಟಕರವಾಗುತ್ತದೆ. ಹೀಗಿರುವಾಗ ಕೆಲವು ಪರ್ಯಾಯ ಮಾರ್ಗಗಳ ಮೂಲಕ ವಿಟಮಿನ್ ಡಿ ಪೋಷಕಾಂಶವನ್ನು ಪಡೆಯಬಹುದು. ಮಳೆಗಾಲದಲ್ಲಿ ವಿಟಮಿನ್ ಡಿ ಕೊರತೆಯನ್ನು ನೀಗಿಸಲು ಇಲ್ಲಿವೆ ಕೆಲವು ಪರಿಹಾರಗಳು.

ಮಳೆಗಾಲದಲ್ಲಿ ವಿಟಮಿನ್ ಡಿ ಕೊರತೆಯನ್ನು ನೀಗಿಸುವುದು ಹೇಗೆ:

ಪ್ರಸ್ತುತ ಭಾರತದಲ್ಲಿ ಮಳೆಗಾಲ ನಡೆಯುತ್ತಿದೆ. ಇಂತಹ ಸಮಯದಲ್ಲಿ ಮೋಡಕವಿದ ವಾತಾವರಣದ ಕಾರಣ ಸೂರ್ಯನ ಕಿರಣಗಳು ಭೂಮಿಗೆ ಬೀಳುವುದೇ ಅಪರೂಪವಾಗಿಬಿಟ್ಟಿದೆ. ಹಾಗಾಗಿ ಈ ಸಮಯದಲ್ಲಿ ಸೂರ್ಯನ ಕಿರಣಗಳಿಂದ ಲಭಿಸುವ ನೈಸರ್ಗಿಕ ವಿಟಮಿನ್ ಡಿ ಪೋಷಕಾಂಶವನ್ನು ಪಡೆಯುವುದು ಕಷ್ಟಸಾಧ್ಯವಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೆಲವು ಪರ್ಯಾಯ ಮಾರ್ಗಗಳ ಮೂಲಕ ವಿಟಮಿನ್ ಡಿ ಕೊರತೆಯನ್ನು ನೀಗಿಸಬಹುದಾಗಿದೆ:

ಆಹಾರ ಪದ್ಧತಿ:

ಕೆಲವೊಂದು ಆಹಾರಗಳನ್ನು ಸೇವನೆ ಮಾಡುವ ಮೂಲಕ ಈ ಮಳೆಗಾಲದಲ್ಲಿ ವಿಟಮಿನ್ ಡಿ ಪೋಷಕಾಂಶವನ್ನು ಪಡೆಯಬಹುದು. ಇದಕ್ಕಾಗಿ ಮೀನು ಅಥವಾ ಮೀನಿನ ಎಣ್ಣೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇದಲ್ಲದೆ ಮೊಟ್ಟೆಯ ಹಳದಿ ಭಾಗ, ಅಣಬೆ, ಚೀಸ್ ನಂತಹ ಕೆಲವು ಆಹಾರಗಳನ್ನು ತಿನ್ನುವ ಮೂಲಕ ವಿಟಮಿನ್ ಡಿ ಪೋಷಕಾಂಶವನ್ನು ಪಡೆದುಕೊಳ್ಳಬಹುದು.

ಪೂರಕಗಳು:

ನಿಮ್ಮ ಆಹಾರದಲ್ಲಿ ವಿಟಮಿನ್ ಡಿ ಯಿಂದ ಸಮೃದ್ಧವಾಗಿರುವ ಆಹಾರವನ್ನು ಸೇರಿಸಲು ಸಾಧ್ಯವಾಗದಿದ್ದರೆ, ಅಂತಹ ಜನರು ವೈದ್ಯರ ಸಲಹೆಯೊಂದಿಗೆ ವಿಟಮಿನ್ ಡಿ ಮಾತ್ರೆಗಳನ್ನು ತೆಗೆದುಕೊಳ್ಳಬಹುದು.

ಪೂರಕಗಳನ್ನು ಯಾವಾಗ ತೆಗೆದುಕೊಳ್ಳಬೇಕು: ಅನೇಕ ಜನರು ಈಗಲೇ ಪೂರಕಗಳು ಅಗತ್ಯವಿದೆಯೇ ಅಥವಾ ಇಲ್ಲವೇ ಎಂದು ತಿಳಿಯದೆ ಪೂರಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಹೀಗೆ ಮಾಡುವುದು ತಪ್ಪು. ನೀವು ವಿಟಮಿನ್ ಡಿ ಕೊರತೆಯನ್ನು ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ವೈದ್ಯರ ಬಳಿ ಹೋಗಿ ಪರೀಕ್ಷಿಸುವುದು ಬಹಳ ಮುಖ್ಯ. ರಕ್ತ ಪರೀಕ್ಷೆಯಲ್ಲಿ ವಿಟಮಿನ್ ಡಿ ಕೊರತೆಯ ಮಟ್ಟವನ್ನು ಪರಿಶೀಲಿಸಿದ ಬಳಿಕ ವೈದ್ಯರ ಸಲಹೆಯ ಮೇರೆಗೆ ಪೂರಕಗಳನ್ನು ತೆಗೆದುಕೊಳ್ಳಿ.

ಇದನ್ನೂ ಓದಿ: ದೇಹದಲ್ಲಿ ವಿಟಮಿನ್ ಡಿ ಕೊರತೆಯುಂಟಾಗಲು ಕಾರಣಗಳೇನು? ಇಲ್ಲಿದೆ ಮಾಹಿತಿ

ನಾವು ಹೆಚ್ಚು ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಂಡರೆ ಏನಾಗುತ್ತದೆ:

ಹೆಚ್ಚು ವಿಟಮಿನ್ ಡಿ ಪೂರಕಗಳನ್ನು ತೆಗೆದುಕೊಳ್ಳುವುದು ಸಹ ಹಾನಿಕಾರಕವಾಗಿದೆ. ರಕ್ತದಲ್ಲಿನ ಹೆಚ್ಚಿನ ಮಟ್ಟದ ವಿಟಮಿನ್ ಸಹ ವಾಕರಿಕೆ, ವಾಂತಿ, ಸ್ನಾಯು ದೌರ್ಬಲ್ಯ, ಹಸಿವಿನ ಕೊರತೆ, ನಿರ್ಜಲೀಕರಣ, ಅತಿಯಾದ ಮೂತ್ರ ವಿಸರ್ಜನೆ, ಬಾಯಾರಿಕೆ ಮತ್ತು ಮೂತ್ರ ಪಿಂಡದ ಕಲ್ಲುಗಳಂತ ಸಮಸ್ಯೆಗಳಿಗೆ ಕಾರಣವಾಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: