ನಗು ಹಾಗೂ ಅಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೆಚ್ಚಿನವರು ಅಳುವಿಗಿಂತ ನಗುವನ್ನೇ ಇಷ್ಟ ಪಡುತ್ತಾರೆ. ತಾವು ಸಂತೋಷವಾಗಿರುವುದಲ್ಲದೆ ತಮ್ಮ ಸುತ್ತ ಮುತ್ತಲಿನವರನ್ನು ಖುಷಿಯಿಂದ ಇರಲು ಪ್ರಯತ್ನಿಸುವವರು ಇದ್ದಾರೆ. ಈ ಮೂರು ದಿನದ ಬದುಕಿನಲ್ಲಿ ಏನೇ ಬಂದರೂ ನಗುತ್ತಲೇ ಎದುರಿಸಬೇಕು. ಎಷ್ಟೇ ದುಡ್ಡಿರುವ ವ್ಯಕ್ತಿಯು ಬಯಸುವುದೊಂದೇ ನೆಮ್ಮದಿಯುತ ಹಾಗೂ ಸಂತೋಷದಾಯಕವಾದ ಬದುಕು ಮಾತ್ರ. ಈ ಸಂತೋಷಕ್ಕೆ ಬೆಲೆಕಟ್ಟಲಾಗದ್ದು, ದುಡ್ಡು ಕೊಟ್ಟರೂ ಈ ಖುಷಿಯನ್ನು ಯಾರಿಗೂ ಕೂಡ ಖರೀದಿ ಮಾಡಲು ಸಾಧ್ಯವಿಲ್ಲ. ತಮ್ಮ ಜೀವನದ ಸಂತೋಷವನ್ನು ತಮ್ಮಲ್ಲಿಯೇ ತಾವೇ ಕಂಡುಕೊಳ್ಳಬೇಕು. ಪ್ರತಿಯೊಬ್ಬರು ಜೀವನದಲ್ಲಿ ಖುಷಿಯನ್ನು ಕಂಡುಕೊಳ್ಳಬೇಕು ಎನ್ನುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಸಂತೋಷ ದಿನವನ್ನು ಪ್ರತಿವರ್ಷ ಮಾರ್ಚ್ 20ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ.
ಜೀವನದ ಬಹುದೊಡ್ಡ ಅಸ್ತಿಯೇ ಖುಷಿ ಹಾಗೂ ನೆಮ್ಮದಿಯುತ ಬದುಕು. ಈ ಸಂತೋಷಕ್ಕಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ. ವಿಶ್ವದಾದ್ಯಂತ ಪ್ರತಿವರ್ಷ ಮಾರ್ಚ್ 20ರಂದು ಅಂತಾರಾಷ್ಟ್ರೀಯ ಸಂತೋಷದಿನವನ್ನು ಆಚರಿಸಲಾಗುತ್ತದೆ. ಆದರೆ ಈ ದಿನವನ್ನು ಆಚರಿಸುವುದಕ್ಕೂ ಮೊದಲು ವರ್ಲ್ಡ್ ಹ್ಯಾಪಿನೆಸ್ ಫೌಂಡೇಶನ್‌ನ ಅಧ್ಯಕ್ಷ ಲೂಯಿಸ್ ಗಲ್ಲಾರ್ಡೊ ಹಾಗೂ ಜೇಮ್ ಇಲಿಯನ್ ʼಹ್ಯಾಪಿಟಲಿಸಂʼ ಅನ್ನು ಸ್ಥಾಪಿಸಿದರು. ಸಂತೋಷ, ಯೋಗಕ್ಷೇಮ ಮತ್ತು ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಇಲಿಯನ್ 2006 ರಿಂದ 2012ರವರೆಗೆ ವಿಶ್ವಸಂಸ್ಥೆಯಲ್ಲಿ ಅಭಿಯಾನವನ್ನು ನಡೆಸಿದ್ದರು. ಆದರೆ ಕೊನೆಗೆ ಅಂತಾರಾಷ್ಟ್ರೀಯ ಸಂತೋಷ ದಿನವನ್ನು 2012ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಘೋಷಿಸಿತು. ಆದಾದ ಬಳಿಕ 2013ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಂತೋಷ ದಿನವನ್ನು ಆಚರಿಸಲಾಯಿತು.
ಇದನ್ನೂ ಓದಿ: ಅರಶಿನ ಶಾಸ್ತ್ರಕ್ಕೆ ಕಡಿಮೆ ವೆಚ್ಚದಲ್ಲಿ ಮನೆಯನ್ನು ಸಾಂಪ್ರದಾಯಿಕವಾಗಿ ಅಲಂಕರಿಸಿಕೊಳ್ಳುವುದು ಹೇಗೆ?
ಪ್ರತಿ ವರ್ಷ ಮಾರ್ಚ್ 20 ರಂದು ಅಂತಾರಾಷ್ಟ್ರೀಯ ಸಂತೋಷ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಂತೋಷವಾಗಿ ಇರುವುದರಿಂದ ಆಗುವ ಲಾಭಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ವಿಶ್ವಸಂಸ್ಥೆಯ ಸಸ್ಟೈನಬಲ್ ಡೆವಲಪ್‌ಮೆಂಟ್ ಸಲ್ಯೂಷನ್ಸ್ ನೆಟ್‌ವರ್ಕ್ ಸಂಸ್ಥೆಯ ವರ್ಲ್ಡ್ ಹ್ಯಾಪಿನೆಸ್ 2023 ವರದಿ ಪ್ರಕಾರ ಫಿನ್ ಲ್ಯಾಂಡ್ ದೇಶವು ಸಂತೋಷದ ವಿಚಾರದಲ್ಲಿ ವಿಶ್ವದ ನಂ 1 ಸ್ಥಾನವನ್ನು ಪಡೆದುಕೊಂಡಿದೆ. ಎರಡನೇ ನೇ ಸ್ಥಾನದಲ್ಲಿ ಡೆನ್ಮಾರ್ಕ್, ಮೂರನೇ ಸ್ಥಾನದಲ್ಲಿ ಐಸ್‌ಲ್ಯಾಂಡ್ ಹಾಗೂ ಇಸ್ರೇಲ್ ನಾಲ್ಕನೇ ಸ್ಥಾನವನ್ನು ಗಳಿಸಿಕೊಂಡಿದೆ. 155 ದೇಶಗಳಲ್ಲಿ ಭಾರತವು ಸಂತೋಷದ ದೇಶಗಳ ಸಾಲಿನಲ್ಲಿ 126 ನೇ ಸ್ಥಾನವನ್ನು ಪಡೆದುಕೊಂಡಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ